Advertisement

ರಸ್ತೆ ಅಗಲೀಕರಣದ ನೆಪದಲ್ಲಿ ಮರಗಳ ಕಡಿತ

03:29 PM Feb 02, 2020 | Naveen |

ಭದ್ರಾವತಿ: ರಸ್ತೆ ಅಗಲೀಕರಣದ ನೆಪದಲ್ಲಿ ಕೋರ್ಟ್‌, ತಾಲೂಕು ಕಚೇರಿ ಮುಂದಿನ ರಸ್ತೆಗಳ ಬದಿಯಿದ್ದ ನೂರಾರು ವರ್ಷದಿಂದ ಎಲ್ಲರಿಗೂ ನೆರಳು ನೀಡುತ್ತಿದ್ದ ಬೃಹತ್‌ ಗಾತ್ರದ ಗಟ್ಟಿಮುಟ್ಟಾದ ಮರಗಳನ್ನು ಶನಿವಾರ ಕಡಿದು ಹಾಕಲಾಯಿತು.

Advertisement

ಈ ಹಿಂದೆ ರಂಗಪ್ಪ ವೃತ್ತದಿಂದ ಹೊಸಮನೆ ಶಿವಾಜಿ ವೃತ್ತದವರಗೆ ರಸ್ತೆ ಅಗಲೀಕರಣದ ನೆಪದಲ್ಲಿ ರಸ್ತೆ ಬದಿಯಲ್ಲಿದ್ದ ಅಸಂಖ್ಯಾತ ಮರಗಳನ್ನು ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆಯವರು ಕಡಿದು ಹಾಕಿದ್ದರು. ಆದರೆ ರಸ್ತೆ ಕಾಮಗಾರಿ ವೇಳೆ ರಸ್ತೆ ಅಗಲೀಕರಣ ಮಾಡದೆ ಇದ್ದ ರಸ್ತೆಯ ವಿಸ್ತೀರ್ಣವನ್ನೇ ಅಲ್ಪಸ್ವಲ್ಪ ಅಗಲೀಕರಣ ಮಾಡಿದಂತೆ ಮಾಡಿ ರಸ್ತೆ ಕಾಮಗಾರಿಯನ್ನು ಕಾಟಾಚಾರಕ್ಕೆ ಮಾಡಿ ಮುಗಿಸಿದ್ದರು. ಆ ರೀತಿ ರಸ್ತೆ ಅಗಲೀಕರಣಕ್ಕೆ ಇದ್ದ ಮರಗಳನ್ನು ಕಡಿಯುವ ಅಗತ್ಯವಿರಲಿಲ್ಲವಾದರೂ ಜನರಿಗೆ ನೆರಳು ಕೊಡುತ್ತಿದ್ದ 40ಕ್ಕೂ ಅಧಿಕ ಮರಗಳನ್ನು ಕಡಿದು ಹಾಕಿದರು. ಈಗ ಅದೇ ರೀತಿ ಹೊಸ ಬ್ರಿಡ್ಜ್ನಿಂದ ರಂಗಪ್ಪ ವೃತ್ತದವರೆಗೆ ರಸ್ತೆ ಅಗಲೀಕರಣದ ನೆಪದಲ್ಲಿ ಶನಿವಾರ ಕೋರ್ಟ್‌ ರಸ್ತೆಯಲ್ಲಿ ತಾಪಂ ಮುದಿನ ರಸ್ತೆಬದಿಯ ಬೃಹತ್‌ ಗಾತ್ರದ ಮರಗಳನ್ನು ಕಡಿದು ಸಾಗಿಸಲಾಯಿತು.

ರಸ್ತೆ ಅಗಲೀಕರಣ ಕೇವಲ ನೆಪಮಾತ್ರ: ಮರಗಳನ್ನು ಕಡಿಯಲು ರಸ್ತೆ ಅಗಲೀಕರಣವನ್ನು ನೆಪ ಮಾಡಲಾಗಿದ್ದು ಆಗುತ್ತಿರುವ ರಸ್ತೆ ಕಾಮಗಾರಿ ವಿಸ್ತೀರ್ಣವನ್ನು ಗಮನಿಸಿದರೆ ಈ ಮರಗಳನ್ನು ಕಡಿಯುವ ಅಗತ್ಯತೆ ಇರಲಿಲ್ಲ. ಆದರೂ ಮರಗಳನ್ನು ಕಡಿದು ಹಾಕಲಾಗುತ್ತಿದೆ.

ಕಾಮಗಾರಿ ಪರಿಶೀಲನೆ ಅಗತ್ಯ: ರಸ್ತೆ ಅಗಲೀಕರಣ ಕಾಮಗಾರಿ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಕಾಮಗಾರಿಗೆ ಬಳಸಲಾಗುತ್ತಿರುವ ಕಲ್ಲು, ಜಲ್ಲಿಪುಡಿ, ಮರಳು, ಸಿಮೆಂಟ್‌ ಎಲ್ಲವೂ ಸರಿಯಾದ ಪ್ರಮಾಣದಲ್ಲಿ ಇದ್ದಂತೆ ತೋರುವುದಿಲ್ಲ. ಈ ಬಗ್ಗೆ  ಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಆರಂಭದಲ್ಲಿಯೇ ಪರಶೀಲಿಸುವ ಅಗತ್ಯವಿದೆ. ಈ ಹಿಂದೆ ಹಳೇನಗರ ಪೊಲೀಸ್‌ ಠಾಣೆಯ ರಸ್ತೆ
ಕಾಮಗಾರಿ ಸರಿ ಇಲ್ಲದಿರುವುದನ್ನು ರಸ್ತೆ ಪೂರ್ಣ ಆದ ನಂತರ ಗಮನಿಸಿ ಅದನ್ನು ಪುನಃ ಒಡೆದು ಹಾಕಿ ಹೊಸದಾಗಿ ರಸ್ತೆ ನಿರ್ಮಾಣ ಮಾಡಲಾಯಿತು. ಆದ್ದರಿಂದ ಈ ಬಾರಿ ಆ ರೀತಿ ಆಗಬಾರದೆಂಬ ಉದ್ದೇಶವಿದ್ದರೆ ಸಂಬಂಧಪಟ್ಟ ಇಲಾಖೆಯವರು ಈಗಲೇ ಕೋರ್ಟ್‌ ರಸ್ತೆಯ ಕಾಮಗಾರಿ ಸೇರಿದಂತೆ ನಗರದ ವಿವಿಧೆಡೆಗಳಲ್ಲಿನ ರಸ್ತೆ ಕಾಮಗಾರಿಗಳಿಗೆ ಬಳಸುತ್ತಿರುವ ಸಾಮಗ್ರಿಗಳ ಮಿಶ್ರಣ ಸರಿಯಾದ ಪ್ರಮಾಣದಲ್ಲಿದೆಯೆ? ಗುಣಮಟ್ಟದ ಕಾಮಗಾರಿಯಾಗುತ್ತಿದೆಯೇ? ಎಂಬುದನ್ನು ಪರೀಕ್ಷಿಸುವ ಅಗತ್ಯವಿದೆ.

ಸಂಚಾರಕ್ಕೆ ತೊಂದರೆ: ಕೋರ್ಟ್‌ ರಸ್ತೆಯಲ್ಲಿ ತಾಲೂಕು ಕಚೇರಿ, ತಾಪಂ ಕಚೇರಿ, ಆಸ್ಪತ್ರೆ, ಕಲ್ಯಾಣ ಮಂಟಪ, ಶಾಲಾ- ಕಾಲೇಜುಗಳು ಇರುವುದರಿಂದ ಪ್ರತಿನಿತ್ಯ ಸಾವಿರಾರು ಜನರು, ವಿದ್ಯಾರ್ಥಿಗಳು ಸಂಚರಿಸುವ ರಸ್ತೆಯಾಗಿರುವುದರಿಂದ ರಸ್ತೆ ನಿರ್ಮಾಣ ಶೀಘ್ರವಾಗಿ ನಡೆಯಬೇಕಾದ ಅಗತ್ಯವಿದೆ. ಆದರೆ ನಡೆಯುತ್ತಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ.

Advertisement

ವಾಹನ ಸವಾರರ ಸರ್ಕಸ್‌: ರಸ್ತೆ ಕಾಮಗಾರಿಗೆ ರಸ್ತೆಯ ಅರ್ಧ ಭಾಗವನ್ನು ಹೊಸಸೇತುವೆಯಿಂದ ಕೋರ್ಟ್‌ ಮುಂಭಾಗದವರಿಗೆ ಕೆತ್ತಿ ಹಾಕಲಾಗಿದ್ದು, ಉಳಿದ ಅರ್ಧಭಾಗದ ರಸ್ತೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಸಂಚಾರ ಬಹಳ ಕಷ್ಟಕರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next