ಭದ್ರಾವತಿ: ಎಲ್ಲೆಡೆ ಕೊರೊನಾ ರೋಗದ ಭೀತಿಯಿಂದ ಜನರು ತತ್ತರಿಸುತ್ತಾ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದರೆ, ಇಲ್ಲಿನ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಸ್ವಚ್ಛತೆಯ ಬಗ್ಗೆ ಇಲ್ಲಿನ ಅಧಿಕಾರಿಗಳು ಸೂಕ್ತ ಗಮನ ಹರಿಸದ ಕಾರಣ ದುರ್ನಾತ ಗಾಳಿಯಲ್ಲಿ ತೇಲಿ ಬಂದು ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ಮೂಗಿಗೆ ರಾಚುವಂತಾಗಿದೆ.
ಪ್ರತಿ ನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಪ್ರಯಾಣ ಮಾಡಲು ಇಲ್ಲಿ ಬಂದು ಹೋಗುತ್ತಿರುತ್ತಾರೆ. ರಾಜ್ಯದ ಬೇರೆ,ಬೇರೆ ಸ್ಥಳಗಳಿಗೆ ಈ ಮೂಲಕ ಹಾದು ಹೋಗುವ ಬಸ್‌ಗಳು ಸಹ ಇಲ್ಲಿ ಕೆಲ ಕಾಲ ಬಂದು ನಿಂತು ಹೊರಡುತ್ತವೆ. ಈ ರೀತಿ ಇಲ್ಲಿಗೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆಂದು ಎರಡು ಶೌಚಾಲಯಗಳ ವ್ಯವಸ್ಥೆ ಇದೆ.
ಇಲ್ಲಿ ಬಸ್ ಪ್ರಯಾಣ ಮಾಡುವ ಪ್ರಯಾಣಿಕರ ಪೈಕಿ ಹಲವರು ಮಲಮೂತ್ರ ವಿಸರ್ಜನೆಗಾಗಿ ನಿಗತ ಶುಲ್ಕ ಪಾವತಿಸಿ ಇದನ್ನು ಬಳಸಿಕೊಳ್ಳುತ್ತಾರೆ. ಆದರೆ ಈ ಶೌಚಾಲಯವನ್ನು ಸೂಕ್ತವಾಗಿ ಸ್ವಚ್ಛಗೊಳಿಸಿ ಸುವ್ಯವಸ್ಥಿತವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಇಲ್ಲಿನ ಇಲಾಖಾ ಅಧಿಕಾರಿಗಳು ಮಾಡದಿರುವ ಕಾರಣ ಈ ಶೌಚಾಲಯದೊಳಗೆ ವಿಪರೀತ ದುರ್ನಾತ ತುಂಬಿಕೊಂಡು ಅದರ ದುರ್ಗಂಧ ಗಾಳಿಯಲ್ಲಿ ತೇಲಿಬಂದು ಫ್ಲ್ಯಾಟ್ ಫಾರಂನಲ್ಲಿ ಕಾಯುತ್ತಾ ನಿಂತಿರುವ ಪ್ರಯಾಣಿಕರಿಗೂ ಮೂಗು ಮುಚ್ಚಿಕೊಳ್ಳುವಂತ ವಾತವರಣ ಸೃಷ್ಟಿಸಿದೆ.
ಒಂದೆಡೆ ಸ್ವಚ್ಛ ಭಾರತದ ಲಾಂಛನವನ್ನು, ಘೋಷವಾಕ್ಯವನ್ನು ಇಲ್ಲಿನ ಕುಡಿಯುವ ನೀರಿನ ಘಟಕದ ಮೇಲೆ ಹಾಕಲಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ವಾದ ರೀತಿಯಲ್ಲಿ ಇಲಿನ ಶೌಚಾಲಯ ಶುಚಿತ್ವವಿಲ್ಲದೆ ಕೆಟ್ಟ ವಾಸನೆ ಹರಡುತ್ತಾ ಇದೆ. ಈಗಾಗಲೇ ಕೊರೊನಾ ರೋಗದ ಭೀತಿಯಿಂದ ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಜನರು ಇಲ್ಲಿನ ಬಸ್ ನಿಲ್ದಾಣದಲ್ಲಿನ ಶೌಚಾಲಯದ ದುರ್ನಾತಕ್ಕೆ ಬಟ್ಟೆಯಿಂದ ಮೂಗು ಮುಚ್ಚಿಕೊಂಡು ಇಲ್ಲಿ ಬಸ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಗು ಮುಚ್ಚಿಕೊಂಡರೂ ಆ ದುರ್ನಾತ ಮೂಗಿಗೆ ಅಡರುವಷ್ಟರ ಮಟ್ಟಿಗೆ ಇಲ್ಲಿ ಅಶುಚಿತ್ವ ಎದ್ದು ಕಾಣುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಪ್ರಯಾಣಿಕರಿಗೆ ಕೊರೊನಾ ಜೊತೆಗೆ ಬೇರೆ ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿ ಕಾರಿಗಳು ಕೂಡಲೇ ಇಲ್ಲಿನ ಶೌಚಾಲಯದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ದುರ್ಗಂಧದ ವಾತಾವರಣದ ತೊಂದರೆಯಿಂದ ಪ್ರಯಾಣಿಕರಿಗೆ ಮುಕ್ತಿ ನೀಡಬೇಕಾದ ಅಗತ್ಯವಿದೆ.
ಅದೇ ರೀತಿ ಬಸ್ ನಿಲ್ದಾಣದ ಫ್ಲ್ಯಾಟ್‌ಫಾರಂನ್ನು ಸಹ ಸರಿಯಾದ ನಿರ್ವಹಣೆ ಮಾಡುತ್ತಿಲ್ಲ. ಈ ಎಲ್ಲಾ ಅವಾಂತರಗಳನ್ನು ಬಸ್ ನಿಲ್ದಾಣದ ಮೇಲ್ವಿಚಾರಕರು ಗಮನಿಸಿ ಇಲ್ಲಿನ ಬಸ್ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಿ, ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಸುಸ್ಥಿತಿಯಲ್ಲಿಡುವ ಕಾರ್ಯ
ಮಾಡಬೇಕಿದೆ.
ಕೆ.ಎಸ್. ಸುಧೀಂದ್ರ ಭದ್ರಾವತಿ