ಭದ್ರಾವತಿ: ಶುಕ್ರವಾರ ತಡರಾತ್ರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಓರ್ವರು ವಕೀಲರ ಸಂಘದ ಅಧ್ಯಕ್ಷರೊಂದಿಗೆ ಅನುಚಿತವಾಗಿ ವರ್ತಿಸಿದರೆಂಬ ಆರೋಪದ ಮೇರೆಗೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮತ್ತು ಪ್ರತಿಭಟನಾರ್ಥವಾಗಿ ನಗರದ ವಕೀಲರ ಸಂಘ ಶನಿವಾರ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದು ಡಿವೈಎಸ್ ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ ಘಟನೆ ಶನಿವಾರ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 11.30 ಕ್ಕೆ ಕೆ. ಶ್ರೀನಿವಾಸ ಎಂಬ ವಕೀಲರ ಮೇಲೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೆಲವು ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೆ ಪ್ರಯತ್ನಿಸಿದಾಗ ಅವರಿಂದ ತಪ್ಪಿಸಿಕೊಂಡ ಶ್ರೀನಿವಾಸ ಪ್ರಾಣರಕ್ಷಣೆ ಕೋರಿ ತಾಲೂಕು ಕಚೇರಿ ಹಿಂಭಾಗದಲ್ಲಿರುವ ಹೊಸಮನೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಹಲ್ಲೆಗೆ ಪ್ರಯತ್ನಿಸಿದವರ ವಿರುದ್ಧ ದೂರು ಸಲ್ಲಿಸಲು ತಮ್ಮ ಇತರ ವಕೀಲ ಸಹವರ್ತಿಗಳೊಂದಿಗೆ ಹೋದಾಗ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಇಲ್ಲದಿರುವ ಕಾರಣ ಅಲ್ಲಿದ್ದ ಸಿಬ್ಬಂದಿ ಸಬ್ ಇನ್ಸ್‌ಪೆಕ್ಟರ್ ಇಲ್ಲೇ ಹತ್ತಿರದಲ್ಲಿರುವ ರಂಗಪ್ಪ ವೃತ್ತದ ಬಳಿ ಇದ್ದಾರೆ. ಅವರನ್ನು ಭೇಟಿ ಮಾಡಿ ಅವರು ಹೇಳಿದ ನಂತರ ದೂರು ಪಡೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಶ್ರೀನಿವಾಸ್ ಹಾಗೂ ಇನ್ನಿತರ ವಕೀಲರು ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು.
ವೆಂಕಟೇಶ್ ಬಂದ ನಂತರ ಎಲ್ಲರೂ ಸಮೀಪದ ರಂಗಪ್ಪ ವೃತ್ತಕ್ಕೆ ತೆರಳಿ ಅಲ್ಲಿ ಜೀಪಿನಲ್ಲಿ ಕುಳಿತಿದ್ದ ಸಬ್ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ ಅವರಿಗೆ ಘಟನೆ ವಿವರಿಸಿ ದೂರು ಸ್ವೀಕರಿಸಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೋರಿದ್ದಾರೆ. ಅದಕ್ಕೆ ಸಬ್ ಇನ್ಸ್‌ಪೆಕ್ಟರ್ ನೀವು ದೂರು ದಾಖಲಿಸಿ ಎಂದ ಮೇರೆಗೆ ವಕೀಲರು ಪುನಃ ಠಾಣೆಗೆ ತೆರಳಿ ಲಿಖೀತ ದೂರು ದಾಖಲಿಸಿ ಬಂದರೂ ಸಬ್ ಇನ್ಸ್‌ಪೆಕ್ಟರ್ ಅದರ ಮೇರೆಗೆ ಎಫ್‌ಐಆರ್ ಮಾಡಿಲ್ಲ. ಎನ್‌ಸಿ ಮಾತ್ರ ಮಾಡಿ ಹಿಂಬರಹವನ್ನು ನೀಡುವಂತೆ ಠಾಣೆಯ ಸಿಬ್ಬಂದಿಗೆ ಹೇಳಿದಾಗ ವಕೀಲ ಸಂಘದ ಅಧ್ಯಕ್ಷ ವೆಂಕಟೇಶ್ ಎಫ್‌ಐಆರ್ ಮಾಡುವಂತೆ ಕೇಳಿಕೊಂಡರೂ ಸಹ ಸಬ್‌ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ನೀವು ಹೇಳಿದಂತೆ ನಾನು ಮಾಡುವುದಿಲ್ಲ ಎಂದು ಏಕವಚನದಲ್ಲಿ ವಕೀಲರ ಸಂಘದ ಅಧ್ಯಕ್ಷರೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ.
ಶನಿವಾರ ಬೆಳಗ್ಗೆ ವಕೀಲರ ಸಂಘದಲ್ಲಿ ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕಾನೂನು ಪಾಲಿಸಬೇಕಾದ ಪೊಲೀಸ್ ಅಧಿಕಾರಿ ಈ ರೀತಿ ವಕೀಲರ ಸಂಘದ ಅಧ್ಯಕ್ಷರೊಂದಿಗೆ ನಡೆದುಕೊಂಡ ರೀತಿ ಖಂಡಿಸಿ ಸಬ್ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ ವಿರುದ್ಧ ಪೊಲೀಸ್ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದನ್ನು ದಾಖಲಿಸಬೇಕು ಎಂದು ನಿರ್ಧರಿಸಿ ವಕೀಲರು ಸಾಮೂಹಿಕವಾಗಿ ಶನಿವಾರ ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದರು.
ಡಿವೈಎಸ್‌ಪಿಗೆ ದೂರು: ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ವಕೀಲರು ಡಿವೈಎಸ್‌ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಡಿವೈಎಸ್‌ಪಿ ನಾಯ್ಕ ಮಾತನಾಡಿ, ಪೊಲೀಸ್ ಇಲಾಖೆ- ವಕೀಲರ ನಡುವೆ ಉತ್ತಮ ಭಾಂದವ್ಯವಿರುತ್ತದೆ. ಎಲ್ಲೋ ಒಂದು ಇಂತಹ ಘಟನೆಗಳ ಕಾರಣ ಯಾರೂ ಬೇಸರ ಮಾಡಿಕೊಳ್ಳಬಾರದು. ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ತಾತ್ಕಾಲಿಕವಾಗಿ ಈ ಠಾಣೆಗೆ ನಿಯೋಜಿತರಾಗಿದ್ದು ಅವರನ್ನು ಕರೆಸಿ ವಿಚರಿಸಿ ಸೌಹಾರ್ದಯುತವಾಗಿ ಈ ಸಮಸ್ಯೆ ಪರಿಹರಿಸಲು ನನ್ನ ಕಾರ್ಯವ್ಯಾಪ್ತಿಯಲ್ಲಿ ಪ್ರಯತ್ನಿಸುತ್ತೇನೆ. ಅದಕ್ಕಾಗಿ 3ದಿನ ಕಾಲಾವಕಾಶ ನೀಡಿ ಎಂದು ವಕೀಲರೊಂದಿಗೆ ಮಾತನಾಡಿದರು. ಇದಕ್ಕೆ ಸಮ್ಮತಿಸಿದ ವಕೀಲರು ದೂರು ಸಲ್ಲಿಸಿ ಹಿಂದಿರುಗಿದರು. ಅಂಚೆ ಮೂಲಕ ಅದೇ ದೂರನ್ನು ಜಿಲ್ಲಾ ರಕ್ಷಣಾಧಿಕಾರಿ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ವೈ. ಜಯರಾಂ, ಕಾರ್ಯದರ್ಶಿ ರಾಜು, ಜಂಟಿ ಕಾರ್ಯದರ್ಶಿ ಮೋಹನ್, ಖಜಾಂಚಿ ರಂಗಪ್ಪ ಮತ್ತು ಸಂಘದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರಾದ ಎಸ್. ನಾರಾಯಣರಾವ್, ಚಂದ್ರೇಗೌಡ, ಉಮಾಪತಿ, ಸಿದ್ದೇಶ್, ಮಹೇಶ್ ಕುಮಾರ್, ರೂಪಾರಾವ್, ಸಯ್ಯದ್ ನಿಯಾಜ್, ಮಹೇಶ್ ಇದ್ದರು.