Advertisement
ಭದ್ರಾನದಿ ತುಂಬಿ ಹರಿಯುತ್ತಿರುವ ಕಾರಣ ನದಿಯ ಸಮೀಪದ ಕವಲುಗುಂದಿ ಬಿಸಿಎಂ ಇಲಾಖೆಯ ಹಾಸ್ಟೆಲ್ ಹಿಂಭಾಗದ 5 ಮನೆಗಳು ನೀರಿನಿಂದ ಜಲಾವೃತಗೊಂಡಿದ್ದು ಅಲ್ಲಿದ್ದ 5 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಹಿಳೆಯರಿಗೆ ಆ ಪ್ರದೇಶದ ಹಾಸ್ಟೆಲ್ನಲ್ಲಿ ಆಶ್ರಯ ನೀಡಿ ಊಟದ ವ್ಯವಸ್ಥೆ ಕಲ್ಪಿಸಿದ್ದರೆ, ಪುರುಷರಿಗೆ ಹುತ್ತಾ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಜಿಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಉಳಿದಂತೆ ಕೂಡ್ಲಿಗೆರೆ, ಗುಡ್ಡದ ನೇರಳೆಕೆರೆ ಮುಂತಾದ ಬಹುತೇಕ ಗ್ರಾಮಗಳಲ್ಲಿ ಕೋಡಿ ಹರಿದು ಬೆಳೆಗಳಿಗೆ ಹಾನಿಯಾಗಿದೆ.
Related Articles
Advertisement
ಕೆಲಕ್ಷಣ ಬಿಸಿಲು- ಪುನಃ ಮಳೆ: ಶುಕ್ರವಾರ ಬೆಳಗ್ಗೆ ಮಳೆ ಸ್ವಲ್ಪ ನಿಂತು ಕೆಲ ನಿಮಿಷಗಳಕಾಲ ಬಿಸಿಲು ಕಾಣಿಸಿಕೊಂಡಿತು ಜನರು ಇನ್ನು ಮಳೆ ಬರುವುದಿಲ್ಲ ಬಿಸಿಲು ಬಂದಿದೆ ಎಂದು ನಿಟ್ಟುಸಿರು ಬಿಟ್ಟರು. ಆದರೆ ಜನರ ನಿರೀಕ್ಷೆ ಹುಸಿಯಾಗಿ ಕೆಲವೇ ನಿಮಿಷಗಳಲ್ಲಿ ಪುನಃ ಮಳೆ ಆರಂಭಗೊಂಡು ಜನರಲ್ಲಿ ಮಳೆಯ ತೀವ್ರ ಆತಂಕ ಹೆಚ್ಚಿಸಿದೆ.
ಧರೆಗುರುಳಿದ ವಿದ್ಯುತ್ ಕಂಬ: ಬಾರಂದೂರು ಸಮೀಪದ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಮಳೆಯ ತೀವ್ರತೆಗೆ 3 ವಿದ್ಯುತ್ ಕಂಬಗಳು ಬಿದ್ದಿವೆ. ವಿಷಯ ತಿಳಿದ ಕೂಡಲೇ ತಹಶೀಲ್ದಾರ್ ಸೋಮಶೇಖರ್ ಸ್ಥಳಕ್ಕೆ ತಂಡದೊಂದಿಗೆ ತೆರಳಿ ಮೆಸ್ಕಾಂ ಇಲಾಖೆಗೆ ತಿಳಿಸಿದ್ದಾರೆ. ಮೆಸ್ಕಾಂ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಕ್ರಮ ಕೈಗೊಂಡರು.
ಮಳೆಯ ಪ್ರಮಾಣದಲ್ಲಿ ಏರಿಳಿತ: ತಾಲೂಕಿನಲ್ಲಿ ಮಳೆಯ ತೀವ್ರತೆ ಬಗ್ಗೆ ಪತ್ರಿಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಸೋಮಶೇಖರ್, ಮಳೆಯ ಪ್ರಮಾಣದಲ್ಲಿ ಏರಿಳಿಕೆ ಕಾಣುತ್ತಿದ್ದರೂ ಸಹ ಯಾವುದನ್ನೂ ನಿಖರವಾಗಿ ಹೇಳಲಾಗುತ್ತಿಲ್ಲ. ತಾಲೂಕು ಆಡಳಿತ, ನಗರಸಭೆ ಆಡಳಿತ ಎಲ್ಲರೂ ಒಂದಾಗಿ ಮಳೆಯ ಹಾನಿಗೊಳಗಾದವರಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇವೆ. ಗುರುವಾರ ಒಂದೇ ದಿನಕ್ಕೆ ತಾಲೂಕಿನಲ್ಲಿ 179 ಮಿಮೀ ಮಳೆಯಾಗಿದ್ದು ಭದ್ರಾನದಿಯಲ್ಲಿ ಏರುತ್ತಿರುವ ನೀರಿನ ಮಟ್ಟವೇ ಮಳೆಯ ತೀವ್ರತೆ ಎಷ್ಟಿದೆ ಎಂದು ತೋರಿಸುತ್ತದೆ ಎಂದರು.