ಭದ್ರಾವತಿ: ಭದ್ರಾನದಿಗೆ ಜಲಾಶಯದಿಂದ 6 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಭದ್ರಾನದಿಯಲ್ಲಿ ನೀರಿನ ಪ್ರಮಾಣ ಹಿಂದೆಂದೂ ಕಾಣದಷ್ಟರ ಮಟ್ಟಿಗೆ ಅಧಿಕಗೊಂಡು ತೀವ್ರ ಪ್ರವಾಹದ ಹಂತವನ್ನು ತಲುಪಿ ಉಕ್ಕಿ ಹರಿಯುತ್ತಿದೆ.
ಕಳೆದ ಐದಾರು ದಿನಗಳಿಂದ ಸುರಿಯುತ್ತಿದ್ದ ಮಳೆ ಶನಿವಾರ ಬೆಳಗ್ಗೆ ಕೆಲಕಾಲ ಬಿಡುವು ನೀಡಿತ್ತಾದರೂ ಶುಕ್ರವಾರ ತಡರಾತ್ರಿವರೆಗೆ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹಲವು ಪ್ರದೇಶಗಳು ಜಲಾವೃತಗೊಂಡು ದ್ವೀಪದಂತಾಗಿದೆ. ಈಗಾಗಲೆ ಕೇವಲ ಮಳೆ ನೀರಿನಿಂದಲೇ ಭದ್ರಾ ನದಿ ತುಂಬಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಶನಿವಾರ ಸಂಜೆ ಜಲಾಶಯದಿಂದ ನದಿಗೆ ನೀರು ಬಿಟ್ಟ ಕಾರಣ ನದಿಪಾತ್ರದ ಪ್ರದೇಶಗಳಾದ ಎಸ್.ಎಲ್.ಎನ್.ಟಿ. ರಸ್ತೆ, ತರೀಕೆರೆ ರಸ್ತೆ ಸೇರಿದಂತೆ ಅನೇಕ ಭಾಗಗಳಲ್ಲಿನ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ.
ಈಗಾಗಲೇ ನಗರದ ಸಿದ್ದಾಪುರ, ಕವಲಗುಂದಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿದೆ. ಮತ್ತೂಂದೆಡೆ ನ್ಯೂಟೌನ್ ಭಾಗದ ಕಿರಿಯ ತಾಂತ್ರಿಕ ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿದೆ.
ತಾಲೂಕಿನ ಶಿವನಿ ಕ್ರಾಸ್ ಸಮೀಪದ ದೊಡ್ಡೇರಿ ಗ್ರಾಮದ ಚೌಡೇಶ್ವರಿ ದೇವಾಲಯದ ಪಕ್ಕದ ಕೆರೆಯಲ್ಲಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಮಣ್ಣು ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಪೊಲೀಸರು ಪರ್ಯಾಯ ರಸ್ತೆ ಕಲ್ಪಿಸಿದ್ದಾರೆ. ಮಹಾ ಮಳೆಗೆ ಬಹಳಷ್ಟು ಧರೆಗಳು ಕುಸಿದಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ.
ಶಾಸಕ ಬಿ.ಕೆ.ಸಂಗಮೇಶ್ವರ್ ಸರಕಾರಿ ಐಟಿಐ ಸಮೀಪದ ನಾರಾಯಣಪ್ಪ ಕಾಂಪೌಂಡ್ ಬಳಿಯ 6 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದ ಸ್ಥಳಕ್ಕೆ ಹಾಗೂ ಸುರುಗಿತೋಪು, ವಿದ್ಯಾಮಂದಿರ ಭಾಗಗಳಿಗೆ ಹಾಗೂ ಗಂಜಿಕೇಂದ್ರಗಳಿಗೆ ಭೇಟಿ ನೀಡಿದರು. ತಾಲೂಕು ದಂಡಾಧಿಕಾರಿ ಸೋಮಶೇಖರ್, ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್ ಕುಮಾರ್ ಅವರ ತಂಡ ಅವಿರತವಾಗಿ ಶ್ರಮಿಸುತ್ತಿದೆ.
ಸಂಸದರ ಭೇಟಿ: ನೆರೆಹಾವಳಿಯಿಂದ ತತ್ತರಿಸಿರುವ ಕವಲುಗೊಂದಿ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ನಂತರ ಸರಕಾರಿ ಪ್ರಾಥಮಿಕ ಶಾಲೆ, ಒಕ್ಕಲಿಗರ ಸಮುದಾಯ ಭವನಗಳಲ್ಲಿ ನಿರಾಶ್ರಿತರಿಗಾಗಿ ತೆರೆದಿರುವ ಗಂಜಿಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ಥರಿಗೆ ಯಾವುದೇ ಅನಾನುಕೂಲವಾಗದ ರೀತಿಯಲ್ಲಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೆರೆ ಪ್ರದೇಶಗಳಲ್ಲಿ ಆಗಿರುವ ಅನಾಹುತಗಳನ್ನು ಕೂಡಲೇ ಸರಿಪಡಿಸಿ ಪರಿಹಾರ ನೀಡುವಂತೆ ಹೇಳಿದರು.