Advertisement

ಓದುಗರ ಮನ ಮುಟ್ಟುವ ಕೃತಿ ಶಾಶ್ವತ

05:29 PM May 20, 2019 | Naveen |

ಭದ್ರಾವತಿ: ರಾಜಕೀಯದಲ್ಲಿ ಸಾಹಿತ್ಯವಿದ್ದರೆ ತೊಂದರೆಯಿಲ್ಲ. ಆದರೆ ಸಾಹಿತ್ಯದಲ್ಲಿ ರಾಜಕೀಯವಿರಬಾರದು ಎಂದು ಖ್ಯಾತ ರಂಗಕರ್ಮಿ,ಲೇಖಕ ಮತ್ತು ಕಿರುತೆರೆ ನಟ, ನಿರ್ದೇಶಕ ಎಸ್‌.ಎನ್‌. ಸೇತೂರಾಂ ಹೇಳಿದರು.

Advertisement

ಭಾನುವಾರ ಉಂಬ್ಳೇಬೈಲ್ ರಸ್ತೆಯಲ್ಲಿರುವ ಲಯನ್ಸ್‌ ಕ್ಲಬ್‌ ಸಭಾಂಗಣದಲ್ಲಿ ಆವರ್ತ ಪ್ರಕಾಶನದಿಂದ ದೀಪ್ತಿ ಭದ್ರಾವತಿ ಅವರು ಬರೆದ ಗೀರು ಕಥಾ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಸಾಹಿತ್ಯ ಕೃಷಿ ಕಷ್ಟ. ಅದಕ್ಕೆ ಕಾರಣ ಅವರು ರಚಿಸುವ ಕೃತಿಗಳಲ್ಲಿ ಬರುವ ಸ್ತ್ರೀ ಪಾತ್ರವನ್ನು ಓದುಗರು ಅದರಲ್ಲಿನ ಸನ್ನಿವೇಶವನ್ನು ಲೇಖಕಿಯ ಅನುಭವವೇ ಇರಬೇಕು ಎಂಬ ದೃಷ್ಟಿಕೋನದಲ್ಲಿ ನೋಡುವ, ಓದುವ ಮನಸ್ಥಿತಿಯಿರುವುದೇ ಆಗಿದೆ. ಹೆಣ್ಣುಮಕ್ಕಳು ಸಾಹಿತ್ಯ ಸೃಷ್ಟಿಯಲ್ಲಿ ಸ್ವಲ್ಪ ಸಂಕೋಚ ಎದುರಿಸುಬೇಕಾದ ಪರಿಸ್ಥಿತಿ ಇರುವುದೇ ಹೆಣ್ಣುಮಕ್ಕಳಿಗೆ ಸಾಹಿತ್ಯ ಕೃಷಿ ಕಷ್ಟ ಎನಿಸಲು ಪ್ರಮುಖ ಕಾರಣ ಎಂದರು.

ಸಾಹಿತ್ಯ ರಚನೆಯಲ್ಲಿ ಸಂಕೋಚವಿದ್ದರೂ ಪುಸ್ತಕ ರೂಪದಲ್ಲಿ ಅದು ಮುದ್ರಿತವಾದ ನಂತರ ಮಾರಾಟದಲ್ಲಿ ಯಾವುದೇ ಸಂಕೋಚವಿರಬಾರದು. ಸಂಸಾರವಂತರಾದ ಸಾಹಿತಿಗಳಿಂದ ಉತ್ತಮ ಕೃತಿ ರಚನೆ ಸಾಧ್ಯವಾಗುತ್ತದೆ. ಆದರೆ ಸಂಸಾರದಿಂದ ಹೊರಗಿದ್ದವರಿಂದ ಆ ಮಟ್ಟದ ಸಾಹಿತ್ಯ ಕೃತಿ ರಚನೆ ಕಷ್ಟಸಾಧ್ಯ.ಕಳೆದ 20 ವರ್ಷಗಳಿಂದ ಪುಸ್ತಕ ಓದುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಾ ಸಾಗಿದೆ. ಅದಕ್ಕೆ ಕಾರಣ ಓದುಗರ ಮನ ಮುಟ್ಟುವ ರೀತಿಯ ಸಾಹಿತ್ಯ ಕೃತಿಗಳ ರಚನೆಯಾಗದಿರುವುದೂ ಒಂದು ಕಾರಣ. ವಸ್ತುಸ್ಥಿತಿಗೆ ಹತ್ತಿರವಾದ ಪಾತ್ರ ಮತ್ತು ಸನ್ನಿವೇಶಗಳನ್ನು ಹೊಂದಿರುವ ಕೃತಿ ರಚನೆಯಾಗಬೇಕು. ಆದರೆ ಸಾಹಿತ್ಯ ರಚನೆಯಲ್ಲಿನ ಪಾತ್ರಗಳು ಮತ್ತೂಬ್ಬರ ಮನಸ್ಸಿಗೆ ನೋವುಂಟಾಗುವ ರೀತಿ ಇರಬಾರದು. ಕೃತಿಯಲ್ಲಿ ಬರುವ ಪಾತ್ರಗಳ ಭಾವನೆ, ಸಂವೇದನಾಶೀಲತೆಗೆ ಕೃತಿಯಲ್ಲಿ ಹೆಚ್ಚು ಒತ್ತು ನೀಡಿದಾಗ ಅಂತಹ ಸಾಹಿತ್ಯವನ್ನು ಓದುಗರು ಅನುಭವಿಸಿ ಓದಲು ಸಾಧ್ಯವಾಗುತ್ತದೆ. ಜೊತೆಗೆ ಅಂತಹ ಕೃತಿಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಹಿತ್ಯದ ಮೂಲ ಉದ್ದೇಶ ಸಾರ್ಥಕವಾಗುವುದರ ಜೊತೆಗೆ ಆ ಸಾಹಿತ್ಯ ರಚಿಸಿದ ಸಾಹಿತಿ ಕಥೆಗಾರನಿಗೆ ಇನ್ನೂ ಉತ್ತಮ ಕೃತಿ ರಚಸಲು ಪ್ರೇರಣೆ ದೊರೆಯುತ್ತದೆ ಎಂದರು.

ಸಾಹಿತಿ ವಿಜಯಕಾಂತ್‌ ಪಾಟೀಲ್ ಮಾತನಾಡಿ, ಲೇಖಕನಿಗೆ ಬರವಣಿಗೆಯಲ್ಲಿ ತೃಪ್ತಿ ಇರಬಾರದು. ಆದರೆ ಸಮಾಧಾನವಿರಬೇಕು. ಹಾಗಿದ್ದಾಗ ಮಾತ್ರ ಆತನಿಂದ ಉತ್ತಮೋತ್ತಮ ಕೃತಿಗಳನ್ನು ರಚಿಸಲು ಸಾಧ್ಯವಾಗುತ್ತದೆ. ದೀಪ್ತಿ ಅವರು ಬರದಿರುವ ಪಾಟೀಲ ಪುಟ್ಟಪ್ಪ ಪ್ರಶಸ್ತಿ ವಿಜೇತ ಕೃತಿ ಗೀರು ಕಥಾ ಸಂಕಲನದಲ್ಲಿ ಬರುವ ಕಥೆ ಹಾಗೂ ಪಾತ್ರಗಳು ಮನಮುಟ್ಟುವಂತಿವೆ ಎಂದು ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಗೀರು ಕಥಾ ಸಂಕಲನದ ಕರ್ತೃ ದೀಪ್ತಿ ಭದ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಕಾರ್ಯ ನಿರ್ವಹಿಸುವ ಆಸ್ಪತ್ರೆ ಹಾಗೂ ಈ ಊರಿನಲ್ಲಿ ನನ್ನ ಅನುಭವಕ್ಕೆ ಬಂದ ಹಲವು ಘಟನೆ ಹಾಗೂ ವ್ಯಕ್ತಿಗಳ ನೋವು- ನಲಿವು ಅದರಲ್ಲಿಯೂ ವಿಶೇಷವಾಗಿ ಸ್ತ್ರೀಯರ ಆಂತರಿಕ ತೊಳಲಾಟ ಮುಂತಾದ ಸಂಗತಿಗಳೇ ನನ್ನ ಈವರೆಗಿನ ನಾಲ್ಕು ಕೃತಿಗಳ ಹೂರಣವಾಗಿದೆ. ಖ್ಯಾತ ರಂಗಕರ್ಮಿ ಸೇತುರಾಂ ಅವರು ಪರಿಚಯವಾದ ರೀತಿ ವಿವರಿಸಿದ ಅವರು, ಮೇಲ್ನೋಟಕ್ಕೆ ಸೇತುರಾಂ ನೇರನುಡಿಯ ವ್ಯಕ್ತಿಯಾದರೂ ವ್ಯಕ್ತಿತ್ವದಲ್ಲಿ ಮಾತೃ ಹೃದಯವನ್ನು ಹೊಂದಿರುವ ಸ್ತ್ರೀ ಸಂವೇದನಾಶೀಲತೆಗೆ ಪೂರಕವಾಗಿ ಸ್ಪಂದಿಸುವ ಗುಣ ಹೊಂದಿರುವವರು. ಇವರ ಮಾತು ಹಾಗೂ ಅವರು ಬಳಸುವ ಪದಗಳು ನನ್ನ ಸಾಹಿತ್ಯ ಕೃತಿ ರಚನೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಶ್ವತಿ ಮಹಿಳಾ ಸಂಘದ ಅಧ್ಯಕ್ಷೆ ಬಿ.ಎಸ್‌. ರೂಪಾರಾವ್‌, ಗೀರು ಕಥಾ ಸಂಕಲನ ರಚಿಸಿರುವ ದೀಪ್ತಿ ಭದ್ರಾವತಿ ಅವರಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆ ಕೃತಿಯಿಂದ ಕೃತಿಗೆ ಬೆಳೆಯುತ್ತಿರುವುದು ಗೋಚರವಾಗುತ್ತದೆ. ಇವರ ಸಾಹಿತ್ಯ ಕೃಷಿ ಇದೇ ದಿಸೆಯಲ್ಲಿ ಸಾಗಿದರೆ ಇವರು ಇನ್ನೂ ಹೆಚ್ಚಿನ ಉತ್ತಮ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ರೀತಿ ಬೆಳೆಯುವ ಮೂಲಕ ದೀಪ್ತಿ ಭದ್ರಾವತಿ ಕ್ಷೇತ್ರಕ್ಕೆ ಕೀರ್ತಿ ತರಲಿ ಎಂದು ಆಶಿಸುತ್ತೇನೆ ಎಂದರು. ಅನ್ನಪೂರ್ಣ ಸತೀಶ್‌ ಪ್ರಾರ್ಥಿಸಿದರು. ಮೇಘನ ಬೇಕಲ್ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next