ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯ ಕಾರ್ಮಿಕರ ಹೋರಾಟಕ್ಕೆ ಭಾರತೀಯ ಮಜ್ದೂರ್ ಸಂಘ ಬೆಂಬಲಿಸಿ ಕಾರ್ಖಾನೆಯ ಉಳಿವಿಗೆ ಮತ್ತು ಕಾರ್ಮಿಕರ ಹಿತರಕ್ಷಣೆಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತದೆ ಎಂದು ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್ ಹೇಳಿದರು.
ಗುರುವಾರ ಮಧ್ಯಾಹ್ನ ವಿಐಎಸ್‌ಎಲ್ ಕಾರ್ಖಾನೆಯ ಪ್ರವೇಶ ದ್ವಾರದ ಮುಂಭಾಗದಲ್ಲಿ ಕಾರ್ಮಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಪಶ್ಚಿಮ ಬಂಗಾಳದ ದುರ್ಗಾಪುರ್ ಕಬ್ಬಿಣ ಮತ್ತು ಉಕಿನ ಕಾರ್ಖಾನೆ, ತಮಿಳುನಾಡಿನ ಸೇಲಂ ಕಾರ್ಖಾನೆ ಹಾಗೂ ಕರ್ನಾಟಕದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಿಗೆ ನಾವು ಭೇಟಿ ನೀಡಿದ್ದು ಈ ಕಾರ್ಖಾನೆಗಳನ್ನು ಡಿಸ್‌ಇನ್ವೆಸ್ಟ್ ಮೆಂಟ್ ಪಟ್ಟಿಗೆ ಸೇರಿಸಿ ಮುಚ್ಚಲು ಹೊರಟಿರುವ ಕೇಂದ್ರ ಉಕ್ಕು ಪ್ರಾಧಿಕಾರದ ನಿರ್ಧಾರ ಸರಿಯಾದ ಕ್ರಮವಲ್ಲ ಎಂದರು.
ಈ ಮೂರು ಕಾರ್ಖಾನೆಗಳ ಪೈಕಿ ವಿಐಎಸ್‌ಎಲ್ ಕಾರ್ಖಾನೆಯ ಪರಿಸ್ಥಿತಿ ಉಳಿದೆರಡು ಕಾರ್ಖಾನೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಇಂದು ನಾವು ವಿಐಎಸ್‌ಎಲ್ ಕಾರ್ಖಾನೆಯನ್ನು ವೀಕ್ಷಿಸಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ.ನಮ್ಮ ಗಮನಕ್ಕೆ ಬಂದಂತೆ ಈ ಕಾರ್ಖಾನೆಯಲ್ಲಿ ಅಗತ್ಯವಾದ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸದೆ ಇರುವುದು ಹಾಗೂ ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ ಸೇರಿದಂತೆ ವಿವಿದ ಘಟಕಗಳಿಗೆ ಅಗತ್ಯವಾದ ಕಬ್ಬಿಣ ಉಕ್ಕಿನ ವಸ್ತುಗಳನ್ನು ಸರಬರಾಜು ಮಾಡಲು ಆರ್ಡರ್ ಪಡೆಯಲು ಸರಿಯಾದ ಪ್ರಯತ್ನವನ್ನು ಉಕ್ಕು ಪ್ರಾಧಿಕಾರ ಮಾಡದಿರುವುದು ಕಾರ್ಖಾನೆ ಈ ಸ್ಥಿತಿಗೆ ಇಳಿಯಲು ಕಾರಣವೇ ಹೊರತು ಕಾರ್ಮಿಕರಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದರು.
ಒಂದು ಕಾರ್ಖಾನೆಯನ್ನು ನಡೆಸಲು ಅಗತ್ಯವಾದ ಜಾಗ, ನೀರು, ವಿದ್ಯುತ್, ಎಲ್ಲವೂ ಈ ಕಾರ್ಖಾನೆಗೆ ಇದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ರೀತಿ ಕೇಂದ್ರ ಉಕ್ಕು ಪ್ರಾಧಿಕಾರ ಕಾರ್ಯ ನಿರ್ವಹಿಸದಿರುವುದರಿಂದ ಕಾರ್ಖಾನೆ ಕಾರ್ಮಿಕರು ತೊಂದರಗೆ ಸಿಲುಕುವಂತಾಗಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ದೇವೇಂದ್ರ ಕುಮಾರ್ ಪಾಂಡೆ ಮಾತನಾಡಿ, ಕಾರ್ಖಾನೆಯಲ್ಲಿ ಕೆಲಸ ಕೇಳುವುದು ಕಾರ್ಖಾನೆ ಉಳಿಸಿ ಎನ್ನುವುದು ಎಲ್ಲವೂ ಕಾರ್ಮಿಕರ ಹಕ್ಕೇ ಹೊರತು ಅದು ಭಿಕ್ಷೆ ಅಲ್ಲ ಎಂದರು.
ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ಕಾರ್ಮಿಕರ ಹಿತರಕ್ಷಣೆ ಆಗಬೇಕಾದರೆ ಮೊದಲು ಕಾರ್ಖಾನೆ ಉಳಿಯಬೇಕು ಎಂದರು.
ಕಾರ್ಮಿಕ ಸಂಘದ ಕಾರ್ಯದರ್ಶಿ ಬಸಂತ್ ಕುಮಾರ್ ಹಾಗೂ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ರಾಕೇಶ್, ನಿವೃತ್ತ ಕಾರ್ಮಿಕ ಸಂಘದ ನಾಗಭೂಷಣ್, ಭೈರೇಗೌಡ, ಬಿಎಂಎಸ್‌ನ ಮುಖಂಡರಾದ ನ್ಯಾಯವಾದಿ ಎಚ್.ಎಲ್. ವಿಶ್ವನಾಥ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ಮತ್ತಿತರರು ಇದ್ದರು.