ಭದ್ರಾವತಿ: ಕೇವಲ ಒಂದು ವಾರದಲ್ಲಿ ಮಳೆ ಸಮೃದ್ಧಿ ನೀಡಿ ಭದ್ರಾನದಿ ತುಂಬಿದ ನಿದರ್ಶನ ಕಂಡು ಬಂದಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಟ ಕೆ.ಟಿ. ಗಂಗಾಧರ್ ಹೇಳಿದರು.
ಶುಕ್ರವಾರ ತುಂಬಿದ ಭದ್ರಾ ನದಿಗೆ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ಎಲ್ಲಾ ವರ್ಗ, ಧರ್ಮ ಮತ್ತು ಜಾತಿ ವ್ಯವಸ್ಥೆಯನ್ನು ಮೀರಿ ಮೆಟ್ಟಿ ಮಾನವ ಧರ್ಮವನ್ನು ರಕ್ಷಿಸುವುದರ ಜೊತೆಗೆ ಪ್ರಕೃತಿ ನೀಡಿರುವ ಗಾಳಿ, ಮಳೆ, ನೀರು ಹಾಗೂ ಪರಿಸರವನ್ನು ಮಲಿನ ಮಾಡದೆ ಮುಂದಿನ ಪೀಳಿಗೆಗೆ ಶುದ್ಧವಾಗಿಡಲು ಎಲ್ಲರೂ ಪ್ರಯತ್ನಿಸಬೇಕು. ದೇಶದ ನೆಲ, ಜಲ, ಬಿತ್ತನೆ ಬೀಜ, ಕೃಷಿ,ಆಹಾರ ಮತ್ತು ಗ್ರಾಮೀಣ ಬದುಕಿಗೆ ಧಕ್ಕೆ ಒದಗಿ ಬಂದಾಗ ನಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗಲು ರೈತ ಸಂಘಟನೆ ಸದಾ ಬದ್ಧವಾಗಿರುತ್ತದೆ ಎಂದರು.
ಸುಮಾರು 60 ವರ್ಷಗಳ ದಾಖಲೆ ಎಂಬಂತೆ ಕೇವಲ ಒಂದು ವಾರದಲ್ಲಿ ಮಳೆ ಸಮೃದ್ಧಿ ನೀಡಿ ಭದ್ರಾನದಿ ತುಂಬಿದೆ. ಅದೇ ರೀತಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನದಿ, ಹಳ್ಳ-ಕೊಳ್ಳಗಳು ತುಂಬಿವೆ. ಆದರೆ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮಳೆ ನೀರು ಶೇಖರಣೆ ಮಾಡಿ ಬರುವ ದಿನಗಳಲ್ಲಿ ನೀರಿಗೆ ಅಭಾವ ಆಗದ ರೀತಿ ಸರ್ಕಾರ ಮುಂದಾಲೋಚನೆಯಿಂದ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ಆದರೆ ಸರಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯದಿಂದ ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗದೆ ಇರುವುದು ಸರಿಯಲ್ಲ ಎಂದರು.
ರಾಜ್ಯ ಸರಕಾರವು ಕಾವೇರಿ ನೀರನ್ನು ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬರಗಾಲದ ಜಿಲ್ಲೆಗಳಿಗೆ ನೀರು ಕಾಲುವೆಗಳ ಮೂಲಕ ಹರಿ ಬೀಡುವ ಚಿಂತನೆ ಮಾಡಬೇಕಿದೆ. ಸರಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ತಮಿಳುನಾಡಿಗೆ ನೀರನ್ನು ಹರಿಯಬಿಡುತ್ತಿರುವುದು ದುರಂತ. ಕುಡಿಯುವ ನೀರಿಗೆ ಬರಗಾಲದಿಂದ ತೊಂದರೆಯುಂಟಾಗುವ ಮುನ್ನ ಸರಕಾರ ಅದಕ್ಕಾಗಿ ವಿಶೇಷ ಹಣವನ್ನು ಮೀಸಲಿಟ್ಟು ರಾಜ್ಯದ ಎಲ್ಲಾ ಜಿಲ್ಲೆಗಳ ತಾಲೂಕು ಹಾಗು ಹೋಬಳಿ ಮಟ್ಟದಲ್ಲಿ ಕೆರೆ ಕಟ್ಟೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.
ರಾಜ್ಯ ಸಂಘದ ಉಪಾಧ್ಯಕ್ಷ ಪ್ರಭುಗೌಡ ಪಾಟೀಲ್, ಶಿವಮೊಗ್ಗ ಜಿಲ್ಲಾ ಮುಖಂಡರಾದ ಯಶವಂತರಾವ್ ಘೋರ್ಪಡೆ, ವೀರೇಶ್, ಹಿರಿಯಣ್ಣ, ದಾವಣಗೆರೆ ರೈತ ಮುಖಂಡರಾದ ವಸಂತ, ಓಂಕಾರಪ್ಪ, ಎಂ.ಬಿ. ಪಾಟೀಲ್, ರಾಮಚಂದ್ರ, ಸಣ್ಣರಂಗಪ್ಪ, ಹನುಮಂತಪ್ಪ, ಪಾಂಡುರಂಗಪ್ಪ, ಮಹೇಶ್ವರಪ್ಪ, ಪುಟ್ಟಪ್ಪ ಕಾಚಿನಕಟ್ಟೆ, ನಿರ್ಮಲ, ಗಿರಿಜಮ್ಮ ಸೇರಿದಂತೆ ತರೀಕೆರೆ, ಮಲೆಬೆನ್ನೂರು ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನೆರೆದಿದ್ದ ನೂರಾರು ರೈತರಿಗೆ ಪ್ರಮಾಣ ವಚನ ಬೋಧಿಸಲಾಯಿತು.