ಭದ್ರಾವತಿ: ಎಷ್ಟು ದೂರ ಕಣ್ಣು ಹಾಯಿಸಿದರೂ ಬರೀ ನೀರು, ನೀರು,ನೀರು. ಅದರಾಚೆ ನುಣುಪಾದ ರೀತಿ ಕಾಣುವ ಕಪ್ಪು ಮಿಶ್ರಿತ ಹಸಿರು ಬೆಟ್ಟಗಳ ಸಾಲು, ಸಾಲು. ಅದರ ಮೇಲೆ ನೀಲಿ, ಬಿಳಿ ಮಿಶ್ರಿತ ಆಗಸದ ಹೊದಿಕೆ. ಇದು ಭದ್ರಾ ಜಲಾಶಯ ವೀಕ್ಷಿಸುವವರಿಗೆ ಕಾಣುವ ಅನನ್ಯ, ಅನುಪಮವಾದ ದೃಶ್ಯ.
Advertisement
ಕೆಲವೇ ದಿನಗಳಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ಗರಿಷ್ಠ ಮಟ್ಟ ತುಂಬಿ ರೈತರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡುವುದರ ಜೊತೆಗೆ ಜಲಾಶಯದ ವೀಕ್ಷಣೆಗೆ ಬರುವ ಜನರಿಗೂ ಕಣ್ಮನಗಳಿಗೆ ಸುಂದರ ದೃಶ್ಯಕಾವ್ಯವನ್ನು ವೀಕ್ಷಿಸುವ ಸೌಭಾಗ್ಯ ನೀಡಿದೆ.
Related Articles
Advertisement
ಬೃಂದಾವನ ಗಾರ್ಡನ್ ರೀತಿ ಆಗಲಿ: ಸುಂದರವಾದ ಪರಿಸರದ ನಡುವೆ ಜಲಸಾಗರದಿಂದ ಕಂಗೊಳಿಸುತ್ತಾ ಜನಸಾಗರವನ್ನು ಆಕರ್ಷಿಸುವ ಭದ್ರಾ ಜಲಾಶಯದ ಬಳಿ ಮೈಸೂರಿನ ಕೆಆರ್‌ಎಸ್ ಮಾದರಿಯ ಬೃಂದಾವನ ನಿರ್ಮಾಣ ಮಾಡಲಾಗುವುದು. ವಿದ್ಯುತ್ ಅಲಂಕೃತ ನೀರಿನ ಕಾರಂಜಿ, ವಿವಿಧ ಪುಷ್ಪರಾಶಿಗಳ ಗಿಡ ಮರಗಳನ್ನೊಳಗೊಂಡ ಸುಂದರವಾದ ಉದ್ಯಾನವನವನ್ನು ಈ ಸ್ಥಳದಲ್ಲಿ ನಿರ್ಮಿಸಲಾಗುವುದು ಎಂದು ಅನೇಕ ಬಾರಿ ಈ ಕ್ಷೇತ್ರದ ಚುನಾಯಿತ ಜನನಾಯಕರು ಸಾರ್ವಜನಿಕವಾಗಿ ಹೇಳುತ್ತಲೇ ಬಂದಿದ್ದಾರೆ ಆದರೆ ಈವರೆಗೂ ಆ ರೀತಿ ಬೃಂದಾವನವನ್ನು ನಿರ್ಮಾಣ ಮಾಡುವ ಯಾವುದೇ ಕುರುಹು ಅಥವ ಸೂಚನೆ ಇಲ್ಲಿ ಕಾಣುತ್ತಿಲ್ಲ.
ಸೂಕ್ತ ಮೇಲ್ವಿಚಾರಣೆ ಕೊರತೆ?: ಭದ್ರಾ ಜಲಾಶಯದ ಆಸುಪಾಸಿನಲ್ಲಿ ಸೂಕ್ತ ನಿರ್ವಹಣೆ ಕೊರತೆಯಿರುವುದು ಅಲ್ಲಿಗೆ ಭೇಟಿ ನೀಡಿದಾಗ ಮೇಲ್ನೋಟಕ್ಕೆ ಗೋಚರವಾಗುತ್ತದೆ.ಜಲಾಶಯದ ವೀಕ್ಷಣೆಗೆ ಹೋಗುವ ಸೇತುವೆ ದಾರಿಯ ಉಭಯ ಪಾರ್ಶ್ವದಲ್ಲಿ ಹಾಕಿರುವ ಸುರಕ್ಷತಾ ಕಂಬಿಗಳಲ್ಲಿ ಕೆಲವು ಕಿತ್ತು ಹೋಗಿವೆ. ಕೆಲವು ಕಡೆ ಸರಪಳಿಗಳು ಇಲ್ಲ, ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಹ ಕಾಣಿಸುತ್ತದೆ.
ಬಾಗಿನ ಬಿಡಲು ಹೋಗುವ ರಾಜಕಾರಣಿಗಳು, ಗಣ್ಯರು, ನಾಯಕರು ಕಾರಿನಲ್ಲಿ ಬರುತ್ತಾರೆ. ಬಾಗಿನ ಬಿಟ್ಟು ಐಬಿಯಲ್ಲಿ ಉಂಡು ಪುನಃ ಕಾರಿನಲ್ಲಿ ಹೋಗುತ್ತಾರೆ. ಅವರಿಗೆ ಈ ಎಲ್ಲಾ ಸಮಸ್ಯೆಗಳು ಅಥವಾ ಜಲಾಶಯದ ಸುತ್ತಮುತ್ತಲಿನ ನ್ಯೂನತೆಗಳನ್ನು ಗಮನಿಸುವ ವ್ಯವಧಾನವೂ ಇರುವುದಿಲ್ಲ ಹಾಗಾಗಿ ಎಲ್ಲ ಜನರ ಅಗತ್ಯವನ್ನು ಪೂರೈಸುವ ಭದ್ರಾ ಜಲಾಶಯದ ಸುಂದರತಾಣ ಅಭಿವೃದ್ಧಿಯ ಹಾಗೂ ಸ್ವಚ್ಛತೆಯ ಕೊರತೆಯಿಂದ ಬಳಲುತ್ತಾ ಇದೆ. ಮೈಸೂರಿನ ಕೆಆರ್‌ಎಸ್ ಮಾದರಿಯ ಉದ್ಯಾನವನ ನಿರ್ಮಾಣ ವಾಗುತ್ತದೆ ಎಂದು ಕಾಣುತ್ತಿರುವ ಕನಸು ನನಸಾಗದೆ ಕನಸಾಗಿಯೇ ಉಳಿದಿದೆ.