Advertisement

ಧರ್ಮ ಮಾರ್ಗದಿಂದ ಮೋಕ್ಷ ಸಾಧನೆ: ನಿರ್ಮಲಾನಂದನಾಥ ಶ್ರೀ

04:02 PM May 16, 2019 | Naveen |

ಭದ್ರಾವತಿ: ಧರ್ಮಮಾರ್ಗದಿಂದ ಅರ್ಥಸಂಪಾದನೆ ಮಾಡಿ ಅದರಿಂದ ಸಾತ್ವಿಕ ಕಾಮನೆಗಳನ್ನು ಪೂರೈಸಿಕೊಂಡಾಗ ಮೋಕ್ಷ ಸಾಧನೆ ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

Advertisement

ನ್ಯೂಟೌನ್‌ ಶ್ರೀಸತ್ಯಸಾಯಿ ಸೇವಸಂಸ್ಥೆ ನಡೆಸುತ್ತಿರುವ ಅತಿರುದ್ರ ಮಹಾಯಾಗದ ಕಾರ್ಯಕ್ರಮಕ್ಕೆ ಭೇಟಿ ನೀಡಿ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆಹಾರ ತಯಾರಿಸಲು ಅಗತ್ಯವಾದ ಸಾಮಗ್ರಿಗಳು ಇದ್ದರೆ ಸಾಲದು. ಆಹಾರ ತಯಾರಿಸಲು ಬೆಂಕಿ ಅಗತ್ಯ. ಬದುಕಿನಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಅವುಗಳನ್ನು ಸರಿಯಾದ ರೀತಿ ಅರಿತು ನಡೆಯಲು ಜ್ಞಾನವೆಂಬ ಅಗ್ನಿ ಅಗತ್ಯ. ಸರಿಯಾದ ಗುರುವಿನ ಮಾರ್ಗದರ್ಶನದಿಂದ ಜ್ಞಾನ ಗಳಿಸಲು ಸಾಧ್ಯ ಎಂದರು.

ಭಗವದ್ಗೀತೆಯಂತಹ ಭಾರತೀಯ ಕೃತಿಗಳು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್‌ ಭಗವದ್ಗೀತೆಯಲ್ಲಿರುವ ವೈಜ್ಞಾನಿಕ ವಿಚಾರಧಾರೆಯ ಮಹತ್ವವನ್ನು ತನ್ನ ಕೃತಿಯಲ್ಲಿ ಉಲ್ಲೇಖೀಸಿದ್ದಾನೆ ಎಂದು ತಿಳಿಸಿದರು.

ಆಧ್ಯಾತ್ಮಿಕ ಜ್ಞಾನಸಂಪತ್ತಿನ ಅರಿವನ್ನು ಪಡೆದು ಜೀವನದ ಗುರಿಯನ್ನು ತಲುಪಬೇಕಾದರೆ ಸರಿಯಾದ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಪಂಚೇಂದ್ರಿಯಗಳು ಕೇವಲ ವ್ಯಕ್ತರೂಪದ ವಸ್ತು, ವಿಷಯಗಳನ್ನು ನಮಗೆ ಪರಿಚಯ ನೀಡುತ್ತವೆ. ಆದರೆ, ಅವ್ಯಕ್ತ ರೂಪದಲ್ಲಿರುವ ಸಂಗತಿ, ವಿಷಯಗಳ ಅರಿವು ನಮಗಾಗ ಬೇಕಾದರೆ ಗುರುವಿನ ಮಾರ್ಗದರ್ಶನ ಬೇಕು ಎಂದರು.

Advertisement

ಭಾರತೀಯ ಆಧ್ಯಾತ್ಮಿಕ ಜ್ಞಾನ ಲೋಕದಲ್ಲಿ ಅಂತಹ ಗುರುಪರಂಪರೆಯಲ್ಲಿ ಬಂದ ಅನೇಕ ಮಹಾಪುರುಷರ ಪೈಕಿ ಸತ್ಯಸಾಯಿ ಬಾಬಾ ಸಹ ಒಬ್ಬರು. ಸಾಯಿಬಾಬ ಅವರು ಜಗತ್ತಿಗೆ ನೀಡಿದ ಬಹುಮುಖ್ಯ ಸಂದೇಶಗಳೆಂದರೆ ನಿಷ್ಕಾಮ ಕರ್ಮ, ಸೇವೆ ಮತ್ತು ಜ್ಞಾನ. ಅಂತಃಕರಣದಲ್ಲಿರುವ ಭಗವಂತನನ್ನು ಕಾಣಬೇಕಾದರೆ ಯಾವುದೇ ಕಾಮನೆಯಿಲ್ಲದೆ ಕರ್ಮಗಳನ್ನು ಮಾಡಬೇಕು ಎಂದು ಹೇಳಿದರು.

ಮಾಡುವ ಕರ್ಮಗಳು ಸ್ವಾರ್ಥರಹಿತವಾದ ಸೇವಾಮನೋಭಾವದಿಂದ ಕೂಡಿರಬೇಕು ಇದನ್ನು ಸಾಧಿಸಲು ಮನಸ್ಸು ಸ್ಥಿಮಿತವಾಗಿ ಪ್ರಶಾಂತವಾಗಿರಬೇಕು. ಇದನ್ನು ಧ್ಯಾನ, ಜಪ, ಸತ್ಸಂಗ, ಯಾಗ, ಮುಂತಾದವುಗಳ ಉಪಾಸನಾ ಕ್ರಮದಿಂದ ಗಳಿಸಬೇಕು. ಕೊನೆಯದಗಿ ಜ್ಞಾನಾರ್ಜನೆ, ಜ್ಞಾನದಿಂದ ಮಾತ್ರ ಮೋಕ್ಷ ಸಾಧನೆ ಸಾಧ್ಯ. ಸತ್ಯಸಾಯಿ ಬಾಬ ಅವರು ಭಕ್ತರಿಗೆ ನೀಡಿರುವ ಈ ಕೊಡುಗೆ ಅನನ್ಯವಾದುದು ಎಂದರು. ದೇಹಕ್ಕೆ ಮಾತ್ರ ಸಾವು, ಆತ್ಮಕ್ಕೆ ಸಾವಿಲ್ಲ ಎಂಬುದನ್ನು ಅರಿತಾಗ ಸಾಯಿ ಬಾಬ ಅವರಂತಹ ಮಹಾ ಪುರುಷರು ಇಂದಿಗೂ ಭಕ್ತರನ್ನು ಸರಿಯಾದ ಮಾರ್ಗದಲ್ಲಿ ಕೈಹಿಡಿದು ನಡೆಸುತ್ತಿದ್ದಾರೆ ಎಂಬ ಮಾತುಗಳ ಅರ್ಥ ಅರಿವಿಗೆ ಬುರುತ್ತದೆ. ಸಾಯಿಬಾಬ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿಲ್ಲ. ಆದರೂ ಅವರ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಯಾಗದ ಕಾರ್ಯಕ್ರಮಗಳು ಆದಿವ್ಯ ಚೇತನ ಸ್ವರೂಪದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ ಎಂದರು.

ಆದಿಚುಂಚನಗಿರಿ ಶಿವಮೊಗ್ಗ ಶಾಖೆಯ ಶ್ರೀಗಳಾದ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯಸ್ವಾಮೀಜಿ, ಶ್ರೀ ಸತ್ಯಸಾಯಿ ಸಂಸ್ಥೆಯ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಜಗನ್ನಾಥ ನಾಡಿಗ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next