ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಆಗ್ರಹಿಸಿ ಎಂಪಿಎಂ ಸ್ವಯಂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ನೇತೃತ್ವದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಎಂಪಿಎಂ ಕಾರ್ಖಾನೆಯನ್ನು ರಾಜ್ಯ ಸರ್ಕಾರ 2015 ರ ನವೆಂಬರ್‌ನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಉತ್ಪಾದನೆ ಸ್ಥಗಿತಗೊಳಿಸಿ ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ವಂಚಿತರನ್ನಾಗಿ ಮಾಡಿತು. ಸರ್ಕಾರದ ಈ ಕ್ರಮ ಹಾಗೂ ಆಡಳಿತ ಮಂಡಳಿಯ ಬಲವಂತದಿಂದ ಅಸಂಖ್ಯಾತ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದರು. ಆ ರೀತಿ ಸ್ವಯಂನಿವೃತ್ತಿ ಪಡೆದ ಅನೇಕರಿಗೆ ಸೌಲಭ್ಯ ನೀಡದೆ ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಆದ್ದರಿಂದ ಕೂಡಲೇ ಸರ್ಕಾರ ಸ್ವಯಂ ನಿವೃತ್ತಿ ಪಡೆದವರಿಗರ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಹಾಗೂ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂದರು.
ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಗಳಿಗೆ ನಿಯಾಮಾನುಸಾರ ತಕ್ಷಣ ಹಣ ಪಾವತಿಸಬೇಕಿದೆ. ಆದರೆ ಸರಕಾರ ಹಣ ಬಿಡುಗಡೆ ಮಾಡಿ ವರ್ಷ ಕಳೆದರೂ, ಆಡಳಿತ ವರ್ಗ ಪೂರ್ಣ ಪ್ರಮಾಣದ ಹಣ ವಿತರಿಸದಿರುವುದು ವಿಷಾದನೀಯ. ಅಲ್ಲದೆ ಸರಕಾರದ ಲೆಕ್ಕ ಪರಿಶೋಧಕರಿಂದ ಲೆಕ್ಕಾಚಾರ ಮಾಡಿಸದೆ ಪೆನ್ಶನ್ ಹಾಗೂ ಸೂಪರ್ ಅನ್ಯೂಷನ್ ಹಣವನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸದಿರುವುದರಿಂದ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಗೆ ಕಷ್ಟ ಸಾಧ್ಯವಾಗಿದೆ ಎಂದು ವಿವರಿಸಿದರು.
ಕಂಪನಿ ವಸತಿಗೃಹಗಳನ್ನು ಹೊಂದಿರುವ ಅಧಿಕಾರಿಗಳಿಗೆ ಮತ್ತು ಕೆಲ ಉದ್ಯೋಗಿಗಳಿಗೆ 2ನೇ ಕಂತಿನ ಹಣ ನೀಡಿರುವಂತೆಯೇ, ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಗಳಿಗೂ ಹಣ ನೀಡಬೇಕು. ಪೆನ್ಶನ್ ಹಾಗೂ ಸೂಪರ್ ಅನ್ಯೂಷನ್ ಹಣವನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಬೇಕು. ಹಣಕಾಸು ಇಲಾಖೆ ಮಾಡಿರುವ ಲೆಕ್ಕಚಾರದಂತೆ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ ಮಾಹಿತಿಯ ದೃಢೀಕರಣ ನೀಡಬೇಕು. ಕಾರ್ಮಿಕರ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವವರೆಗೂ ಕಾರ್ಖಾನೆ ಮುಚ್ಚುವ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಕೋರಲಾಗಿದೆ.
ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಕಾರ್ಮಿಕ ಮುಖಂಡರಾದ ಬಿ. ಕಮಲಾಕರ್, ಆರ್. ಅನಂತಕುಮಾರ್, ಚೆನ್ನಿಗಪ್ಪ, ಡಿ.ಎಸ್. ಬಸವರಾಜ್, ಮೂಡಲಗಿರಿ, ರಾಮಣ್ಣ ಮತ್ತಿತರರು ಇದ್ದರು.