ಮಧುಗಿರಿ: ಹಿಂದೆ 50:50 ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಯವರು ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಆಂಧ್ರ ಗಡಿಗ್ರಾಮವಾದ ಸೋದೇನಹಳ್ಳಿಯಲ್ಲಿ ( ಅಂದಿನ ಬೆಳ್ಳಾವಿ ಕ್ಷೇತ್ರ )ಗ್ರಾಮ ವಾಸ್ತವ್ಯ ಮಾಡಿದ್ದು, ಈಗಿನ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಕೆಲ ಶಾಶ್ವತ ಕಾರ್ಯಗಳು ನಡೆದು ನೀರಾವರಿ ಯೋಜನೆಗಳು ಭರವಸೆಯಾಗಿಯೇ ಉಳಿದಿವೆ.
ಮಧುಗಿರಿಯ ಈ ಸೋದೇನಹಳ್ಳಿಯಲ್ಲಿ ಜು.7, 2007 ರಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಈಗಿನ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಅಂದು ತಾವು ನೀಡಿದ್ದ ಭರವಸೆಯಲ್ಲಿ ಸಾಕಷ್ಟು ಈಡೇರಿಸಿದ್ದು, ನೀರಾವರಿ ಯೋಜನೆಗಳ ಭರವಸೆ ಹಾಗೆಯೇ ಉಳಿದಿವೆ. ಅಂದು ಸ್ಥಳೀಯ ಶಾಸಕರು ನಿರ್ಲಕ್ಷ್ಯವಹಿಸಿದ ಪರಿಣಾಮ ಈಗ ವಾಸ್ತವ್ಯ ಹೂಡಿದ್ದ ಮನೆ ಸ್ಥಿತಿ ಮಂಕಾಗಿದೆ. ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದ ಸರ್ಕಾರಿ ಶಾಲೆಯೂ ಸುಭದ್ರ ವಾಗಿದ್ದು, ಆರ್‌ಐಡಿಎಫ್ 10ನೇ ಹಣಕಾಸು ಯೋಜನೆಯಡಿ ತಾವೇ ಉದ್ಘಾಟಿಸಿದ್ದ ಫ್ರೌಢಶಾಲೆ ನೂತನ ಕೊಠಡಿಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ ಅಂದು ಆರಂಭಿಸಿದ ಶೌಚಾಲಯ ಇಂದಿಗೂ ಸುಸ್ಥಿತಿಯಲ್ಲಿದೆ.
ಹರಳೆಣ್ಣೆ ಮಾರುತ್ತಾ ಜೀವನ: ನಾರಾಯಣಪ್ಪನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ, ಈ ಜನಾಂಗದ ನಾರಾಯಣಪ್ಪ ಅವರಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡುವಂತೆ ಅಂದಿನ ಸ್ಥಳೀಯ ಶಾಸಕ (ಬೆಳ್ಳಾವಿ ಕ್ಷೇತ್ರ) ಕೆ.ಎನ್.ರಾಜಣ್ಣನವರಿಗೆ ಸೂಚಿಸಿದ್ದರು. ಆದರೆ ಅದು ಕುಮಾರಸ್ವಾಮಿ ಬೆಂಗಳೂರಿಗೆ ತಲು ಪಿದಾಗ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ನಾರಾಯಣಪ್ಪನಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ಸಿಗಲಿಲ್ಲ. ಈಗ ನಾರಾಯಣಪ್ಪ ವಯೋ ಸಹಜವಾಗಿ ಮೃತ ಪಟ್ಟಿದ್ದು, ನಂತರ ಪೊಲೀಸ್ ಪೇದೆಯಾಗಿ ಕರ್ತವ್ಯದಲ್ಲಿದ್ದ ಪುತ್ರ ನರಸಿಂಹಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಈಗ ಮನೆಯನ್ನು ನರಸಿಂಹಯ್ಯ ಕುಟುಂಬ ನೂತನವಾಗಿ ನಿರ್ಮಿಸಿಕೊಂಡಿದ್ದು, ಮೃತ ನಾರಾಯಣಪ್ಪನ ಮಡದಿ ಅಂಜಮ್ಮ ಈಗಲೂ ಹರಳೆಣ್ಣೆ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.
ಈ ಗ್ರಾಮದಲ್ಲಿ ಹೆಚ್ಚಾಗಿ ಪ.ಜಾತಿ, ಪ.ಪಂಗಡದ ಸಮುದಾಯವಿದ್ದು ಭದ್ರಾ ಮೇಲ್ದಂಡೆ ಬದಲಾಗಿ ಎತ್ತಿನಹೊಳೆ ಜಾರಿ ಯಾಗುತ್ತಿದೆ. ಇದು ಈಡೇರಿದರೆ ಕ್ಷೇತ್ರದ ನೀರಾವರಿ ಭೂಮಿ ಹೆಚ್ಚಾಗಿ ಕೃಷಿ ಕ್ರಾಂತಿ ಹೆಚ್ಚಾಗಲಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ಗುರುಸ್ವಾಮಿ ಎಂಬವರು ಹಿಂದೆ ಕುಮಾರಸ್ವಾಮಿ ವಾಸ್ತವ್ಯ ಮಾಡಿದ್ದಾಗ ನೀಡಿದ್ದ ಮಾತಿನಂತೆ ವಸತಿ ನಿಲಯ, ಶಿವನಗೆರೆಗೆ ಪ್ರೌಢಶಾಲೆ, ಬಡವನಹಳ್ಳಿಗೆ ಪೊಲೀಸ್ ಠಾಣೆ ಮಂಜೂರು ಮಾಡಿದ್ದಾರೆ. ಆದರೆ, ಅಧಿಕಾರ ಕಳೆದುಕೊಂಡ ಕಾರಣ ಕ್ಕಾಗಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ಯಾದ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲಿಲ್ಲ ಎಂದರು.
● ಮಧುಗಿರಿ ಸತೀಶ್