Advertisement
ಭದ್ರಾ ನಾಲೆಯಲ್ಲಿ ನೀರು ಹರಿಸಬಹುದು ಎಂಬ ಆಶಾಭಾವನೆಯೊಂದಿಗೆ ಹಾಲಿ ಕೆಲ ರೈತರು ಕೂರಿಗೆ ಭತ್ತ ಬಿತ್ತಿದ್ದಾರೆ. ಇನ್ನೂ ಕೆಲವರು ನೆಲ ಹಣಿಮಾಡಿಕೊಂಡಿದ್ದಾರೆ. ಆದರೆ, ನೀರು ಸಿಕ್ಕುತ್ತದೆ. ಸಿಕ್ಕರೆ ಭತ್ತದ ನಾಟಿ ಮಾಡಬಹುದು. ಸಿಗದೇ ಹೋದರೆ ಏನು ಬಿತ್ತಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ನೀರಾವರಿ, ಕೃಷಿ ಇಲಾಖೆ, ಜಿಲ್ಲಾಡಳಿತ ಈ ಬಾರಿಯೂ ಭತ್ತ ಬೆಳೆಯುವುದು ಬೇಡ ಎಂದು ತಿಳಿಸಿದ್ದರೂ ಸಹ ಕೆಲ ರೈತರು ಲಭ್ಯವಿರುವ ಬೋರ್‌ವೆಲ್ ನೀರು ಮತ್ತು ನಾಲೆಗೆ ನೀರು ಹರಿಸಿದರೆ ಅದನ್ನೂ ಬಳಸಿಕೊಂಡು ಒಂದುಬೆಳೆ ತೆಗೆಯಬಹುದು ಎಂಬ ಗಟ್ಟಿ ಧೈರ್ಯದಿಂದ ಭತ್ತ ಮಡಿ ಮಾಡಿಕೊಂಡಿದ್ದಾರೆ. ಇದೀಗ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಕಾಡಾ(ಕಮ್ಯಾಂಡ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ) ಸಭೆ ಮುಂದೂಡಿರುವುದು ರೈತರ ಸ್ಥಿತಿಯನ್ನು ಅಯೋಮಯ ಆಗಿಸಿದೆ.
ಈ ಬಾರಿ ಜಲಾಶಯದಲ್ಲಿನ ನೀರಿನ ಮಟ್ಟ ತುಂಬಾ ಕಡಮೆ ಇದೆ. ಜೊತೆಗೆ ಮಳೆ ಪ್ರಮಾಣ ತೀರಾ ಇಳಿಕೆ ಆಗಿದೆ. ಇಂತಹ ಸ್ಥಿತಿಯಲ್ಲಿ ಸಭೆ ಮಾಡಿದರೆ ಪ್ರಯೋಜನ ಇಲ್ಲ ಎಂಬಂತಹ ಮನೋಸ್ಥಿತಿಗೆ ಕಾಡಾ ಸಮಿತಿ ಬಂದಿದೆ. ಹಾಲಿ ಜಲಾಶಯದ ಮಟ್ಟ 144.8 ಅಡಿ ನೀಡಿದ್ದು, 32.58 ಎಂಸಿ ನೀರಿದೆ. ಇದರಲ್ಲಿ 21.58ಟಿಎಂಸಿ ಮಾತ್ರ ಬಳಕೆಗೆ ಲಭ್ಯ ಇದೆ. ಈ ಪೈಕಿ 6 ಟಿಎಂಸಿ ನೀರನ್ನು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ ಸೇರಿದಂತೆ ವಿವಿಧ ಭಾಗಗಳಿಗೆ ಕುಡಿಯಲು ನೀರು ಪೂರೈಸಲು ಮೀಸಲು ಇಡಲಾಗಿದೆ. ಅಲ್ಲಿಗೆ ಜಲಾಶಯದಲ್ಲಿ ಕೃಷಿ ಬಳಕೆಗೆ ಸಿಗುವ ನೀರಿನ ಪ್ರಮಾಣ 15ಟಿಎಂಸಿ ಮಾತ್ರ. ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದ ಮಟ್ಟ 150 ಅಡಿ ಇತ್ತು. ಆಗಲೇ ನಾಲೆಗಳಿಗೆ ನೀರು ಸಹ ಹರಿಸಲಾಗಿತ್ತು. ಮಳೆ ಪ್ರಮಾಣ ಸಹ ಚೆನ್ನಾಗಿ ಇದ್ದ ಕಾರಣ ಸಮಿತಿ ನೀರು ಬಿಡಲು ನಿರ್ಧರಿಸಿತ್ತು. ಆದರೆ, ಈ ಬಾರಿಯ ಸ್ಥಿತಿ ನೋಡಿದರೆ ಜಲಾಶಯಕ್ಕೆ ಹರಿದು ಬಂದಿರುವ ಗರಿಷ್ಠ ನೀರಿನ ಪ್ರಮಾಣ 20000 ಕ್ಯುಸೆಕ್. ಅದೂ ಸಹ ಒಂದು ದಿನ ಮಾತ್ರ ಈ ಪ್ರಮಾಣದ ಒಳ ಹರಿವು ಕಂಡುಬಂದಿದೆ. ಕಳೆದ ವರ್ಷ 25000 ಕ್ಯುಸೆಕ್ ಒಳ ಹರಿವು ಹಲವು ದಿನಗಳ ಕಾಲ ಇತ್ತು. ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿ ಜುಲೈ ಮೊದಲ ವಾರ ಮುಕ್ತಾಯ ಆದರೂ ಒಳ ಹರಿವಿನ ಗರಿಷ್ಠ ಪ್ರಮಾಣ 8000 ಕ್ಯುಸೆಕ್‌ನ ಆಸುಪಾಸಲ್ಲಿಯೇ ಇದೆ. ಈಗ ಆಗುತ್ತಿರುವ ಮಳೆ ಪ್ರಮಾಣ
ಗಮನಿಸಿದರೆ ಮುಂದೆ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗುವ ಸಂಭವ ಇದೆ. ಹಾಲಿ ಚಿತ್ರದುರ್ಗಕ್ಕೆ ಕುಡಿಯುವ ನೀರು ಒದಗಿಸುವ ಮೂಲ ಸಹ ಇದೇ ಜಲಾಶಯ ಆಗಿದೆ. ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯಿಂದ ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ಅನೇಕ ಹಳ್ಳಿಗಳಿಗೆ
ಇಲ್ಲಿಂದಲೇ ನೀರು ಪೂರೈಕೆ ಮಾಡಲಾಗುತ್ತದೆ. ದಾವಣಗೆರೆ ನಗರಕ್ಕೆ ಬೇಸಿಗೆ ಕಾಲದಲ್ಲಿ ನೀರು ಪೂರೈಕೆ ಮಾಡಲು ಇರುವ ಟಿವಿ ಸ್ಟೇಷನ್, ಕುಂದುವಾಡ ಕರೆಗಳಿಗೂ ಸಹ ಭದ್ರಾ ಜಲಾಶಯವೇ ನೀರಿನ ಮೂಲವಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ
ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡರೆ ನಾಲೆಗೆ ನೀರು ಹರಿಸದೇ ಇರುವುದೇ ಉತ್ತಮ ಎಂಬಂತಹ ಸ್ಥಿತಿ ಇದೆ.