ಭಟ್ಕಳ: ಪುರಾಣ ಪ್ರಸಿದ್ಧ ಮಾರುಕೇರಿ ಕಿತ್ರೆ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಿಸಲಾದ ಸೇತುವೆ ಕಾಮಗಾರಿ ಅರ್ಧಂಬರ್ಧ ಆಗಿರುವುದರಿಂದ ಭಕ್ತರಿಗೆ ತೀವ್ರ ತೊಂದರೆಯಾಗಿದ್ದು ಅಪಾಯವಾಗುವ ಭೀತಿ ನಾಗರಿಕರದ್ದಾಗಿದೆ.
ಕಿತ್ರೆ ದೇವಿಮನೆ ರಸ್ತೆ ಸುಧಾರಣೆ ಮತ್ತು ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಎರಡು ಕೋಟಿ ರೂ. ಮಂಜೂರಾಗಿದೆ. ರಸ್ತೆ ಸುಧಾರಣೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಮಳೆಗಾಲ ಆರಂಭ ಆಗಿರುವುದರಿಂದ ಜನತೆಗೆ ತೀವ್ರ ತೊಂದರೆಯಾಗಿದೆ. ಸೇತುವೆ ಕಾಮಗಾರಿ ಮುಗಿದಿದ್ದರೂ ಅಕ್ಕ ಪಕ್ಕದಲ್ಲಿ ಪಿಚ್ಚಿಂಗ್ ಮಾಡದ್ದರಿಂದ ಆಸುಪಸಿನ ತೋಟಿಗರಿಗೆ ಮಳೆ ನೀರಿಗೆ ತಮ್ಮ ತೋಟವೇ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.
ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನವು ಅತ್ಯಂತ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದ್ದು ದಿನಾಲೂ ನೂರಾರು ಜನರು ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲದೇ ಊರ ನಾಗರಿಕರು, ವಿದ್ಯಾರ್ಥಿಗಳೂ ಕೂಡಾ ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದು ಸೇತುವೆಯ ಎರಡೂ ಕಡೆಗಳಲ್ಲಿ ಗರ್ಡಲ್ಸ್ ನಿರ್ಮಾಣ ಮಾಡದೇ ಇರುವುದರಿಂದ ಸದಾ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ವಾಹನ ಸಂಚಾರಕ್ಕೂ ಕೂಡಾ ತೊಂದರೆಯಾಗಿದೆಯಲ್ಲದೇ ಮಳೆ ತೀವ್ರವಾದರೆ ಸೇತುವೆ ಮೇಲೆ ಹೋಗುವುದೇ ಭಯ ಎನ್ನುತ್ತಾರೆ ಹಿರಿಯರಾದ ನಾರಾಯಣ ಗೊಂಡ ಅವರು.
ಈ ಕುರಿತು ಈಗಾಗಲೇ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನ ಸೆಳೆದಿರುವ ನಾಗರಿಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ತಕ್ಷಣ ಕಾಮಗಾರಿ ಮುಗಿಸಿ ಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿ ಎಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ರಸ್ತೆಯ ಪಕ್ಕದಲ್ಲಿ ಗುಡ್ಡದ ಮಣ್ಣನ್ನು ತೆಗೆದಿರುವುದರಿಂದ ಬಂಡೆಯೊಂದು ರಸ್ತೆ ಮೇಲೆಯೇ ಬಿದ್ದಿದ್ದು ರಾತ್ರಿಯಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ, ಹಗಲು ಹೊತ್ತಿನಲ್ಲಾಗಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು ಎನ್ನುತ್ತಾರೆ ದೇವಸ್ಥಾನದ ಆಡಳಿತ ಕಮಿಟಿ ಸದಸ್ಯರು.
ಈಗಾಗಲೇ ಸಾಕಷ್ಟು ಬಾರಿ ಸಂಬಂಧಪಟ್ಟ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೂ ತಿಳಿಸಿದರೂ ಯಾವುದೇ ಪ್ರಗತಿ ಕಾಣದೇ ಇರುವುದರಿಂದ ಜು.24 ರಂದು ಊರ ನಾಗರಿಕರು ಹಾಗೂ ದೇವಸ್ಥಾನದ ಭಕ್ತರು ಸೇರಿ ಸೇತುವೆ ಮೇಲೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಹೇಳಿದ್ದು ಪ್ರತಿಭಟನೆಗೂ ಮುನ್ನ ಗುತ್ತಿಗೆದಾರರು ಕಾಮಗಾರಿ ಪೂರೈಸುವ ಭರವಸೆ ನೀಡಬೇಕಾಗಿದೆ.