Advertisement
ಈ ತನಕ ಹೊರರೋಗಿಗಳಿಗೆ ಮಾತ್ರಚಿಕಿತ್ಸೆ ನೀಡುತ್ತಿದ್ದ ಹಳೆಯ ಓಬಿರಾಯನ ಕಾಲದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಪತ್ರೆಗೆ ಇದೀಗ ಸುವರ್ಣ ಅವಕಾಶ ಬಂದೊದಗಿದೆ. ಕೇಂದ್ರ ರಾಜ್ಯ ಸರಕಾರದ ನ್ಯಾಶನಲ್ ಆಯುಷ್ ಮಿಷನ್ ಯೋಜನೆಯಲ್ಲಿ ಒಳಪಡಿಸಿ ಆಸ್ಪತ್ರೆಯ ಅಭಿವೃದ್ಧಿಗೆ 23 ಲಕ್ಷ ರೂ. ನಿಧಿ ಮಂಜೂರುಗೊಳಿಸಿದೆ. ಈ ಯೋಜನೆಯಲ್ಲಿ ಆಸ್ಪತ್ರೆಯ ಹಳೆಯ ಕಟ್ಟಡವನ್ನು ನವೀಕರಿಸಲಾಗಿದೆ. ಇದರ ಕಾಮಗಾರಿ ಪೂರ್ಣಗೊಂಡಿದೆ. ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ಒಳರೋಗಿ ವಿಭಾಗ ವ್ಯವಸ್ಥೆಯ ಹಾಸಿಗೆ ಹೊಂದಿದ ಆಸ್ಪತ್ರೆಯಾಗಿ ಭಡ್ತಿಗೊಳಿಸಿ ರಾಜ್ಯ ಸರಕಾರ ಅಂಗೀಕರಿಸಿದೆ. ಕುಂಬಳೆ ಗ್ರಾಮ ಪಂಚಾಯತ್ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ಲ್ಯಾಬ್ ನಿರ್ಮಿಸಿದೆ. ಲ್ಯಾಬ್‌ಟೆಕ್ನಿಶಿಯನ್ ಹುದ್ದೆಯನ್ನು ದಿನವೇತನದಲ್ಲಿ ನೇಮಕಗೊಳಿಸಲಾಗಿದೆ.ಡಾ| ಪ್ರಭಾಕರನ್ ಆಯೋಗದ ಕಾಸರಗೋಡು ಅಭಿವೃದ್ಧಿ ಯೋಜನೆಯಲ್ಲಿ ಇದೀಗ 50 ಲಕ್ಷ ರೂ. ಯೋಜನೆಗೆ ತಾಂತ್ರಿಕ ಅನುಮತಿ ದೊರಕಿದೆ. ಆಸ್ಪತ್ರೆಯ ಹಳೆ ಕಟ್ಟಡದ ಹಿಂದಿನ ಭಾಗದಲ್ಲಿ 30 ಹಾಸಿಗೆಯನ್ನು ಹೊಂದಿದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ಮುಂದಿನವಾರ ಆರಂಭವಾಗಲಿರುವುದು.
ಸುಮಾರು 25 ವರ್ಷಗಳಿಂದ ಶಿಥಿಲ ಹಳೆಯ ಕಟ್ಟಡದಲ್ಲಿ ಅವ್ಯವಸ್ಥೆಯಲ್ಲಿ ಕಾರ್ಯಾಚರಿಸುತ್ತಿದ್ದ ಆಸ್ಪತ್ರೆಯ ದುಸ್ಥಿತಿಯನ್ನು ಪರಿಗಣಿಸಿದ ಸರಕಾರದ ನಿಲುವಿಗೆ ಆಸ್ಪತ್ರೆ ಫಲಾನುಭವಿಗಳು ಸಂತಸಪಡುವಂತಾಗಿದೆ. ಉತ್ತಮ ಸೇವೆ ದೊರಕಲಿದೆ
ಈ ಆಸ್ಪತ್ರೆಗೆ ನಿತ್ಯ ನೂರಕ್ಕೂ ಮಿಕ್ಕಿ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವರು. ಈ ತನಕ ಕೆಲವೊಂದು ಅವ್ಯವಸ್ಥೆಯಲ್ಲೂ ಸರಕಾರದ ಸೇವೆ ನೀಡಲಾಗಿದೆ. ಹೆಚ್ಚಿನ ಸೇವೆಗಾಗಿ ಇನ್ನೋರ್ವ ವೈದ್ಯರನ್ನು ಸರಕಾರ ನೇಮಕಗೊಳಿಸಿದೆ. ಮುಂದಿನ ದಿನಗಳಲ್ಲಿ ಸಕಲ ಸೌಲಭ್ಯಗಳೊಂದಿಗೆ ಆಸ್ಪತ್ರೆಯ ಸೇವೆ ಸಾರ್ವಜನಿಕರಿಗೆ ದೊರಕಲಿದೆ.
ಡಾ| ಝಕೀರಾಲಿ,
ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ
Related Articles
ರಾಜ್ಯಕ್ಕೆ ಹೆಮ್ಮೆಯಾಗಿರುವ ಮೊಗ್ರಾಲ್ ಯುನಾನಿ ಆಸ್ಪತ್ರೆಗೆ ಸರಕಾರದಿಂದ ಮಂಜೂರಾದ ಅಭಿವೃದ್ಧಿ ಯೋಜನೆಯ ಕಾಮಗಾರಿ ಅತ್ಯಂತ ಶೀಘ್ರವಾಗಿ ಉತ್ತಮ ಗುಣಮಟ್ಟದೊಂದಿಗೆ ನಡೆದು ಹಲವು ವರ್ಷಗಳಿಂದ ಆಸ್ಪತ್ರೆಯ ಅವಗಣನೆ ಎಂಬ ಆರೋಪದಿಂದ ಮುಕ್ತವಾಗಬೇಕೆಂಬುದಾಗಿ ಸಾರ್ವಜನಿಕರ ಬೇಡಿಕೆಯಾಗಿದೆ.
-ಮೂಸಾ ಮೊಗ್ರಾಲ್
ಮಾಜಿ ಸದಸ್ಯರು ಕುಂಬಳೆ ಗ್ರಾ.ಪಂ.
Advertisement
-ಅಚ್ಯುತ ಚೇವಾರ್