ಮುಂಬೈ: ಗಾಯದ ಕಾರಣದಿಂದ ಕಳೆದೊಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಇದೀಗ ಮತ್ತೆ ವೃತ್ತಿಪರ ಕ್ರಿಕೆಟ್ ಗೆ ಮರಳಿದ್ದಾರೆ. ಮಧ್ಯಪ್ರದೇಶ ವಿರುದ್ದದ ರಣಜಿ ಪಂದ್ಯದಲ್ಲಿ ಬಂಗಾಳ ತಂಡದ ಪರ ಶಮಿ ಆಡಿದ್ದಾರೆ. ಪಂದ್ಯದಲ್ಲಿ 43.2 ಓವರ್ ಎಸೆದ ಶಮಿ ತನ್ನ ಫಿಟ್ನೆಸ್ ಸಾಬೀತು ಮಾಡಿದ್ದಾರೆ.
ರಣಜಿ ಪಂದ್ಯದಲ್ಲಿ ಅವರು ಏಳು ವಿಕೆಟ್ ಕಿತ್ತಿದ್ದು, ಅಲ್ಲದೆ ಬ್ಯಾಟಿಂಗ್ ನಲ್ಲಿ 36 ರನ್ ಗಳಿಸಿದ್ದಾರೆ. ಈ ಪಂದ್ಯವನ್ನು ಬಂಗಾಳ 11 ರನ್ ಅಂತರದಿಂದ ಗೆದ್ದುಕೊಂಡಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ.
ರಣಜಿ ಪ್ರದರ್ಶನದ ಬಳಿಕ ಶಮಿ ಅವರನ್ನು ಕೆಲವೇ ದಿನಗಳಲ್ಲಿ ಆರಂಭವಾಗುವ ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಗೆ ಆಯ್ಕೆ ಮಾಡಲಾಗುವುದು ಎಂದು ವರದಿ ಹೇಳಿದೆ. ಮುಂದಿನ ಶುಕ್ರವಾರದಿಂದ ಪರ್ತ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದೆ.
ನವೆಂಬರ್ 22 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡದಲ್ಲಿ ಶಮಿಯನ್ನು ಸೇರಿಸಲು ಶಮಿ ಸಿದ್ಧರಾಗಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶಮಿ ಆಸ್ಟ್ರೇಲಿಯಾಕ್ಕೆ ತೆರಳಬಹುದು, ಅವರಿಬ್ಬರೂ ಮೊದಲ ಪಂದ್ಯಕ್ಕೆ ಮುಂಚಿತವಾಗಿ ತಂಡವನ್ನು ಸೇರಿಕೊಳ್ಳಬಹುದು ಎಂದು ಹೇಳಿದೆ. ಆದರೆ, ಪರ್ತ್‌ನಲ್ಲಿ ನಡೆದ ಪಂದ್ಯದ ನಂತರವೇ ಶಮಿ ಅವರನ್ನು ಆಡುವ ಬಳಗಕ್ಕೆ ಸೇರಿಸಲಾಗುವುದು ಎಂದು ವರದಿ ಹೇಳಿದೆ.
ನಾಯಕ ರೋಹಿತ್ ಶರ್ಮಾ ಅವರು ಕೂಡಾ ಎರಡನೇ ಮಗುವಿನ ಜನನದ ಕಾರಣದಿಂದ ತಂಡದ ಬಾಕಿ ಸದಸ್ಯರೊಂದಿಗೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿಲ್ಲ. ಕಳೆದ ಶುಕ್ರವಾರ ರೋಹಿತ್ ಪತ್ನಿ ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೋಹಿತ್ ಮೊದಲ ಪಂದ್ಯಕ್ಕೆ ಲಭ್ಯರಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.