ಬೆಂಗಳೂರು: ವಿಜ್ಞಾನ ಕ್ಷೇತ್ರಕ್ಕೆ ಬಿಜಿಎಲ್ ಸ್ವಾಮಿ ಅವರ ಕೊಡುಗೆ ಅಪಾರ. ಸರಳ ಸಾಹಿತ್ಯದಲ್ಲಿ ಸಸ್ಯ ಸಂಕುಲವನ್ನು ಓದುಗರಿಗೆ ಪರಿಚಯಿಸಿ ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಲೇಖಕ ಎಸ್.ದಿವಾಕರ ಬಣ್ಣಿಸಿದರು.
ಸರ್ಕಾರಿ ಕಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಿಜಿಎಲ್ ಸ್ವಾಮಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜನರಿಗೆ ಪರಿಸರದ ಬಗ್ಗೆ ತಿಳಿದಿರುವ ಕುತೂಹಲದ ವಿಷಯಗಳನ್ನು ಪರಿಸರ ವಿಜ್ಞಾನ ಕೃತಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಬಿಜಿಎಲ್ ಸ್ವಾಮಿ ಅವರು ಕಾಲೇಜಿನಲ್ಲಿದ್ದಾಗಲೇ ಬರವಣಿಗೆಯ ಹವ್ಯಾಸ ಬೆಳಸಿಕೊಂಡಿದ್ದರು. ವೈಜ್ಞಾನಿಕ ಲೇಖನಗಳ ಮೂಲಕ ಸಾಹಿತ್ಯ ಜಗತ್ತಿಗೆ ಪರಿಚಯವಾದರು. ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಆಗ ಪ್ರಕಟಿಸುತ್ತಿದ್ದ “ಪ್ರಬುದ್ಧ ಕರ್ನಾಟಕ ‘ಪತ್ರಿಕೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆದು ಓದುಗರಲ್ಲಿ ಪರಿಸರ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿದರು ಎಂದು ತಿಳಿಸಿದರು.
ಸುಮಾರು ಒಂಬತ್ತು ಭಾಷೆಗಳನ್ನು ಬಲ್ಲವರಾಗಿದ್ದ ಸ್ವಾಮಿ ಅವರಿಗೆ ವ್ಯಂಗ್ಯಚಿತ್ರಗಳ ಬಗ್ಗೆ ತೀವ್ರ ಆಸಕ್ತಿ ಇತ್ತು. ತಮ್ಮ ಕೃತಿಗಳಿಗೆ ತಾವೇ ವ್ಯಂಗ್ಯ ಚಿತ್ರಗಳನ್ನು ಬರೆಯುತ್ತಿದ್ದರು. ಹಸಿರು ಹೊನ್ನು ಕೃತಿಯಲ್ಲಿ ವ್ಯಂಗ್ಯಚಿತ್ರಗಳನ್ನು ಬಳಸಿಕೊಂಡಾಗ ಡಿ.ವಿ.ಜಿ ಅವರು ಕೂಡ ತಮ್ಮ ಪುತ್ರನ ವ್ಯಂಗ್ಯ ಚಿತ್ರವನ್ನು ನೋಡಿ ಆನಂದಪಟ್ಟಿದ್ದರು ಎಂದು ತಿಳಿಸಿದರು.
ಸೆಂಟರ್ ಫಾರ್ ಪಬ್ಲಿಕ್ ಅಂಡರ್‌ಸ್ಟಾಂಡಿಗ್ ಆಫ್ ಸೈನ್ಸ್‌ನ ನಿರ್ದೇಶಕ ಡಾ.ಟಿ.ಎಸ್.ಚನ್ನೇಶ್, ಬಿಜಿಎಲ್ ಸಾಹಿತ್ಯ ಮತ್ತು ವಿಜ್ಞಾನ ಬರಹಳಗ ಕುರಿತು ಮಾಹಿತಿ ನೀಡಿದರು. ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜಶೇಖರ್, ಸದ್ಭವನಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಮುಂ.ಅ.ವೆಂಕಟೇಶ್, ಡಾ.ರುದ್ರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.