ಬಾಗಲಕೋಟೆ: ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಈ ಬಾರಿ ಇಂಡಿಯನ್ ಯೂಥ್ ಕಾಂಗ್ರೆಸ್ ಆ್ಯಪ್ ಮೂಲಕ ನಡೆಸಿದ್ದು, ಜಿಲ್ಲೆಯಲ್ಲಿ ಅಕ್ರಮ ನಡೆದಿದೆ.ಆ್ಯಪ್ ಮೂಲಕ ಚುನಾವಣೆ ನಡೆಸಿದ್ದರಿಂದ ಹಲವಾರು ಜನ ಮತದಾನದಿಂದ ವಂಚಿತರಾಗಿದ್ದಾರೆ. ಚುನಾವಣೆಯನ್ನು ಬ್ಯಾಲೇಟ್ ಪೇಪರ್ ಮೂಲಕ ಮತ್ತೂಮ್ಮೆ ನಡೆಸಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮತದಾನ ಮಾಡುವಾಗ ತಂತ್ರಾಂಶದಲ್ಲಿ ದೋಷವಿತ್ತು. ಸರ್ವರ್ ಸರಿಯಾಗಿ ಇರಲಿಲ್ಲ. ಹೀಗಾಗಿ ಮತದಾನ ಮಾಡಲು ಎಷ್ಟೋ ಜನರಿಗೆ ಸಾಧ್ಯವಾಗಿಲ್ಲ. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜಮಖಂಡಿ ತಾಲೂಕಿನ ರಾಹುಲ್ ಸೂರ್ಯಕಾಂತ ಕಲೂತಿ ಎಂಬುವವರು ಆಯ್ಕೆಯಾಗಿದ್ದಾರೆ. ಸಾವಳಗಿ, ಜಮಖಂಡಿ ಭಾಗದಲ್ಲಿ ನಮ್ಮ ಪಕ್ಷದ ಸದಸ್ಯರಲ್ಲದವರಿಂದಲೂ ಮತದಾನ ಮಾಡಿಸಲಾಗಿದೆ. ಜಮಖಂಡಿ ತಾಲೂಕಿನಲ್ಲಿ ಹೆಚ್ಚು ಮತದಾನವಾಗಿದೆ. ವಿವಿಧ ತಾಲೂಕಿನಲ್ಲಿ ಮತದಾನ ಮಾಡಲು ತಂತ್ರಾಂಶದಲ್ಲಿನ ಸಮಸ್ಯೆ ಅಡ್ಡಿಯಾಗಿತ್ತು. ಅಲ್ಲದೇ 900 ಮತಗಳನ್ನು ರಿಜೆಕ್ಟ್ ಮಾಡಲಾಗಿದೆ. ಹೀಗಾಗಿ ಫಲಿತಾಂಶದಲ್ಲಿ ವ್ಯತ್ಯಾಸವಿದೆ. ಕೂಡಲೇ ಮರು ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‌ಗೆ 12 ಸಾವಿರ ಜನ ಮತದಾರರಿದ್ದು, 6,550 ಜನ ಮಾತ್ರ ಮತದಾನ ಮಾಡಿದ್ದಾರೆ. ಅದರಲ್ಲಿ 900 ಮತಗಳನ್ನು ರಿಜೆಕ್ಟ್ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ :ಸಿನಿಮಾ ಮನರಂಜನಾ ಮಾಧ್ಯಮ
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿಶಿರ ಮಲಘಾಣ, ವಿವಿಧ ಬ್ಲಾಕ್ ಅಧ್ಯಕ್ಷರು ಹಾಗೂ ಪ್ರಮುಖರಾದ ಮಹೇಶ ಜಾಲವಾದಿ, ಹುಲ್ಲಪ್ಪ ತೇಜಿ, ರವಿಕುಮಾರ ನಾಗನಗೌಡರ, ಹನಮಂತ ನಾಯ್ಕರ, ಚಿದಾನಂದ ನಂದ್ಯಾಳ, ಪ್ರವೀಣ ಪಾಟೀಲ, ಗೋಪಾಲ ಲಮಾಣಿ, ಮಾಳಿಂಗ ಪಾಟೀಲ, ಬಸವರಾಜ ಹೂವಿನಹಳ್ಳಿ, ಮಹಾಲಿಂಗ ಪಾಟೀಲ, ಮಲ್ಲೇಶ ಕಂಬಾರ ಮುಂತಾದವರು ಉಪಸ್ಥಿತರಿದ್ದರು.