Advertisement

ಎಲ್ಲ ಕೆಲಸದೆಲ್ಲೆ ಮೀರಿ…

03:06 PM Jan 17, 2018 | |

ಮನೆಯನ್ನು ತಮ್ಮ ಪ್ರೀತಿ, ಮಮತೆ, ವಾತ್ಸಲ್ಯದಿಂದ ಪೊರೆಯುತ್ತಿರುವ ಗೃಹಿಣಿಯರ ದುಡಿಮೆಗೆ ಬೆಲೆ ಕಟ್ಟಲಾಗದು. ಆದರೂ ಈ ಬಗ್ಗೆ ಜಗತ್ತು ಒಳಗೊಳಗೇ ಯೋಚಿಸತೊಡಗುತ್ತದೆ. ಇತ್ತೀಚೆಗೆ “ವಿಶ್ವ ಸುಂದರಿ’ ಮಾನುಷಿ ಚಿಲ್ಲರ್‌ಗೆ, “ಪ್ರಪಂಚದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹುದ್ದೆ ಯಾವುದು?’ ಎಂದು ಕೇಳಿದಾಗ ಅವಳ ಉತ್ತರ, “ಅಮ್ಮ ಮಾಡುವ ಕೆಲಸ’ ಎಂದಿದ್ದಳು. ಕವಿ ಕೆಎಸ್‌ನ, “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ’ ಎಂದಿದ್ದೂ ಹಳೇ ಕತೆ. ಆದರೆ, ಜನಗಣತಿ ಅಂತೆಲ್ಲ ಬಂದಾಗ, ಗೃಹಿಣಿಯರಿಗೆ “ಅನ್‌ ಪ್ರಾಡಕ್ಟೀವ್‌’ ಎಂಬ ಹಣೆಪಟ್ಟಿ ಹಚ್ಚಲಾಗುತ್ತೆ. ಯಾಕೆ ಹೀಗೆ? ಮಹಿಳೆಯರೇ ಏಕೆ ಮನೆಗೆಲಸ ಮಾಡಬೇಕು? ಸಮಾಜದ ಒಡಲಲ್ಲಿ ಈ ಮನಃಸ್ಥಿತಿ ರೂಪುತಳೆದಿದ್ದಾದರೂ ಹೇಗೆ? ಈ ಕುರಿತು ಇಲ್ಲೆರಡು ವಾದಗಳು ಬೆಳಕು ಚೆಲ್ಲಿವೆ…

Advertisement

ಮಹಿಳೆಗೇ ಏಕೆ ಮನೆಕೆಲಸದ ಹೊಣೆ?
ಡಾ|| ಕೆ.ಎಸ್‌. ಪವಿತ್ರ
ನೀವು ಮನೆ ಕೆಲಸ ಮಾಡ್ತೀರಾ? ಅರೆ, ಇದೆಂಥಾ ಪ್ರಶ್ನೆ!? “ನಾವು ಮನೆ ಕೆಲಸ ಮಾಡದೇ ಇದ್ರೆ ಇನ್ನಾéರು ಮಾಡ್ತಾರೆ?’ ಅಂತೀರಾ! “ಕೆಲಸದವರು’ ಅಂಥ ಒಬ್ಬ ಸಹಾಯಕಿ ಬಂದರೂ ಮನೆ ಕೆಲಸವನ್ನು ಅವರ ಜೊತೆಯಲ್ಲಿ, ಅವರು ಹೋದ ಮೇಲೆ  ಮಾಡುವುದು, ಕೊನೆಗೆ ಬಟ್ಟೆ ಒಗೆಯಲು- ಪಾತ್ರೆ ತೊಳೆಯಲು ಬಂದರೂ ಅಡುಗೆ ಮಾಡುವ ಜವಾಬ್ದಾರಿ ಹೊರುವುದು ಹೆಂಗಸರದ್ದೇ ಕೆಲಸ ಎಂಬುದು ಒಂದು ಅಘೋಷಿತ ಕಾನೂನಾಗಿ ನಿಂತುಬಿಟ್ಟಿದೆ. ಆದರೆ ಈ ಜವಾಬ್ದಾರಿಗೆ ಸಂಬಳವೂ ಇಲ್ಲ, ವೇಳಾಪಟ್ಟಿಯೂ ಇಲ್ಲ ಅಥವಾ ನಿವೃತ್ತಿಯೂ ಇಲ್ಲ!


ಇದು ನಮ್ಮ ದೇಶದ ಕಥೆ ಮಾತ್ರ ಅಲ್ಲ. “ಮುಂದುವರಿದಿದೆ’ ಎಂದು ನಾವು ಭಾವಿಸುವ ಅಮೆರಿಕದಲ್ಲೂ ಇದು ನಿಜವೇ. ಕಳೆದವರ್ಷ ಅಮೆರಿಕನ್‌ ಸೋಶಿಯಾಲಾಜಿಕಲ್‌ ಸಂಘದ ಸಮ್ಮೇಳನದಲ್ಲಿ ಕೇಳಿಬಂದ ಸಂಗತಿಯಿದು. ಹೆಚ್ಚಿನ ಅಮೆರಿಕನ್ನರು ಈಗಲೂ ಮಹಿಳೆಯರೇ ಸ್ವತ್ಛಗೊಳಿಸುವುದು, ಅಡುಗೆ ಮಾಡುವುದು, ದಿನಸಿ ಕೊಳ್ಳುವುದು ಮತ್ತು ಮಕ್ಕಳನ್ನು ಬೆಳೆಸುವುದು- ಇವುಗಳನ್ನು ಮಾಡಲೇಬೇಕು. ಮಹಿಳೆ ತನ್ನ ಸಂಗಾತಿಯಷ್ಟೇ ದುಡಿಯುವ ಪೂರ್ಣಪ್ರಮಾಣದ ಕೆಲಸದಲ್ಲಿದ್ದರೂ ಇವುಗಳನ್ನು ಅವರೇ ಮಾಡಬೇಕು ಎಂದೇ ನಂಬಿದ್ದಾರೆ. ಹೊರಗೆ ಹೋಗುವ ಕೆಲಸಗಳು- ಬ್ಯಾಂಕ್‌- ಬಿಲ್ಲುಗಳನ್ನು ಕಟ್ಟುವುದು ಮತ್ತು ಕಾರ್‌ ಮುಂತಾದ ವಾಹನ ರಿಪೇರಿಗಳು ಪುರುಷರು ಮಾಡಬೇಕಾದ ಕೆಲಸಗಳು ಎಂದು ಗಂಡಸರು- ಹೆಂಗಸರು ಇಬ್ಬರೂ ಬಲವಾಗಿ ನಂಬಿರುವುದು ಈ ಅಧ್ಯಯನದಲ್ಲಿ ಕಂಡುಬಂತು. ಅಮೆರಿಕದಲ್ಲೇ ಹೀಗೆ ಎಂದ ಮೇಲೆ ಇಲ್ಲಿ!? ಇಂಥ ನಂಬಿಕೆಗಳು 21ನೇ ಶತಮಾನದ ಈ ದಿನಗಳಲ್ಲಿಯೂ ವ್ಯಾಪಕವಾಗಿಯೇ ಇವೆ.

ತೊಂದರೆಯೇನು? ಒಬ್ಬರು ಒಂದು ಮಾಡಿದರೆ ಇನ್ನೊಬ್ಬರು ಇನ್ನೊಂದು ಮಾಡುತ್ತಾರೆ. ಒಟ್ಟಿನಲ್ಲಿ ಮನೆ ಸುಸೂತ್ರವಾಗಿ ನಡೆದರೆ ಆಯಿತು ಎಂದು ನೀವೆನ್ನಬಹುದು. ಹೌದು, ವಿಷಯ ಹಾಗಿದ್ದರೆ ಪರವಾಗಿರಲಿಲ್ಲ. ಆದರೆ, ಬ್ಯಾಂಕಿಗೆ ಹೋಗುವುದು, ಕಾರ್‌ ರಿಪೇರಿಗಳು ಯಾವಾಗಲಾದರೊಮ್ಮೆಯಾದರೆ, ಅಡುಗೆ ಮಾಡುವುದು, ಮಕ್ಕಳನ್ನು ಬೆಳೆಸುವುದು ಪ್ರತಿನಿತ್ಯ ಮಾಡಬೇಕಲ್ಲ! ಒಂದುವೇಳೆ, ಮನೆಕೆಲಸ ಮುಗಿಸಿ, ಆಕೆ ಕಚೇರಿ ಕೆಲಸಕ್ಕೆ ಹೋಗುವುದಾದರೆ, ಅದು ಆಕೆಗೆ ಸೆಕೆಂಡ್‌ ಶಿಫ್ಟ್!

ವೈಜ್ಞಾನಿಕವಾಗಿ ಈ ಸಮಸ್ಯೆಯನ್ನು ಒಂದಿಷ್ಟು ವಿವರವಾಗಿ ಪರಿಶೀಲಿಸೋಣ. ಮಕ್ಕಳನ್ನು ಬೆಳೆಸುವುದನ್ನೇ ತೆಗೆದುಕೊಂಡರೆ, ಬಸಿರು- ಬಾಣಂತನಗಳಲ್ಲಿ ಮಗುವಿನ ಜೊತೆಯಲ್ಲಿ ಸಮಯ ಕಳೆಯುವ ತಾಯಿಗೆ “ತಾಯ್ತನ’ ಸಹಜ, ಜೈವಿಕವಾದದ್ದು. ಹಾಗಾಗಿ ಆಕೆಗೆ ಪ್ರಕೃತಿದತ್ತವಾಗಿರುವ ‘maternal instinct’ ಪುರುಷನಿಗೆ ಸಹಜವಾಗಿ ಬರಲು ಸಾಧ್ಯವಿಲ್ಲ ಎನ್ನುವಂಥದ್ದು ವೈಜ್ಞಾನಿಕವಾಗಿಯೂ ಒಪ್ಪ ತಕ್ಕ ಮಾತೇ. ಆದರೆ, ಮನೆ ಕೆಲಸಗಳಾದ ಸ್ವತ್ಛಗೊಳಿಸುವುದು, ಪಾತ್ರೆ- ಬಟ್ಟೆ ತೊಳೆಯುವುದು, ಮೊದಲಾದವಕ್ಕೆ ಯಾವ ಸ್ತ್ರೀತ್ವದ ಜೈವಿಕ ಹಿನ್ನೆಲೆಯೂ ಇಲ್ಲ. ಯಾವುದೇ ಕೆಲಸ ಮಾಡಿದಂತೆ, ಮಾಡುವುದು ಅನಿವಾರ್ಯವಾದಂತೆ ಸ್ತ್ರೀಯಾಗಲಿ, ಪುರುಷನಾಗಲೀ ಅದನ್ನು ಕಲಿಯಬಲ್ಲರು.

ಪುರುಷ- ಮಹಿಳೆಯರಲ್ಲಿರುವ ಈ ಮನೆಕೆಲಸದ ಅಂತರದ ಮೂಲ ಹುಡುಕಿದರೆ ಅದನ್ನು ನಾವು ಬಾಲ್ಯದಲ್ಲಿಯೇ ಕಾಣಬಹುದು. ಬಹಳಷ್ಟು ಅಧ್ಯಯನಗಳಲ್ಲಿ ನಾವು ನೋಡುವ ಗಮನಾರ್ಹ ಸಂಗತಿಯೆಂದರೆ, ಮನೆಯ ಕೆಲಸಗಳಲ್ಲಿ ಚಿಕ್ಕ ಹುಡುಗಿಯರು ತೊಡಗಿಕೊಂಡಷ್ಟು ಚಿಕ್ಕ ಹುಡುಗರು ತೊಡಗಿಸಿಕೊಳ್ಳುವುದಿಲ್ಲ. ಅಥವಾ ಸರಿಯಾಗಿ ಹೇಳಬೇಕೆಂದರೆ ಅಮ್ಮಂದಿರು ಅವರನ್ನು ತೊಡಗಿಕೊಳ್ಳಲು ಬಿಡುವುದಿಲ್ಲ. ಅಂದರೆ, ಬಾಲ್ಯದಿಂದಲೇ ಹುಡುಗಿಯರು ಮನೆ ಕೆಲಸ ತಮ್ಮ ಮೇಲೆ ಬೀಳುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ, ಹುಡುಗರು, ಈ ಹುಡುಗಿಯರು ಮನೆಕೆಲಸ ಮಾಡುತ್ತಾರೆ ಎಂಬುದನ್ನು ಕಲಿಯುತ್ತಾರೆ. ಅಷ್ಟೇ ಅಲ್ಲ, ಹುಡುಗರು ಮನೆ ಕೆಲಸವನ್ನು ಮಾಡುವಾಗ ಸಿಕ್ಕುವ ಹೊಗಳಿಕೆ- ಪ್ರಶಂಸೆಗಳು- ತತ್‌ಕ್ಷಣದ ಸಹಾಯ ಇವು, ಹುಡುಗಿಯರಿಗೆ “ಹುಡುಗಿ ಎಂದ ಮೇಲೆ ಮಾಡಲೇಬೇಕಾದ’ ಅನಿವಾರ್ಯತೆಯಾಗಿ ಮಾಯವಾಗಿ ಬಿಡುತ್ತವೆ.

Advertisement

ಎಲ್ಲಕ್ಕಿಂತ ಹೆಚ್ಚು ಆತಂಕ ಮೂಡಿಸುವ ಸಂಗತಿಯೆಂದರೆ, ಇಂದಿಗೂ ಮಹಿಳೆಯರ ಮನೆಕೆಲಸಕ್ಕೆ ಯಾವುದೇ ಮನ್ನಣೆಯಿರದಿರುವುದು. ಮಕ್ಕಳಾಗಲೀ, ಪತಿಯಾಗಲೀ “ಅಮ್ಮ’ ಮಾಡುವ ಮನೆಕೆಲಸ ಆಕೆ “ಮಾಡಲೇಬೇಕಾದ’ ಕೆಲಸವಾಗಿ ಭಾವಿಸುವುದು. ಅದರೊಂದಿಗೆ ಬೆಳಗಿನಿಂದ ರಾತ್ರಿಯವರೆಗೆ ದುಡಿಯುವ ಆಕೆಗೆ “ನೀನು ಏನು ಮಾಡ್ತೀಯಾ? ನಾಲ್ಕು ಜನರಿಗೆ ಅಡುಗೆ ಮಾಡೋದಷ್ಟೇ ತಾನೆ?” ಎಂದು ಆಕೆಯ ಶ್ರಮವನ್ನು “ಮಿನಿಮೈಜ್‌’ ಮಾಡುವುದು ಸರ್ವೆàಸಾಮಾನ್ಯ. ತನ್ನ ಶ್ರಮಕ್ಕೆ ಕಿಂಚಿತ್‌ ಮಾತಿನ ಮನ್ನಣೆಯೂ ದೊರೆಯದಾಗ ಸಹಜವಾಗಿ ಬೇಸರ- ಅತೃಪ್ತಿಗಳು ಆಕೆಯನ್ನು ಕಾಡುತ್ತವೆ. ಇವು ನಿಸ್ಸಹಾಯಕ ಕೋಪವಾಗಿ ಪರಿವರ್ತನೆ ಹೊಂದುತ್ತವೆ. ಕೋಪದಿಂದ ಕೂಗುವುದು ರೂಢಿಯಾಗಿಬಿಡುತ್ತವೆ. “ಇವರಿಗೆ ಯಾವಾಗ್ಲೂ ಕೋಪ, ಕಿರುಚಾ¤ನೇ ಇರ್ತಾರೆ, ಒಂದು ಲೈಟ್‌ ಆಫ್ ಮಾಡದಿದ್ರೆ, ಬೆಡ್‌ಶೀಟ್‌ ಮಡಚದಿದ್ದರೆ, ನಲ್ಲಿ ಹಾಗೇ ಬಿಟ್ರೆ ಭೂಕಂಪಾನೇ ಆಯ್ತು ಅನ್ನೋ ಥರ ಕಿರುಚಾಡ್ತಾರೆ’ ಎನ್ನುವ ವಾಕ್ಯಗಳು ಪ್ರತಿ ಗೃಹಿಣಿಯರದ್ದು.

ಮನೆಕೆಲಸಕ್ಕೆ ಮನ್ನಣೆ ದೊರೆಯುವುದು, ಅಗತ್ಯವಾಗಿ ಆಗಬೇಕಿರುವ ಬದಲಾವಣೆ. ಪುರುಷನಾಗಲೀ, ಮಹಿಳೆಯಾಗಲೀ ಮಾಡುವ ಮನೆಕೆಲಸವು ನಾವು ಹೊರಗೆ ಮಾಡುವ ಕೆಲಸದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ ಎಂಬುದು ಸತ್ಯದ ಮಾತು. ಆದರೆ, ಮನೆಕೆಲಸಕ್ಕೆ ಮನ್ನಣೆ ದೊರಕಬೇಕಾದರೆ ಅದರಲ್ಲಿ ಪುರುಷನಷ್ಟೇ ಮಹಿಳೆಯದ್ದೂ ಪಾತ್ರವಿದೆ. ಏಕೆಂದರೆ, ಹೆಚ್ಚಿನ ಮಹಿಳೆಯರು ತಮ್ಮ ಮನೆಕೆಲಸವನ್ನು ಇತರರು ಗುರುತಿಸುವುದನ್ನು ಅಪೇಕ್ಷಿಸಿದರೂ, ತಾವು ಇತರ ಮಹಿಳೆಯರ ಕೆಲಸವನ್ನು ಗುರುತಿಸುವುದೇ ಇಲ್ಲ. ಅಷ್ಟೇ ಅಲ್ಲ, ತಮ್ಮ ಗಂಡುಮಕ್ಕಳು ಮನೆಕೆಲಸ ಮಾಡುವುದನ್ನು ಬೆಂಬಲಿಸುವುದಿಲ್ಲ! ಹೆಣ್ಣು ಮಕ್ಕಳು- ಸೊಸೆಯರು ಅಡುಗೆ ಬಡಿಸುತ್ತಿದ್ದರೆ ಕೈಹಾಕದ ತಾಯಿ- ಅತ್ತೆಯಂದಿರು, ಅಳಿಯ- ಮಗ ಬಡಿಸಲು ಕೈ ಹಾಕಿದರೆ “ಅಯ್ಯೋ, ನೀನ್ಯಾಕೆ ಬಡಿಸ್ತೀಯಾ’ ಎಂದು ತತ್‌ಕ್ಷಣ ತಮ್ಮ ಸೊಂಟನೋವು- ಮಂಡಿನೋವು ಎಲ್ಲವನ್ನೂ ಮರೆತು ತಾವೇ ಬಡಿಸಲು ಮುಂದಾಗುತ್ತಾರೆ. ಹಾಗಾಗಿ, ಮನೆಕೆಲಸಕ್ಕೆ ಮನ್ನಣೆ ದೊರೆಯಬೇಕೆಂದರೆ, ಮೊದಲು ಮಹಿಳೆ ತನ್ನ ಕೆಲಸವನ್ನು ತಾನು ಗೌರವಿಸುವಂತಾಗಬೇಕು, ಇತರ ಮಹಿಳೆಯರ ಮನೆಕೆಲಸವನ್ನು ಗುರುತಿಸುವಂತಾಗಬೇಕು. ತಮ್ಮ ಗಂಡು ಮಕ್ಕಳಿಗೆ ಮನೆಕೆಲಸ ಕಲಿಸಬೇಕು. ಗಂಡು ಮಕ್ಕಳು ಕೆಲಸ ಮಾಡುತ್ತೇವೆಂದು ಮುಂದೆ ಬಂದಾಗ, ಅದನ್ನು ಒಪ್ಪಿಕೊಳ್ಳಬೇಕು. ಅಂದರೆ, ಲಿಂಗಸಮಾನತೆ ಬೇರೆ ಕ್ಷೇತ್ರಗಳಲ್ಲಿ ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಆದರೆ, ಮನೆಕೆಲಸದಲ್ಲಿ, ಮನೆಯಲ್ಲಿ ಬೇಕೇ ಬೇಕು!
     
ಗಂಡನಿಗಿಂತ ಗೃಹಿಣಿಯ ಸಂಭಾವನೆ ಹೆಚ್ಚು!
ಗೃಹಿಣಿಯ ಸೇವೆಗೆ ಬೆಲೆಕಟ್ಟಲಾಗದು. ಅಂದಮಾತ್ರಕ್ಕೆ, ಆಕೆಯನ್ನು “ಅನ್‌ಪ್ರಾಡಕ್ಟಿವ್‌’ ಎಂದು ಪರಿಗಣಿಸುವುದು ಎಷ್ಟು ಸರಿ? ಒಂದು ವೇಳೆ ಗೃಹಿಣಿ ಸಂಬಳ ಕೇಳಿದ್ದೇ ಆದರೆ, ಮಹಾನಗರದ ಲೆಕ್ಕಾಚಾರದಲ್ಲಿ ಮಾಸಿಕವಾಗಿ, ಆಕೆ ಎಷ್ಟು ದುಡಿಯಬಹುದು ಎಂಬುದರ ಅಂದಾಜಿನ ಪಟ್ಟಿ ಇಲ್ಲಿದೆ…
1. ಸಹಾಯಕಿ- 10,000
2. ಮನೆ ಸ್ವತ್ಛತೆ- 7,000
3. ಪಾತ್ರೆ ಸ್ವತ್ಛತೆ- 3,000
4. ಮಕ್ಕಳ ಪಾಲನೆ- 6,000
5. ಅಡುಗೆ ಮಾಡಲು- 8,000
6. ಮನೆಭದ್ರತೆ- 4,000
7. ಮಕ್ಕಳನ್ನು ಶಾಲೆ ಬಿಡುವುದು- ಕರೆತರುವುದು- 3,000
8. ಆರೋಗ್ಯ ಕಾಳಜಿ- 4,000
9. ಬಿಲ್‌ ಕಟ್ಟಲು, ಇತರೆ- 3,000
ಒಟ್ಟು: 48,000

ಅವಳ ಸೇವೆ, ಉಸಿರಿನಷ್ಟೇ ಅಮೂಲ್ಯ
ಸುಧಾ ಶರ್ಮಾ, ಚವತ್ತಿ
ಅದು ಕೊನೆಯ ಸುತ್ತಿನ ಸಂದರ್ಶನ. ಉನ್ನತ ವ್ಯಾಸಂಗ ಮಾಡಿದ, ಸುಮಾರು 25 ವರ್ಷದೊಳಗಿರುವ ಅಭ್ಯರ್ಥಿಗಳು ಅಲ್ಲಿದ್ದರು. ಸಂದರ್ಶಕರು ಕೇಳುತ್ತಾರೆ: “ನೀವು ವರ್ಷದ ದಿನವೂ ಕೆಲಸ ಮಾಡಬೇಕು, ವಾರದ ಏಳೂ ದಿನವೂ ದುಡೀಬೇಕು. ಯಾವುದೇ ಶಿಫ್ಟ್ ಇಲ್ಲ. ಒಮ್ಮೊಮ್ಮೆ ಹಗಲು ರಾತ್ರಿಯೂ ಕೆಲಸ ಇರುತ್ತೆ. ಅದಕ್ಕೆ ನೀವು ಸಿದ್ಧವಿದ್ದೀರಾ?’. ಎಲ್ಲರೂ ಒಟ್ಟಿಗೇ ಹೇಳುತ್ತಾರೆ: “ಓಕೆ ಸರ್‌’. ಇಂಥ ಕೆಲಸಕ್ಕೆ ಒಳ್ಳೆಯ ಪ್ಯಾಕೇಜ್‌ ಇರುತ್ತೆ. ಬೇಕಾದಷ್ಟು ಸೌಲಭ್ಯ ಇರುತ್ತೆಂದು ಅವರು ಭಾವಿಸಿದ್ದರು. ಇನ್ನೇನು ಸಂಬಳ ಕುರಿತು ಇವರೇ ಯಾರಾದರೂ ಕೇಳಬೇಕು ಎನ್ನುವಷ್ಟರಲ್ಲಿ ಸಂದರ್ಶಕರು, “ಆದರೆ ಒಂದು ಕಂಡೀಷನ್‌. ನಿಮ್ಮ ಕೆಲಸಕ್ಕೆ ಯಾವುದೇ ಸಂಬಳ ಇರೋದಿಲ್ಲ’ ಎಂದರು!

ಇದನ್ನು ಇವರೆಲ್ಲ ನಿರೀಕ್ಷಿಸಿಯೇ ಇರಲಿಲ್ಲ. ಒಬ್ಬ ನೇರವಾಗಿ ಹೇಳಿಯೇಬಿಟ್ಟ: “ಈ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ’. ಅವನ ಮಾತನ್ನೇ ಬೆಂಬಲಿಸಿ ಎಲ್ಲರೂ, “ನಮಗ್ಯಾರಿಗೂ ಇದು ಸಾಧ್ಯವೇ ಇಲ್ಲ. ನಮಗಷ್ಟೇ ಅಲ್ಲ, ಯಾರೂ ಮಾಡೋದಿಲ್ಲ’. ಸಂದರ್ಶಕರು ಅಷ್ಟೇ ಸಮಾಧಾನದಿಂದ ನಗುತ್ತಾ, “ಕೆಲಸ ಮಾಡಲು ಯಾರಿಗೂ ಸಾಧ್ಯ ಇಲ್ವಾ? ಯಾರೂ ಮಾಡೋದಿಲ್ವಾ? ನಮ್ಮ ದೇಶದ ಕೋಟ್ಯಂತರ ಮಹಿಳೆಯರು ಶತಮಾನಗಳಿಂದ ವರ್ಷದ ಎಲ್ಲ ದಿನವೂ, ಹಗಲು ರಾತ್ರಿ ಎನ್ನದೇ ತಮ್ಮ ಜೀವಿತವನ್ನೇ ಮನೆಗಾಗಿ, ಗಂಡು ಮಕ್ಕಳಿಗಾಗಿ ಇಟ್ಟಿದ್ದಾರಲ್ಲಾ? ಅವರ ನಿಸ್ವಾರ್ಥ ಸೇವೆಗೆ, ಸಂಬಳದ ಮಾತು ಬೇಡ, ಮೆಚ್ಚುಗೆಯೂ ಸಿಗೋದಿಲ್ಲ. ಇದು ನಮ್ಮ ಹಕ್ಕು ಎನ್ನುವ ಹಾಗೆ ವರ್ತಿಸುತ್ತೇವೆ. ಇಂಥ ಮಹಿಳೆಯರು ನಮ್ಮ ಮನೆಯಲ್ಲಿ ತಾಯಿಯಾಗಿ, ಹೆಂಡತಿಯಾಗಿ, ಅತ್ತಿಗೆ, ಅಕ್ಕ, ಮಗಳ ರೂಪದಲ್ಲಿದ್ದಾರೆ’ ಎಂದಾಗ, ಅವರ ಮಾತುಗಳನ್ನು ಕೇಳುತ್ತಿರುವವರ ಕಣ್ಣುಗಳು ಹನಿಗೂಡುತ್ತಿದ್ದವು.

ಮನೆಯನ್ನು ತಮ್ಮ ಪ್ರೀತಿ, ಮಮತೆ, ವಾತ್ಸಲ್ಯದಿಂದ ಪೊರೆಯುತ್ತಿರುವ ಗೃಹಿಣಿಯರ ದುಡಿಮೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇತ್ತೀಚೆಗೆ “ವಿಶ್ವ ಸುಂದರಿ’ ಮಾನುಷಿ ಚಿಲ್ಲರ್‌ಗೆ, “ಪ್ರಪಂಚದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹುದ್ದೆ ಯಾವುದು?’ ಎಂದು ಕೇಳಿದಾಗ ಅವಳ ಉತ್ತರ, “ಅಮ್ಮ ಮಾಡುವ ಕೆಲಸ’ ಎಂದಿದ್ದಳು. ಕವಿ ಕೆಎಸ್‌ನ, “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ’ ಎಂದಿದ್ದರು. ಆದರೆ, ವಿಪರ್ಯಾಸವೆಂದರೆ ಗೃಹಿಣಿಯರು ಮಾಡುತ್ತಿರುವ ಕೆಲಸದ ಬಗೆಗೆ ಪರಿಗಣನೆಯೇ ಇಲ್ಲದಿರುವುದು. ಜನಗಣತಿಯ ವೇಳೆಯಲ್ಲೂ ಗೃಹಿಣಿಯರನ್ನು “ಅನ್‌ ಪ್ರಾಡಕ್ಟೀವ್‌’ ವಿಭಾಗಕ್ಕೆ ಸೇರಿಸಲಾಗುತ್ತೆ. ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದು “ಮಹಿಳೆಯರು ಪುರುಷರಿಗಿಂತ ಹೆಚ್ಚು ಹೊತ್ತು ಕೆಲಸ ಮಾಡುತ್ತಾರೆ. ಆದರೆ, ಆ ಕೆಲಸಕ್ಕೆ ಸಂಬಳವೇ ಇಲ್ಲ’ ಎಂದು ವಿಷಾದಿಸಿದೆ.

ನಿಜ ಅಲ್ವಾ? ಗೃಹಿಣಿಯರ ಬೆಲೆ ಕಟ್ಟಲಾರದಂಥ ಕೆಲಸಕ್ಕೆ, ಸರಿಯಾದ ಐಡೆಂಟಿಟಿಯೇ ಸಿಗೋಲ್ಲ. ಅದಕ್ಕೇ ಆಕೆ ತನ್ನನ್ನು ಕೀಳರಿಮೆಯಿಂದ ಪರಿಚಯಿಸಿಕೊಳ್ಳುತ್ತಾಳೆ. ಮೊದಲು “ಐ ಆ್ಯಂ ಓನ್ಲಿ ಹೌಸ್‌ವೈಫ್’ ಎನ್ನುತ್ತಿದ್ದವಳು, ಈಗ “ಹೋಂ ಮೇಕರ್‌’ ಎನ್ನುತ್ತಿದ್ದಾಳೆ. ಆದರೆ, ಅವಳು ಹೇಳಬೇಕಿರುವುದು, ನಾನು ಮನೆಯ ಯಜಮಾನಿ, ಮನೆಯೊಡತಿ ಅಂತ. ನಾನು ಎಲ್ಲ ಕೆಲಸ ಮಾಡಬಲ್ಲವಳು ಅಂತ. ಇಂಥದ್ದೇ ಎನ್ನುವ ಕೆಲಸ ಎಂಬುದು ಆಕೆಗಿಲ್ಲ. ಅಲ್ಲಿ ಎಲ್ಲ ಕೆಲಸವೂ ಬರುತ್ತದೆ. ಇಂಥ ವಿಶ್ವಾಸ ಮಹಿಳೆಯರಲ್ಲಿ ಬರದ ಹೊರತು, ಗೃಹಿಣಿಯರನ್ನು ನೋಡುವ ಮನೆಯವರ, ಸಮಾಜದ ಮನೋಭಾವ ಬದಲಾಗುವುದಿಲ್ಲ. ಹಾಗಾಗಿ, ಬದಲಾವಣೆ ಬೇಕಿರುವುದು ನಮ್ಮೊಳಗೇ. ನಮ್ಮ ವಿಚಾರದಲ್ಲಿಯೇ, ಆಲೋಚನೆಯಲ್ಲಿಯೇ. ನಮ್ಮನ್ನೇ ನಾವು ನೋಡುವುದರಲ್ಲಿಯೇ.

ನಮ್ಮೆಲ್ಲ ಸವಾಲುಗಳು, ಸಂಕಟಗಳು, ಮೂರು ವಿಧದಲ್ಲಿ ಇರುತ್ತವೆ. ಮೊದಲನೆಯದು ಪರಸ್ಪರ ಸಂಬಂಧಗಳು, ಎರಡನೆಯದು ಆರೋಗ್ಯ, ಮೂರನೆಯದು ಆರ್ಥಿಕತೆ. ಮನೆಯಲ್ಲಿರುವ ಗೃಹಿಣಿ ಈ ಮೂರು ವಿಧಗಳಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತಾಳೆ. ಆರ್ಥಿಕ ಸ್ಥಿತಿ ಹೇಗೆ ಹದಗೆಟ್ಟರೂ ಅವಳೂ ಇದರ ನೇರ ಪರಿಣಾಮ ಎದುರಿಸುತ್ತಾಳೆ. ತನ್ನ ಬೇಡಿಕೆ ಕಡಿಮೆ ಮಾಡಿಕೊಂಡು ಸಂಸಾರ ನಡೆಸುತ್ತಾಳೆ. ಅವಳಿಗಾಗಿ ಎಂದು ಏನೂ ಬಯಸುವುದಿಲ್ಲ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದಾಗಲೂ ಅವಳು ತನಗಾಗಿ ಏನನ್ನೂ ಕೇಳುವುದಿಲ್ಲ. ಮನೆಗಾಗಿ ಎಂದು ಯೋಚಿಸುತ್ತಾಳೆ. ಮನೆಯಲ್ಲಿ ಆರೋಗ್ಯದ ಸಮಸ್ಯೆ ಯಾರಿಗೆ ಬಂದರೂ, ಅದರ ನೇರ ಪರಿಣಾಮ ಆಗುವುದು ಮಾತ್ರ ಮಹಿಳೆಯ ಮೇಲೆ. ಅತ್ತೆ, ಮಾವ, ಗಂಡ, ಮಕ್ಕಳು ಯಾರಿಗೇ ಅನಾರೋಗ್ಯವಾದರೂ ಅವರೆಲ್ಲರನ್ನೂ ನೋಡಿಕೊಳ್ಳುವವಳು ಮಹಿಳೆಯೇ. ಒಂದು ವೇಳೆ, ಅವಳಿಗೇ ಅನಾರೋಗ್ಯವಾದರೆ, ಇಡೀ ಮನೆ ತಲೆ ಮೇಲೆ ಕೈ ಹೊತ್ತು ಕೂರುತ್ತದೆ! ಅವಳು ಕುಟುಂಬದ ಸ್ವಾಸ್ಥಕ್ಕಾಗಿ ತನ್ನ ಆರೋಗ್ಯವನ್ನೂ ನಿರ್ಲಕ್ಷಿಸುತ್ತಾಳೆ. ಈ ವಿಷಯದಲ್ಲಿ ಉದ್ಯೋಗಸ್ಥ ಮಹಿಳೆಯರೂ ಹೊರತಾಗಿಲ್ಲ. 

ಇನ್ನೊಂದು ಮುಖ್ಯ ವಿಷಯ, ಪರಸ್ಪರ ಸಂಬಂಧಗಳನ್ನು ಗೃಹಿಣಿಯರು ನಿಭಾಯಿಸುವಷ್ಟು ಸಮರ್ಪಕವಾಗಿ ಬೇರಾರೂ ನಿಭಾಯಿಸಲಾರರು. ಎಲ್ಲೋ ಹುಟ್ಟಿ, ಇನ್ನೆಲ್ಲೋ ತನ್ನ ಬದುಕನ್ನು ಕಟ್ಟಿಕೊಳ್ಳುವ, ಹೋದ ಮನೆಯಲ್ಲಿನ ಎಲ್ಲರನ್ನೂ ತನ್ನವರೆಂದು ಪ್ರೀತಿಸುವ ಗುಣ, ಮಹಿಳೆಗಲ್ಲದೇ ಇನ್ನಾರಿಗೆ ತಾನೆ ಬರಲು ಸಾಧ್ಯ? ಹೀಗೆ ಆಕೆ ತನ್ನ ಜೀವನವನ್ನು ಬ್ಯಾಲೆನ್ಸ್‌ ಮಾಡುವುದರಲ್ಲೇ ಕಳೆಯುತ್ತಾಳೆ. ನೆನಪಿಡಬೇಕು, ಹೊರಗೆ ಹೋಗಿ ದುಡಿಯವ ಮಹಿಳೆಯೂ ಈ ಎಲ್ಲ ಸವಾಲುಗಳನ್ನು ಎದುರಿಸುತ್ತಾಳೆ.

ಇದು ನಮ್ಮದೇ ಕುಟುಂಬ. ಅಂದರೆ, ಇಲ್ಲಿ ಎಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವುದು ಅತ್ಯಂತ ಸಹಜ ನಿರೀಕ್ಷೆ ಆಕೆಯದ್ದು. ಒಂದು ಮನೆಯಲ್ಲಿ ಒಬ್ಬರನ್ನು ಕೀಳು, ಇನ್ನೊಬ್ಬರನ್ನು ಮೇಲು ಎಂದು ಬಿಂಬಿಸಿದರೆ ಅಲ್ಲಿ ಸಂತೋಷ ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ನಂಬಿಕೆಯಲ್ಲಿ ಗೃಹಿಣಿ ಬದುಕು ಸವೆಸುತ್ತಿದ್ದಾಳೆ. ಮನೆಯಲ್ಲಿ ಮಕ್ಕಳಿಂದ ಆದಿಯಾಗಿ ಪ್ರತಿಯೊಬ್ಬರೂ ನಮ್ಮನ್ನು ಅನುಸರಿಸುತ್ತಾರೆ. ನಾವೇ ಇನ್ನೊಬ್ಬರು ನಮ್ಮನ್ನು ಗೌರವಿಸಲಿ, ನನ್ನನ್ನು ಹೊಗಳಲಿ, ನನಗೆ ಸರಿಯಾದ ರೀತಿಯಲ್ಲಿ ಮನ್ನಣೆ ಸಿಗಲಿಯೆಂದು ಹಂಬಲಿಸುತ್ತಿದ್ದರೆ, ಅದು ದೊರೆಯುವುದಿಲ್ಲ. ಬದಲಾಗಿ ಅದಕ್ಕೆ ಅರ್ಹವಾಗುವ ಹಾಗೆ, ನಾವೇ ಬದುಕಿದಾಗ ತನ್ನಿಂದ ತಾನೆ ಅದು ಸಿಗುತ್ತದೆ. ನಮ್ಮ ಕೆಲಸಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಕಟ್ಟಿದರೂ, ನಾವು ಗಂಡಂದಿರಿಗಿಂತ ಹೆಚ್ಚು ದುಡಿಯುವವರು ಎನ್ನುವುದು ಹೆಮ್ಮೆಯ ವಿಷಯ. 

ಬೆಲೆ ಎಂದರೆ ಎಣಿಸುವ ವ್ಯವಹಾರವಲ್ಲ. ಎಣಿಸಲಾರದ, ಕಣ್ಣಿಗೆ ಕಾಣದ, ಆದರೆ ಅನುಭವಕ್ಕೆ ದಕ್ಕುವಂಥದ್ದು. ಮಕ್ಕಳನ್ನು ರೂಪಿಸುವ ತಾಯಿ ಒಂದು ತಲೆಮಾರಿನ ಕಣ್ಣಾಗುತ್ತಾಳೆ. ಹಿರಿಯರನ್ನು ಆರೈಕೆ ಮಾಡುವವಳು, ಸ್ವಸ್ಥ ಸಮಾಜದ ಪ್ರತೀಕವಾಗುತ್ತಾಳೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಿ, ಗಂಡನನ್ನು ಪೊರೆಯುವ ಆಕೆ, ಆತನ ದುಡಿಮೆಯ ಹಿಂದಿನ ಶಕ್ತಿ. ಅವಳು ಎಲ್ಲದರ ಹಿಂದೆ ಇದ್ದೂ ಇಲ್ಲದ ಹಾಗೆ ಇದ್ದಾಳೆ. ಉಸಿರಿನಷ್ಟೇ ಅಮೂಲ್ಯವಾಗಿ.

Advertisement

Udayavani is now on Telegram. Click here to join our channel and stay updated with the latest news.

Next