Advertisement
ಪಕ್ಕದ ಮನೆಗೆ ಹಾನಿಯಾಗಲು ಕಾರಣಇಡೀ ಮನೆಯ ಗೋಡೆ, ಸೂರು, ನೆಲ, ಪೀಠೊಪಕರಣ ಇತ್ಯಾದಿ ಹಾಗೆಯೇ ಎಲ್ಲ ಮಹಡಿಗಳ ಭಾರವನ್ನು ಹೊರುವುದು ಪಾಯದ ಕೆಳಗಿನ ಮಣ್ಣು. ಹಾಗಾಗಿ ಈ ಮಣ್ಣು ಸ್ಥಿರವಾಗಿರಬೇಕು. ಅಕ್ಕ ಪಕ್ಕದಲ್ಲಿ ಸ್ವಾಭಾವಿಕವಾಗಿ ಸಿಗುವ ಆಧಾರ ತಪ್ಪಿದರೆ, ಮಣ್ಣು ಕುಸಿಯುತ್ತದೆ, ಜೊತೆಗೆ ನೀರು ಕೂಡ ಮಣ್ಣಿಗೆ ಪ್ರಮುಖ ವೈರಿ. ಸಾಮಾನ್ಯವಾಗಿ ಬಹುತೇಕ ಎಲ್ಲ ಮಾದರಿಯ ಮಣ್ಣೂ ನೀರು ಕುಡಿದರೆ ಮೆತ್ತಗಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಪಾಯ ಅಗೆಯಬೇಕಾದರೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಅವಧಿಯಲ್ಲೇ ಅಕ್ಕಪಕ್ಕದ ಮನೆಗಳ ಪಾಯಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲ ಬಗೆಯ ಮಣ್ಣು ನೀರು ಕುಡಿದ ಕೂಡಲೆ ಸಡಿಲಗೊಳ್ಳುವ ಗುಣ ಹೊಂದಿರುವುದರಿಂದ, ಇಂಥ ಮಣ್ಣುಗಳ ಬಗ್ಗೆ ಅತಿ ಎಚ್ಚರದಿಂದ ಇರಬೇಕಾಗುತ್ತದೆ. ಮಣ್ಣಿನಲ್ಲಿ ಜೇಡಿಮಣ್ಣು ಹಾಗೂ ಜೈವಿಕ ತ್ಯಾಜ್ಯ ಅಂಶ ಹೆಚ್ಚಿದಷ್ಟೂ ಅದರ ಭಾರ ಹೊರುವ ಗುಣ ಕಡಿಮೆಯಾಗುತ್ತದೆ. ಪಕ್ಕದ ಮನೆಯವರು ಸುದೃಢ ಪಾಯ ಹಾಕಿದ್ದರೆ ಆಳವಾಗಿ ಅಗೆದರೂ ಹೆಚ್ಚು ಹಾನಿ ಆಗುವುದಿಲ್ಲ. ಆದರೆ, ಮಣ್ಣಿನ ಮಟ್ಟ ನಿರ್ಣಾಯಕವಾದುದು. ನಮ್ಮ ಮನೆಯ ಪಾಯದ ಆಳ ಪಕ್ಕದ ಮನೆಯ ಪಾಯಕ್ಕಿಂತ ಆಳವಾಗಿದ್ದರೆ, ಒಂದಷ್ಟು ಮುಂಜಾಗರೂಕತಾ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗುತ್ತದೆ.
ಇಡೀ ಪಾಯವನ್ನು ಒಂದೇ ಬಾರಿಗೆ ಅಗೆದರೆ, ಪಕ್ಕದ ಮನೆಯ ಗೋಡೆಗಳಿಗೆ ಉದ್ದಕ್ಕೂ ಆಧಾರ ತಪ್ಪುವ ಸಾಧ್ಯತೆ ಇರುತ್ತದೆ. ಆದುದರಿಂದ ಒಂದು ಭಾಗದಲ್ಲಿ ಪಾಯ ಅಗೆದು ಕಾಲಂ ಫುಟಿಂಗ್ ಇಲ್ಲವೇ ಸೈಝು ಕಲ್ಲು ಪಾಯ ಹಾಕಿ ಮಣ್ಣು ಮುಚ್ಚಿದ ನಂತರವೇ ಇನ್ನೊಂದು ಭಾಗದಲ್ಲಿ ಅಗೆಯುವುದು ಉತ್ತಮ. ಮನೆಗೆ ನೆಲಮಾಳಿಗೆ- ಬೇಸ್‌ಮೆಂಟ್ ಇದ್ದರಂತೂ ನಾವು ಮತ್ತೂ ಹೆಚ್ಚಿನ ಕಾಳಜಿ ವಹಿಸಬೇಕು. ನೆಲಮಾಳಿಗೆ ಅಂದರೆ ನೆಲಮಟ್ಟದಿಂದ ಕಡೇ ಪಕ್ಷ ಹತ್ತು ಅಡಿಯಾದರೂ ಕೆಳಗೆ ಅಗೆಯಬೇಕಾಗುತ್ತದೆ. ಪಕ್ಕದ ಮನೆಗೆ ನೆಲಮಾಳಿಗೆ ಇಲ್ಲದಿದ್ದರೆ, ಅವರು ಹತ್ತು ಅಡಿಯಷ್ಟು ಆಳದ ಪಾಯ ಹಾಕಿರುವ ಸಾಧ್ಯತೆ ಕಡಿಮೆ. ಆದುದರಿಂದ ನಾವು ಪಕ್ಕದ ಮನೆಯ ಪಾಯವನ್ನು ಭದ್ರ ಪಡಿಸಿಯೇ ಮುಂದುವರಿಯಬೇಕಾಗುತ್ತದೆ. ನೀರು ನಿಲ್ಲದಂತೆ ತಡೆಯಿರಿ
ಮಳೆಗಾಲದಲ್ಲಿ ನೀರು ನಿಂತರೆ ಅಕ್ಕಪಕ್ಕದವರ ಪಾಯಕ್ಕೆ ಹಾನಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದುದರಿಂದ ಪಾಯದಲ್ಲಿ ಹೆಚ್ಚು ನೀರು ನಿಲ್ಲದಂತೆ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಮಳೆನೀರು ಹರಿದು ಹೋಗುವ ಚರಂಡಿಯ ಚಪ್ಪಡಿಗಳು ಮನೆ ಕಟ್ಟುವಾಗ ಒಡೆದು ಹೋಗುವುದುಂಟು. ಇಲ್ಲವೆ ಅವುಗಳು ಮಣ್ಣುತುಂಬಿ ನೀರು ಹರಿಯಲು ಆಗದೆ, ಪಾಯದ ಕಡೆ ತಿರುಗುತ್ತವೆ. ಸಾಮಾನ್ಯವಾಗಿ ಮಳೆನೀರು ಎರಡು ಮೂರು ಇಂಚು ಮಾತ್ರ ಒಮ್ಮೆಗೆ ಬಿದ್ದು, ಇದು ಸುಲಭದಲ್ಲಿ ಬಹುತೇಕ ಮಣ್ಣುಗಳಿಂದ ಹೀರಲ್ಪಡುತ್ತದೆ. ಆದರೆ ಮೋರಿ ನೀರು ಹೊಕ್ಕರೆ ಹೊಂಡವಾಗಿ ಬಿಡುತ್ತದೆ. ಆದುದರಿಂದ ಹೆಚ್ಚುವರಿ ಮಳೆನೀರು ಚರಂಡಿಯಿಂದಾಗಲೀ, ಬೇರೆ ಮೂಲಗಳಿಂದಾಗಲೀ ಹರಿದುಬಾರದಂತೆ ನೋಡಿಕೊಳ್ಳಬೇಕು. ಹಾಗೇನಾದರೂ ಬಂದರೆ, ಕೂಡಲೆ ಪಂಪ್ ಬಳಸಿ ಹೊರಹಾಕಬೇಕು
Related Articles
ಈ ಮಾದರಿಯ ಗೋಡೆಗಳು ಇಂಗ್ಲಿಷ್‌ನ “ಎಲ್’ ಆಕಾರದಲ್ಲಿದ್ದು, ಇದರ ನಿಲುವು ಪಕ್ಕದ ಮನೆಯ ಮಣ್ಣನ್ನು ಹಿಡಿದಿಟ್ಟು, ಕಾಲು ಅಲುಗಾಡದಂತೆ ತಡೆಯುತ್ತದೆ. ಸಾಮಾನ್ಯವಾಗಿ ಕಾಲಂಗಳ ಪಾಯ ನಿವೇಶನದ ಅಂಚಿಗೆ ಬರುವುದಿಲ್ಲ, ಆದರೆ ನೆಲಮಾಳಿಗೆಗಳು ಕೆಲವೊಮ್ಮೆ ಕೊನೆಯವರೆಗೂ ಬರುವುದುಂಟು. ಇಂಥ ಸಂದರ್ಭದಲ್ಲಿ ನಾವು ಪಕ್ಕದ ಮನೆಯ ಮಣ್ಣು ಕುಸಿಯದಂತೆ ಹಿಡಿದಿಡುವ ಗೋಡೆಗಳನ್ನು (ರಿಟೈನಿಂಗ್ ವಾಲ್) ಹಂತಹಂತವಾಗಿ ಕಟ್ಟಿ, ನಂತರ ನಮ್ಮ ಮನೆಯ ಕಂಬಗಳಿಗೆ ಪಾಯ ಅಗೆಯುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಪೈಲ್ಸ್ ಅಂದರೆ ಪಾಯಕ್ಕೆ ಪರ್ಯಾಯವಾಗಿ ಅಥವಾ ಜೊತೆಗೆ ಕಂಬಗಳನ್ನು ಬಿಗಿದು ಭದ್ರಗೊಳಿಸುವ ವಿಧಾನ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಮಾದರಿಯವನ್ನು ನೀವು ಮೆಟ್ರೊ ಪಿಲ್ಲರ್‌ಗಳಲ್ಲಿ ಹಾಗೂ ಇತರೆ ಬೃಹತ್ ಕಂಬಗಳ ಕೆಳಗೆ ಬಳಸುವುದನ್ನು ನೋಡಿರಬಹುದು. ಇವನ್ನು ಬೋರ್‌ವೆಲ್ ಕೊರೆಯುವ ಮಾದರಿಯ ಯಂತ್ರಗಳಿಂದ ಕೊರೆದು, ಕಂಬಿಯಿಂದ ತಯಾರಾದ ಪಂಜರವನ್ನು ಹಾಕಿ ಕಾಂಕ್ರಿಟ್ ತುಂಬಲಾಗುತ್ತದೆ. ಇವು ಸುಮಾರು ಆರರಿಂದ ಒಂಬತ್ತು ಇಂಚು ದಪ್ಪ ಇದ್ದು, ಪಕ್ಕದ ಮನೆಯ ಮಣ್ಣನ್ನು ಬಿಗಿಯಾಗಿ ಹಿಡಿದಿಡುತ್ತವೆ. ಬಟ್ಟೆ ಹೊಲೆಯುವಾಗ ದಾರ ಎರಡು ತುಂಡುಗಳನ್ನು ಬೆಸೆಯುವ ರೀತಿಯಲ್ಲೇ ಈ ಸಣ್ಣ ಕಂಬಗಳು ಪಾಯ ಅಗೆಯುವ ಮುನ್ನವೇ ಪಕ್ಕದ ಮನೆಯ ಪಾಯವನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತದೆ.
Advertisement
ಅನಿಶ್ಚಿತತೆ ಇಟ್ಟುಕೊಳ್ಳದಿರಿಪಕ್ಕದ ಮನೆ ಕಟ್ಟಿ ನಾಲ್ಕಾರು ವರ್ಷಗಳಾಗಿದ್ದರೆ, ಯಾರಿಗೂ ಪಾಯದ ಆಳ ಅಗಲ ನೆನಪಿರುವುದಿಲ್ಲ. ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳಿದ್ದರೆ, ಅವರ ಬಳಿ ಆ ಮನೆಯ ಹಳೆಯ ಡ್ರಾಯಿಂಗ್, ನಕ್ಷೆ ತರಿಸಿಕೊಂಡು ನೋಡಬಹುದು. ಅವುಗಳ ಮೂಲಕ ಪಾಯದ ರೂಪುರೇಷೆ ತಿಳಿದುಬರುತ್ತದೆ. ಇಲ್ಲದಿದ್ದರೆ ನಾವು ಅಂದಾಜಿನ ಪ್ರಕಾರವೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪಕ್ಕದ ಮನೆಯ ಪಾಯದ ಮಣ್ಣು ಭದ್ರಪಡಿಸಲು ಕೆಲವೊಮ್ಮೆ ತಾತ್ಕಾಲಿಕವಾಗಿ ಮರಮುಟ್ಟುಗಳಿಂದ ರಕ್ಷಣೆ ಪಡೆಯಬಹುದು. ಆದರೆ ಇವು ತಡೆಗೋಡೆಗಳಷ್ಟು ನಿಶ್ಚಲವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಬರೀ ಸಾರ್ವೆ ಮರವನ್ನು ಬಳಸಿದರೆ, ಅದು ಮಣ್ಣಿನಲ್ಲಿ ಹೂತು ಹೋಗುವ ಸಾಧ್ಯತೆ ಇರುತ್ತದೆ. ಆದುದರಿಂದ ನಾವು ಮರದ ಕೆಳಗೆ ಇಲ್ಲವೇ ಅವನ್ನು ಅಡ್ಡಡ್ಡಕ್ಕೆ ಇರಿಸಿದ್ದರೆ- ಎರಡೂ ಕಡೆ ಸೂಕ್ತ ಅಳತೆಯ ಹಲಗೆಗಳನ್ನು ಇರಿಸಿ ಭದ್ರಪಡಿಸಬೇಕು. ಅನೇಕ ಬಾರಿ ಮಣ್ಣು ನೋಡಲು ಭಾರ ಹೊರುವಂತೆ ತೋರುತ್ತಿದ್ದರೂ ಕ್ಷಣಾರ್ಧದಲ್ಲಿ ಕುಸಿದುಹೋಗಬಹುದು. ಆದುದರಿಂದ ನಮಗೆ ಸ್ವಲ್ಪ ಸಂಶಯವಿದ್ದರೂ, ಸೂಕ್ತ ಭದ್ರತೆಯನ್ನು ಒದಗಿಸಲೇಬೇಕು. ಹೆಚ್ಚಿನ ಮಾಹಿತಿಗೆ: 9844132826 – ಆರ್ಕಿಟೆಕ್ಟ್ ಕೆ. ಜಯರಾಮ್