Advertisement

ಆಂತರಿಕ ಭದ್ರತೆಗೆ ಎಚ್ಚರಿಕೆಯಿರಲಿ

01:19 PM Mar 25, 2019 | Lakshmi GovindaRaju |

ಚಿಕ್ಕಬಳ್ಳಾಪುರ: ದೇಶದ ರಕ್ಷಣೆಗೆ ಗಡಿಯಲ್ಲಿ ಕಾಯುವ ಸೈನಿಕರಂತೆ ದೇಶದ ಆಂತರಿಕ ಭದ್ರತೆಯ ಬಗ್ಗೆ ನಾಗರಿಕರು ಸದಾ ಎಚ್ಚರಿಕೆಯಿಂದ ಇರಬೇಕು. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ಮಾಡಬೇಕೆಂದು ಪ್ಯಾರಾ ಕಮಾಂಡೋ ರವಿಕುಮಾರ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ನಗರದ ಹೊರ ವಲಯದ ಜಡಲತಿಮ್ಮನಹಳ್ಳಿಯಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬಲಿದಾನ್‌ ದಿವಸ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾಲೇಜು ವತಿಯಿಂದ ಗೌರವ ಅರ್ಪಣೆ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಹಿತ ಕಾಪಾಡುವಲ್ಲಿ ಸೈನಿಕರ ಮಾದರಿಯಲ್ಲಿ ಪ್ರಜೆಗಳು ಸದಾ ಮುಂಚೂಣಿಯಲ್ಲಿರಬೇಕು ಎಂದರು.

ಎಲ್ಲರೂ ಬಂದುಕು ಹಿಡಿಯುವುದು ಬೇಕಿಲ್ಲ: ಸೈನಿಕರು ಪ್ರಾಣ ಪಣಕ್ಕಿಟ್ಟು ದೇಶದ ಗಡಿ ಕಾಪಾಡುತ್ತಾರೆ. ಶತ್ರುಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ತನಕ ವಿರಮಿಸುವುದಿಲ್ಲ. ಇದು ಯೋಧರ ದಿನದ 24 ಗಂಟೆ ಕರ್ತವ್ಯ. ದೇಶದ ಎಲ್ಲ ಜನರು ಬಂದೂಕು ಹಿಡಿದು ಬರಬೇಕಾದ ಅವಶ್ಯಕತೆ ಇಲ್ಲ.

ದೇಶದಲ್ಲಿ ಆಂತರಿಕವಾಗಿ ಕಾಡುವ ಭ್ರಷ್ಟಾಚಾರ, ಹಗರಣ, ಅವ್ಯವಹಾರ, ದುರಾಡಳಿತವನ್ನು ಮಟ್ಟ ಹಾಕಬೇಕು. ರಾಷ್ಟ್ರವನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸವೂ ದೇಶ ಭಕ್ತಿಯಾಗಿದೆ ಎಂದರು.

ವಿದ್ಯಾರ್ಥಿಗಳು ದೇಶದ ಬಗ್ಗೆ ಗೌರವ, ಭಕ್ತಿ ಹೊಂದಬೇಕು. ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದ ಮಹನೀಯರನ್ನು ಸ್ಮರಿಸಬೇಕು. ಅವರ ಆಚಾರ ವಿಚಾರಧಾರೆಗಳಿಗೆ ಬೆಲೆ ಕೊಟ್ಟು ಅವರಂತೆ ತಮ್ಮ ಬದುಕು ರೂಪಿಸಿಕೊಳ್ಳಬೇಕೆಂದರು.

Advertisement

ವಿಷ್ಣುಪ್ರಿಯ ಎಜುಕೇಷನ್‌ ಟ್ರಸ್ಟ್‌ ನ ಅಧ್ಯಕ್ಷ ವೈ.ಎನ್‌.ರಾಮಚಂದ್ರಾರೆಡ್ಡಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಸೈನಿಕರನ್ನು ಗೌರವಿಸಬೇಕು. ಇದನ್ನು ಬಿಟ್ಟು ಅವರ ಕೆಲಸದ ಬಗ್ಗೆ ಅನುಮಾನಪಡುವುದು ದೇಶ ಭಕ್ತಿ ಎನಿಸಿಕೊಳ್ಳುವುದಿಲ್ಲ ಎಂದರು. ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ 44 ಕ್ಕೂ ಹೆಚ್ಚು ದೇಶದ ಸೈನಿಕರು ಹುತಾತ್ಮರಾದರು.

ಇದಕ್ಕೆ ಭಾರತೀಯ ಸೈನಿಕರು ಸರ್ಜಿಕಲ್‌ ಸ್ಟ್ರೆçಕ್‌ ನಡೆಸಿ, ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ನಾಶಪಡಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ವಿಚಾರದಲ್ಲಿ ಪ್ರತಿಯೊಬ್ಬರು ತ್ಯಾಗದ ಮನೋಭಾವ ಹೊಂದಬೇಕು. ಸ್ವಾತಂತ್ರ್ಯ ಹೋರಾಟಗಾರರ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಸಾಗಬೇಕೆಂದ ಅವರು ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಿರುವ ಭಯೋತ್ಪಾದನೆ ವಿರುದ್ದ ರಾಜೀ ಇಲ್ಲದ ಹೋರಾಟ ಸಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಕುರಬರಹಳ್ಳಿ ರವಿ, ರೆಡ್ಡಿಹಳ್ಳಿ ಚನ್ನಕೇಶವ, ಕಾಲೇಜಿ ಉಪ ಪ್ರಾಂಶುಪಾಲ ನಟರಾಜ್‌ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮದಲ್ಲಿ ದೇಶ ಭಕ್ತಿ ಸಾರುವ ಹಲವು ಭಕ್ತಿಗೀತೆಗಳ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.

ದೇಶದ ಗಡಿ ಭಾಗದಲ್ಲಿ ಕಾಯುವ ಅನುಭವ ಯೋಧರಿಗೆ ಮಾತ್ರ ಅರಿವಾಗುತ್ತದೆ. ಚಳಿ ಮಳೆ ಗಾಳಿ ಅಡ್ಡಿ ಎನ್ನುವಂತಿಲ್ಲ. ಕುಟುಂಬದವರೂ ನೆನೆಪಾಗುವುದಿಲ್ಲ. ದೇಶದ ಮೇಲೆ ಶತ್ರುಗಳು ದಾಳಿ ನಡೆಸದಂತೆ ಎಚ್ಚರಿಕೆ ವಹಿಸುವಿಕೆ ಮತ್ತು ಅನಿರೀಕ್ಷಿತ ದಾಳಿಗೆ ತಕ್ಕ ಉತ್ತರ ನೀಡುವುದೇ ಸೇನೆಯ ಪ್ರಮುಖ ಗುರಿಯಾಗಿರುತ್ತದೆ. ದೇಶದ ಭದ್ರತೆಯ ವಿಚಾರದಲ್ಲಿ ಪ್ರತಿಯೊಬ್ಬರು ತ್ಯಾಗದ ಮನೋಭಾವ ಹೊಂದಬೇಕು.
-ರವಿಕುಮಾರ್‌, ಪ್ಯಾರಾ ಕಮಾಂಡೋ

Advertisement

Udayavani is now on Telegram. Click here to join our channel and stay updated with the latest news.

Next