Advertisement

ಸಾಂಕ್ರಾಮಿಕ ರೋಗಗಳ ಬಗ್ಗೆ ಇರಲಿ ಎಚ್ಚರ

02:44 PM Jun 26, 2023 | Team Udayavani |

ಮೈಸೂರು: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಒಂದೇ ಸ್ಥಳದಲ್ಲಿ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಿಸುವ ಅಪಾ ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕಿದೆ. ಎಲ್ಲೆಡೆ ಸೊಳ್ಳೆ ಕಾಟ ಮಿತಿ ಮೀರಿದ್ದು, ಈಗಾಗಲೇ ನಗರದ ರಾಜೀವ್‌ನಗರ, ಗಾಯತ್ರಿಪುರಂ ಸೇರಿದಂತೆ ನಾನಾ ಭಾಗದಲ್ಲಿ ಜ್ವರ ಪ್ರಕರಣ ಹೆಚ್ಚಾಗಿ ಕಂಡುಬಂದಿರುವುದು ವರದಿಯಾಗಿದೆ.

Advertisement

ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ: ಮಳೆಯಿಂದ ಕೆಮ್ಮು, ಶೀತ, ನೆಗಡಿ ಮುಂತಾದ ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಗಳ ಮುಖ್ಯ ಲಕ್ಷಣವೇ ಜ್ವರ. ಮಳೆ ಬಿದ್ದಾಗ ಸೊಳ್ಳೆ ಹೆಚ್ಚಾಗುವುದರಿಂದ ಡೆಂಗಿ , ಇಲಿಜ್ವರ, ಟೈಫಾಯ್ಡ, ವೈರಾಣು ಜ್ವರ, ಕಾಲರ ಇನ್ನಿತರ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಈ ಎಲ್ಲ ಕಾಯಿಲೆಗಳ ಆರಂಭದಲ್ಲಿ ಜ್ವರವಷ್ಟೇ ಕಾಸಿಕೊಂಡರೂ, ಜತೆಯಲ್ಲೇ ಇತರ ನಿರ್ದಿಷ್ಟ ಗುಣಲಕ್ಷಣ ಇರುತ್ತವೆ. ಇನ್ನೂ ಐದು ದಿನಗಳ ಕಾಲ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸಾರ್ವಜನಿಕರು ಮನೆಯ ಸುತ್ತ ಮುತ್ತ ಮಳೆ ನೀರು ನಿಲ್ಲದಂತೆ, ಸೊಳ್ಳೆಗಳ ಸಂತತಿ ಹೆಚ್ಚ ದಂತೆ ನೋಡಿಕೊಳ್ಳಬೇಕು. ನೀರು ಮತ್ತು ಆಹಾರ ವ್ಯತ್ಯಾಸದಿಂದ ಈ ರೋಗಗಳು ಬರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ.

ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ: ಮಳೆಗಾಲ ದಲ್ಲಿ ಜ್ವರ, ಮಲೇರಿಯಾ, ಡೆಂಗಿ ಇನ್ನಿತರ ಸಾಂಕ್ರಾಮಿಕ ರೋಗಗಳು ಸೊಳ್ಳೆಗಳಿಂದ ಹೆಚ್ಚಾಗುತ್ತವೆ. ಆದ್ದರಿಂದ ಸಾರ್ವಜನಿಕರು ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕಸದ ರಾಶಿಗಳನ್ನು ತೆರವುಗೊಳಿಸಬೇಕು, ಎಲ್ಲೆಡೆ ತ್ಯಾಜ್ಯ ಸುರಿಯುವುದನ್ನು ಕಡಿಮೆ ಮಾಡಬೇಕು. ಎಲ್ಲಿಯೂ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗ ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಕುದಿಸಿ ಆರಿಸಿದ ನೀರು ಸೇವಿಸಬೇಕು. ಬಿಸಿಯಾದ ಊಟ, ಶುದ್ಧ ಆಹಾರ ಸೇವಿಸಬೇಕು. ಬಯಲಲ್ಲಿ ಮಲ ವಿಸರ್ಜನೆ ಮಾಡದೆ ಕಡ್ಡಾಯವಾಗಿ ಶೌಚಗೃಹ ಬಳಸ ಬೇಕು. ಹೋಟೆಲ್‌ಗ‌ಳಲ್ಲಿ ಶುದ್ಧ ಆಹಾರ ಮತ್ತು ಕುಡಿ ಯಲು ಬಿಸಿನೀರು ನೀಡಬೇಕು. ತ್ಯಾಜ್ಯ ವಸ್ತುಗಳನ್ನು ಜನವಸತಿ ಪ್ರದೇಶದ ಹೊರಗಡೆ, ನಿಗದಿತ ಸ್ಥಳದಲ್ಲಿ ಹಾಕಬೇಕು. ಗ್ರಾಮ/ಬಡಾವಣೆ, ಮನೆಗಳ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ತೆರೆದಿಟ್ಟ ತಿಂಡಿ ತಿನಿಸುಗಳು ಮತ್ತು ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ತಿನ್ನಬಾರದು. ಊಟಕ್ಕೆ ಮುಂಚೆ ಹಾಗೂ ಮಲ ವಿಸರ್ಜನೆ ನಂತರ ಕೈಗಳನ್ನು ಸ್ವತ್ಛ ನೀರಿನಿಂದ ತೊಳೆದುಕೊಳ್ಳ ಬೇಕು.

ಬೆಚ್ಚಗಿನ ಹತ್ತಿ ಬಟ್ಟೆಗಳನ್ನು ತೊಡಬೇಕು. ರೋಗದ ಲಕ್ಷಣಗಳು: ಚಿಕೂನ್‌ಗೂನ್ಯ ರೋಗಿ ಜ್ವರದೊಂದಿಗೆ, ಕಾಲು ಮತ್ತು ಕೈಗಳ ಕೀಲುಗಳಲ್ಲಿ ಊತ ಹಾಗೂ ನೋವು ಅನುಭವಿಸುತ್ತಾನೆ. ವೈರಾಣು ಜ್ವರ ಪೀಡಿತ ವ್ಯಕ್ತಿ ಇಡೀ ದೇಹದಲ್ಲಿ ನೋವು ಮತ್ತು ಆಯಾಸ ಅನುಭವಿಸುತ್ತಾನೆ. ಒಮ್ಮೊಮ್ಮೆ ಗಂಟಲು ನೋವು, ಶೀತ ಮತ್ತು ಕೆಮ್ಮು ಬರಬಹುದು. ಮಲೇರಿಯಾ ಕಾಯಿಲೆಯ ಮುಖ್ಯ ಗುಣಲಕ್ಷಣ ಚಳಿ-ಜ್ವರ. ಆದರೆ, ನಮ್ಮ ಜಿಲ್ಲೆಯಲ್ಲಿ 5 ವರ್ಷದಿಂದ ಒಂದೇ ಒಂದು ಮಲೇರಿಯಾ ಪ್ರಕರಣ ದಾಖಲಾಗಿಲ್ಲ ಎನ್ನುವುದು ಖುಷಿಯ ಸಂಗತಿ.

ಅನಾರೋಗ್ಯದಿಂದ ಜ್ವರದ ಜತೆಗೆ ವಿವಿಧ ಕಾಯಿಲೆ: ಸೊಳ್ಳೆಗಳಿಂದ ಹರಡುವ ಅನಾರೋಗ್ಯದಿಂದ ಜ್ವರದ ಜತೆಗೆ ತಲೆನೋವು, ಆಯಾಸ, ವಾಂತಿ ಮುಂತಾದ ಸಮಸ್ಯೆಗಳಿಂದ ಬಳಲಬಹುದು. ಡೆಂಗಿ ಜ್ವರದಲ್ಲಿ ದೇಹದ ಉಷ್ಣತೆ ಸಾಮಾನ್ಯಕ್ಕಿಂತಲೂ ಹೆಚ್ಚಾಗುವುದರ ಜತೆಗೆ, ಕೀಲು ಹಾಗೂ ಮಾಂಸಖಂಡಗಳಲ್ಲಿ ವಿಪರೀತ ನೋವು ಕಾಸಿಕೊಳ್ಳಬಹುದು. ಚರ್ಮದ ಮೇಲೆ ಕೆಂಪು-ಕಪ್ಪು ಮಚ್ಚೆಗಳು ಮತ್ತು ಒಮ್ಮೊಮ್ಮೆ ಮೂಗು-ಬಾಯಿಯಲ್ಲಿ ರಕ್ತ ಸ್ರಾವವೂ ಕಂಡುಬರಬಹುದು. ಟೈಫಾಯ್ಡ ರೋಗಿ ಜ್ವರದ ಜತೆ ತಲೆನೋವು, ಹೊಟ್ಟೆನೋವು, ವಾಂತಿ, ಕೆಲವೊಮ್ಮೆ ಅತಿಸಾರದಂತಹ ಸಮಸ್ಯೆಗಳಿಂದಲೂ ಬಳಲಬಹುದು. ಇಲಿಜ್ವರದ ರೋಗಿ ನಿತ್ರಾಣನಾಗಿ, ರಕ್ತದೊತ್ತಡ ಕಡಿಮೆಯಾಗಬಹುದು. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಸಿಕೊಂಡರೂ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದರೆ, ಬಡಾವಣೆ/ ಗ್ರಾಮದಲ್ಲಿ ಒಬ್ಬರಿಗೆ ಈ ಸಾಂಕ್ರಾಮಿಕ ರೋಗ ತಗುಲಿದರೂ ಮುಂದೆ ಹೆಚ್ಚು ಜನರಿಗೆ ಹರಡುವ ಸಾಧ್ಯತೆಗಳಿರುತ್ತವೆ.

Advertisement

ಸಾಂಕ್ರಮಿಕ ಕಾಯಿಲೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಸದ್ಯ ಮಳೆಯಾಗುತ್ತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಈ ಬಗ್ಗೆ ನಮ್ಮ ಇಲಾಖೆ ವರ್ಷ ಪೂರ್ತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ● ಎಸ್‌.ಚಿದಂಬರ್‌, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next