Advertisement
ನವನಗರದ ಕೈಗಾರಿಕೆ ವಸಾಹತು ಬಡಾವಣೆಯ ಗೋಡಾನ್‌ವೊಂದರಲ್ಲಿ ಕಳೆದ ಎರಡು ತಿಂಗಳ ಹಿಂದೆ ತಲೆ ಎತ್ತಿರುವ ಈ ಕಂಪನಿ, ಗ್ರಾಮೀಣ ಭಾಗದ ನಿರುದ್ಯೋಗಿ ಯುವತಿ-ಯುವತಿಯರನ್ನು ಟಾರ್ಗೆಟ್ ಮಾಡಿ, ಅವರಿಗೆ ಕೈ ತುಂಬಾ ಸಂಬಳ ಕೊಡುವ ಉದ್ಯೋಗ ನೀಡುವುದಾಗಿ ಹೇಳಲಾಗುತ್ತಿದೆ.
Related Articles
Advertisement
ಹಳ್ಳಿ ಯುವಕ-ಯುವತಿಯರಿಗೆ ಊಟ-ವಸತಿ ಸಹಿತ ತರಬೇತಿ, ವೇತನ ಕೊಡುವ ಭರವಸೆ ಈ ಕಂಪನಿಯಿಂದ ಸಿಗುತ್ತಿದೆ. ಆರಂಭದಲ್ಲಿ ಯುವಕ-ಯುವತಿಯರಿಗೆ ಕಮೀಷನ್ ಕೂಡ ಕೊಡಲಾಗುತ್ತದೆ. ಆದರೆ, ಈ ಕಂಪನಿಯ ಕಚೇರಿ ನೋಡಿದರೆ, ಹತ್ತಾರು ಸ್ಟೂಲ್, ಒಂದು ಟೇಬಲ್ ಹಾಗೂ ಗೋಡೆಗೆ ಕರಪತ್ರ ಹಚ್ಚಿದ್ದು ಬಿಟ್ಟರೆ ಬೇರೇನೂ ಇಲ್ಲ. ಹೀಗಾಗಿ ಬಹುತೇಕರು, ಇಲ್ಲಿಗೆ ಹೋದವರು, ಅನುಮಾನಗೊಂಡು ಹೊರ ಬಂದವರೇ ಇದ್ದಾರೆ.
•ಉದ್ಯೋಗ ಕೊಡುವ ಆಮಿಷವೊಡ್ಡಿದ ಕಂಪನಿ
•ಉದ್ಯೋಗಕ್ಕೆ ಸೇರುವವರು ನಿಗದಿತ ಮೊತ್ತ ಪಡೆದು ನೌಕರಿ ಆಮಿಷ
•ಇಲ್ಲಿ ಸೇರಿರುವವರು ಜನರನ್ನು ಕಂಪನಿಗೆ ಪರಿಚಯಿಸುತ್ತಲೇ ಹೋಗಬೇಕು
•ಎಷ್ಟು ಜನರನ್ನು ಪರಿಚಯಿಸುತ್ತಾರೋ ಅಷ್ಟು ಪ್ರಮಾಣ ಸಿಗುತ್ತೆ ಸಂಬಳ
500 ಜನರಿಗೆ ಉದ್ಯೋಗ: ಕಳೆದ ಎರಡು ತಿಂಗಳಲ್ಲಿ ಉತ್ತರಕರ್ನಾಟಕದ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಕಂಪನಿಯಲ್ಲಿರುವ ಪರಶುರಾಮ ಎಂಬ ಸಿಬ್ಬಂದಿ ಹೇಳುತ್ತಾರೆ. ಇಲ್ಲಿ ಕೆಲಸ ಮಾಡುವವರು ಬಹುತೇಕ ಗಂಗಾವತಿ, ಕೊಪ್ಪಳ ಕಡೆಯವರಿದ್ದು, ಬೆಂಗಳೂರು ಕಡೆಯ ಕನ್ನಡ ಮಾತನಾಡುತ್ತಾರೆ. ಜತೆಗೆ ಸುಂದರವಾಗಿ ಮಾತನಾಡುವ ಯುವತಿಯರೂ ಇಲ್ಲಿ ಕೆಲಸಕ್ಕಿದ್ದು, ಉದ್ಯೋಗ ಕೇಳಿಕೊಂಡು ಬರುವ ಯುವಕರೊಂದಿಗೆ ನಿರಂತರ ಸಂಪರ್ಕವಿಟ್ಟು, ಅವರು ಹಣ ತಂದು ಕಟ್ಟುವವರೆಗೂ ಬಿಡಲ್ಲ ಎಂಬ ಆರೋಪ ಕೇಳಿ ಬಂದಿದೆ.
ವಂಚಿಸುವ ಮೊದಲೇ ಎಚ್ಚೆತ್ತುಕೊಳ್ಳಿ: ಈ ಕಂಪನಿಯವರೊಂದಿಗೆ ಮಾತಿಗೆ ಕುಳಿತರೆ ಬಹುತೇಕ ಸುಳ್ಳು ಹೇಳುತ್ತಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಯಾವುದೇ ಸಂದರ್ಭದಲ್ಲಿ ಕಚೇರಿ ಬಂದ್ ಮಾಡಿಕೊಂಡು ಹೋದರೂ, ಹಣ ಕೊಟ್ಟವರಿಗೆ ಇವರ ಪೂರ್ಣ ವಿಳಾಸ, ಮರಳಿ ಹಣ ಯಾವುದೂ ಮರಳಿ ಬರುವ ಸಾಧ್ಯತೆ ಇಲ್ಲ. ಆದರೂ, ವಿಜಯಪುರ, ಬಾಗಲಕೋಟೆ, ಗದಗ ಮುಂತಾದ ಜಿಲ್ಲೆಯ ಹಳ್ಳಿಯ ಯುವಕರು ಇಲ್ಲಿ ನಿತ್ಯವೂ ಉದ್ಯೋಗಕ್ಕಾಗಿ ದಾಖಲೆ ಹಿಡಿದು ಬರುತ್ತಿದ್ದಾರೆ. ಹೀಗಾಗಿ ನಗರದ ಹಲವರು ಇದು ಯಾವ ಕಂಪನಿ, ಯಾವ ಉದ್ಯೋಗ ಕೊಡುತ್ತಾರೆ ಎಂದು ಹೋಗಿ ಪರಿಶೀಲನೆ ಮಾಡಿಯೂ ಬಂದಿದ್ದಾರೆ. ಯಾವುದೇ ಭರವಸೆ ಮೂಡುವ ಸಂಗತಿಗಳಿಲ್ಲ.
ಈ ರೀತಿಯ ಕಂಪನಿ, ನವನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿಲ್ಲ. ಕೂಡಲೇ ನಮ್ಮ ತಂಡವನ್ನು ಕಳುಹಿಸಿ, ಸಮಗ್ರ ತನಿಖೆ ಮಾಡಿಸಲಾಗುವುದು. ಯಾವುದೇ ಕಂಪನಿ ಜತೆಗೆ ಜಿಲ್ಲೆಯ ಯುವಕ-ಯುವತಿಯರು ವ್ಯವಹರಿಸುವ ಮೊದಲು ಆ ಕಂಪನಿಯ ಪೂರ್ವಾಪರ ಹಾಗೂ ಸಮಗ್ರವಾಗಿ ತಿಳಿದುಕೊಳ್ಳಬೇಕು.•ಲೋಕೇಶ ಜಗಲಾಸರ, ಎಸ್ಪಿ ಬಾಗಲಕೋಟೆ
ಐಕಾನಿಯೋ ಟೈರಂಟ್ಸ್ ಮಾರ್ಕೆಟ್ ಹೆಸರಿನ ಕಂಪನಿಯಲ್ಲಿ ಚೈನ್ ಸಿಸ್ಟಮ್ ಉದ್ಯೋಗ ಕೊಡಿಸುವುದಾಗಿ ಹೇಳುತ್ತಿದ್ದಾರೆ. ಮೊದಲು ಇಂತಿಷ್ಟು ರೂ. ಪಡೆದು ತರಬೇತಿ ಕೊಟ್ಟು, ಬಳಿಕ ನೀವು ಇಂತಿಷ್ಟು ಹಣ ಪಾವತಿಸಬೇಕೆಂದು ಹೇಳುತ್ತಾರೆ. ಉದ್ಯೋಗ ಇಲ್ಲದ ಹಳ್ಳಿ ಯುವಕರು ಹಣ ತುಂಬುತ್ತಿದ್ದಾರೆ. ಹಣ ಪಡೆದು ಹೋದರೆ, ಅದಕ್ಕೆ ಯಾರು ಜವಾಬ್ದಾರಿ, ಯಾರಿಗೆ ಕೇಳಬೇಕು. ಸ್ಥಳೀಯರು ಯಾರೂ ಅಲ್ಲಿ ಕೆಲಸ ಮಾಡಲ್ಲ. ಈ ಕುರಿತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು.•ಸಂತೋಷ ಹಂಜಗಿ, ನಗರದ ಯುವಕ ಅಧಿಕಾರಿ.
•ಶ್ರೀಶೈಲ ಕೆ. ಬಿರಾದಾರ