Advertisement

Karnataka: ಗ್ಯಾರಂಟಿಗೆ ಅರ್ಜಿ ಸಲ್ಲಿಸುವ ವೇಳೆ ಸೈಬರ್‌ ಕಳ್ಳರ ಬಗ್ಗೆ ಇರಲಿ ಎಚ್ಚರ !

09:20 PM Jul 02, 2023 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನೇ ಟಾರ್ಗೆಟ್‌ ಮಾಡಲು ಹೊರಟಿರುವ ಸೈಬರ್‌ ವಂಚಕರು ವಿವಿಧ ನಕಲಿ ಆ್ಯಪ್‌ ಮೂಲಕ ಸಾರ್ವಜನಿಕರಿಂದ ಹಣ ಪೀಕಲು ಸಂಚು ರೂಪಿಸಿರುವ ಸಂಗತಿ ಬಯಲಾಗಿದೆ.

Advertisement

ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಿರುವುದನ್ನು ಮನಗಂಡಿರುವ ಕೆಲ ಸೈಬರ್‌ ಕಳ್ಳರು ನಕಲಿ ಆ್ಯಪ್‌ಗ್ಳನ್ನು ಸೃಷ್ಟಿಸಿ ಸಾರ್ವಜನಿಕರ ಮಾಹಿತಿ ಕಲೆ ಹಾಕಿ ವಂಚಿಸಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ, ಇದುವರೆಗೆ ಯಾವುದೇ ದೂರುಗಳು ದಾಖಲಾಗಿಲ್ಲ. ಇಂತಹ ವಂಚನೆ ಎಸಗುವವರ ಬಗ್ಗೆ ನಿಗಾ ಇಡಲಾಗಿದೆ. ಕರ್ನಾಟಕದಲ್ಲೇ ಕುಳಿತುಕೊಂಡು ನಕಲಿ ಆ್ಯಪ್‌ ಸೃಷ್ಟಿಸಿ ವಂಚಿಸಲು ಯತ್ನಿಸಿದ್ದಾರೋ ಅಥವಾ ಉತ್ತರ ಭಾರತದಲ್ಲಿದ್ದುಕೊಂಡು ಕೃತ್ಯ ಎಸಗಲು ಸಂಚು ರೂಪಿಸಿದ್ದಾರೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯಕ್ತ ಎಸ್‌.ಡಿ. ಶರಣಪ್ಪ ತಿಳಿಸಿದ್ದಾರೆ.

ಸೈಬರ್‌ ಕಳ್ಳರ ಗಾಳಕ್ಕೆ ಬೀಳದಿರಿ ಜೋಕೆ: ಸರ್ಕಾರದ ಗ್ಯಾರಂಟಿ ಯೋಜನೆಯ ಫ‌ಲಾನುಭವಿಗಳಾಗಲು ನೋಂದಣಿ ಮಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಕೆಲವು ಸಾಮಾಜಿಕ ಜಾಲಾತಾಣಗಳಲ್ಲಿ ಸೇವಾಸಿಂಧು ಪೋರ್ಟಲ್‌ ಹೋಲುವಂತೆ ನಕಲಿ ಲಿಂಕ್‌ ಸೃಷ್ಟಿಸಲಾಗಿದೆ. ಇದನ್ನು ಕ್ಲಿಕ್‌ ಮಾಡಿ ನೋಂದಣಿ ಮಾಡುವಂತೆ ಸೂಚಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.

ಗೃಹಜ್ಯೋತಿಗೆ ನೋಂದಣಿ ಪ್ರಕ್ರಿಯೆಗಳು ರಾಜ್ಯದಲ್ಲಿ ಭರದಿಂದ ಸಾಗಿವೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ ನಕಲಿ ಲಿಂಕ್‌ಗಳನ್ನು ಹರಿಯಬಿಡಲಾಗುತ್ತಿದೆ. ಸದ್ಯದಲ್ಲೇ ಗೃಹಲಕ್ಷಿ ಯೋಜನೆಗೂ ನೋಂದಣಿ ಪ್ರಕ್ರಿಯೆ ನಡೆಯಲಿವೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ತಿಳಿಸಿದ್ದಾರೆ. ನಕಲಿ ಲಿಂಕ್‌ಗಳನ್ನು ಕ್ಲಿಕ್‌ ಮಾಡಿದ ಕೂಡಲೇ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಭಾವಚಿತ್ರವಿರುವ ಸರ್ಕಾರದ ಚಿಹ್ನೆಗಳಿರುವ ಪೇಜ್‌ಗಳನ್ನೂ ವಂಚಕರು ಸೃಷ್ಟಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next