Advertisement

ಬ್ಲ್ಯಾಕ್‌ ಫಂಗಸ್‌ ತಡೆಗೆ ಜಾಗೃತಿ ವಹಿಸಿ

09:32 PM Jun 01, 2021 | Girisha |

ಇಂಡಿ: ಕೋವಿಡ್‌-19 ಎರಡನೇ ಅಲೆಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳು ಕರ್ನಾಟಕ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸಿ ಅನೇಕ ಕುಟುಂಬಗಳು ನಿರಾಶ್ರಿತವಾಗಿವೆ. ಕೋವಿಡ್‌ ಹತೋಟಿಗೆ ತರುವ ಸದುದ್ದೇಶದಿಂದ ಇಂಡಿ ಮತಕ್ಷೇತ್ರದಲ್ಲಿ ವೈದ್ಯರ ನಡಿಗೆ ಹಳ್ಳಿ ಕಡೆಗೆ ಎಂಬ ವಿನೂತ ಕಾರ್ಯಕ್ರಮದ ಮೂಲಕ ಜಾಗೃತಿ ಮತ್ತು ಚಿಕಿತ್ಸೆ ನೀಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

Advertisement

ಸೋಮವಾರ ತಾಲೂಕಿನ ತಡವಲಗಾ ಗ್ರಾಮದ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ವೈದ್ಯರ ನಡೆಗೆ ಹಳ್ಳಿ ಕಡೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿರಾಶ್ರಿತರಿಗೆ ಆಸರೆ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಳೆದ ವರ್ಷ ಕೊರೊನಾ ಮೊದಲ ಅಲೆಯಲ್ಲಿ ಹಿರಿಯರಿಗೆ ತೊಂದರೆಯಾಗಿತ್ತು. ಎರಡನೇ ಅಲೆಯಲ್ಲಿ ಹಿರಿಯರು ಮತ್ತು ಯುವ ಜನಾಂಗದಲ್ಲಿ ಸಾಕಷ್ಟು ಜೀವಗಳನ್ನು ಕಳೆದುಕೊಂಡಿದ್ದೇವೆ.

ತಜ್ಞರು ಇನ್ನೂ ಮೂರನೇ ಅಲೆ ಬರುತ್ತದೆ ಎಂದು ಎಚ್ಚರಿಸಿದ್ದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಎರಡನೇ ಅಲೆ ನಿಯಂತ್ರಣದಲ್ಲಿ ವಿಫಲವಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೂರನೇ ಅಲೆಗಾಗಿ ಮಂಜಾಗ್ರತಾ ಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು. ನಮ್ಮ ದೇಶದಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಯಾವ ಪ್ರಮಾಣದಲ್ಲಿ ಅನುದಾನ ಮೀಸಲಿಡಬೇಕಿತ್ತೋ ಅದನ್ನು ಇಡದಿರುವುದರಿಂದ ಸಾವು ನೋವು ಸಂಭವಿಸಿದೆ. ಕೊರೋನಾದಿಂದ ಗುಣಮುಖರಾಗಿದ್ದಾರೆ ಎನ್ನುವಷ್ಟರಲ್ಲಿ ಸದ್ಯ ಬ್ಯ್ಲಾಕ್‌ ಫಂಗಸ್‌ ರೋಗ ಬಂದಿದ್ದು ಇದರ ಬಗ್ಗೆ ಜಾಗೃತಿ ಇರಲಿ ಎಂದು ತಿಳಿಸಿದರು. ಜಿಲ್ಲೆಯ ಜನಪ್ರತಿನಿಧಿ ಗಳೆಲ್ಲರೂ ಬ್ಲಾಕ್‌ ಫಂಗಸ್‌ ಮತ್ತು ಕೋವಿಡ್‌ ವ್ಯಾಕ್ಸಿನ್‌ ಒದಗಿಸುವಂತೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇವೆ.

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆಯಿಂದ ಸಾಕಷ್ಟು ಸಾವುಗಳು ಸಂಭವಿಸಿವೆ. ಇದನ್ನು ಒದಗಿಸಬೇಕಾಗಿರುವುದು ಸರಕಾರದ ಕರ್ತವ್ಯ. ಸುದೈವಕ್ಕೆ ನಮ್ಮ ರಾಜ್ಯದಲ್ಲಿ ಆಕ್ಸಿಜನ್‌ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗುತ್ತಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನಬಾಗೇವಾಡಿಯಲ್ಲಿ ಪ್ಲಾಂಟ್‌ ಮಾಡಲಾಗುತ್ತಿದೆ. ನಮ್ಮ ಇಂಡಿಯಲ್ಲೂ ಕೂಡಾ ಅಜೀಂ ಪ್ರೇಮಜಿ ಆಕ್ಸಿಜನ್‌ ಪ್ಲಾಂಟ್‌ ಮಾಡಲು ಸಹಾಯ ಮಾಡುತ್ತಿದ್ದಾರೆ.

ಇಂತಹ ಹೃದಯವಂತರು ನಮ್ಮ ದೇಶದಲ್ಲಿ ಇದ್ದಾರೆ. ಕಷ್ಟದ ಸಂದರ್ಭದಲ್ಲಿ ಅಜೀಂ ಪ್ರೇಮಜಿ, ಇನ್ಫೋಸಿಸ್‌ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ಅನೇಕ ಮಠ ಮಾನ್ಯಗಳು, ಉದ್ದಿಮೆದಾರರು, ಸಹಾಯ ಸಹಕಾರ ಮಾಡುತ್ತಿದ್ದಾರೆ. ನಿಜವಾದ ದೇವರನ್ನು ಇವರ ಸ್ವರೂಪದಲ್ಲಿ ಕಾಣುತ್ತಿದ್ದೇವೆ. ಯಾರು ಸಹಾಯ ಸಹಕಾರ ಮಾಡಿದ್ದಾರೆ ಅವರನ್ನು ಸ್ಮರಿಸುವುದು ಮಾನವೀಯ ಮೌಲ್ಯವಾಗಿದೆ ಎಂದರು. ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ಮಹೇಂದ್ರ ಕಾಪ್ಸೆ, ತಾಲೂಕು ಆರೋಗ್ಯಾಧಿಕಾರಿ ಡಾ| ಅರ್ಚನಾ ಕುಲಕರ್ಣಿ, ಡಾ| ಆಕಾಶ, ತಮ್ಮಣ್ಣ ಪೂಜಾರಿ, ಅಶೋಕ ಮಿರ್ಜಿ, ಸೋಮಶೇಖರ ಬ್ಯಾಳಿ, ತಹಶೀಲ್ದಾರ್‌ ಚಿದಂಬರ ಕುಲಕರ್ಣಿ, ಗುತ್ತಿಗೆದಾರ ಚಂದ್ರಶೇಖರ ರೂಗಿ, ಬಸವರಾಜ ಇಂಡಿ, ಧರ್ಮರಾಜ ವಾಲೀಕಾರ, ಅವಿನಾಶ ಬಗಲಿ, ಆಶಾ ಕಾರ್ಯಕರ್ತೆಯರು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next