ಶಿವಮೊಗ್ಗ: ಕೆಎಸ್ಆರ್ ಟಿಸಿ ನಿಗಮದ ಹೆಸರು ದುರುಪಯೋಗ ಮಾಡಿಕೊಂಡು ಉದ್ಯೋಗ ಜಾಹೀರಾತು ನೀಡಿದ ಎನ್ ಜಿಓ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸನ್ಮಾರ್ಗ ಎನ್ ಜಿಓ ಎಂಬ ಸಂಸ್ಥೆಯು ಕೆಎಸ್ ಆರ್ ಟಿಸಿ ಹೆಸರು ಬಳಸಿ ಉದ್ಯೋಗದ ಜಾಹಿರಾತು ನೀಡಿದೆ. ಇದರ ವಿರುದ್ಧ ಶಿವಮೊಗ್ಗ ಕೆಎಸ್ಆರ್ ಟಿಸಿ ವಿಭಾಗದ ಮುಖ್ಯಸ್ಥ ಮರಿಗೌಡ ದೂರು ದಾಖಲಿಸಿದ್ದಾರೆ.
ಡ್ರೈವರ್ ಗಳು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಾಗಿದ್ದು, 650 ಹುದ್ದೆಗಳು ಖಾಲಿಯಿದೆ ಎಂದು ಪತ್ರಿಕಾ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಆದರೆ ಈ ರೀತಿಯ ಪತ್ರಿಕಾ ಪ್ರಕಟಣೆ ನಿಗಮದಿಂದ ಹೊರಡಿಸಿಲ್ಲ ಎಂದು ಮರಿಗೌಡ ಸ್ಪಷ್ಟಪಡಿಸಿದ್ದು, ಕೆಎಸ್ಆರ್ ಟಿಸಿ ಹೆಸರನ್ನು ದುರುಪಯೋಗ ಮಾಡಿಕೊಂಡು ಹಣದ ಆಮಿಷ ಒಡ್ಡಲಾಗಿದೆ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ:ಬೈಕ್ ತಪ್ಪಿಸಲು ಹೋಗಿ ಸಿಎಂ ಎಸ್ಕಾರ್ಟ್ ವಾಹನ ಪಲ್ಟಿ; ಹಲವು ಪೊಲೀಸರಿಗೆ ಗಾಯ
ಪ್ರಕಟಣೆಯಲ್ಲಿ ಕೇವಲ 7 ನೇ ತರಗತಿ ವಿದ್ಯಾಭ್ಯಾಸ ಉಲ್ಲೇಖವಿದೆ. ಆದರೆ ನಮ್ಮ ನಿಗಮದಲ್ಲಿ ಕನಿಷ್ಠ 10 ನೇ ತರಗತಿ ಓದಿರಬೇಕು. ಕೆಎಸ್ಆರ್ ಟಿಸಿ ಕೇಂದ್ರ ಕಛೇರಿ ಹಾಗೂ ಬೆಂಗಳೂರು ವಿಭಾಗದ ಕಛೇರಿಯಿಂದ ಯಾವುದೇ ರೀತಿಯ ಪ್ರಕಟಣೆ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ ಮರಿಗೌಡ ಅವರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.