ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ “ಅಂದವಾದ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ತನ್ನೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ
ಫಸ್ಟ್‌ಕಾಪಿಯೊಂದಿಗೆ ಹೊರಬಂದಿರುವ “ಅಂದವಾದ’ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ಸ್ ಹೇಳದ “ಯು’ ಸರ್ಟಿಫಿಕೇಟ್ ನೀಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಚಿತ್ರದ ಬಿಡುಗಡೆಗೆ ಮುಹೂರ್ತವನ್ನು ಫಿಕ್ಸ್ ಮಾಡಿಕೊಂಡಿದ್ದು, ಅದರ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಪತ್ರಕರ್ತರ ಮುಂದೆ ಬಂದಿತ್ತು.
ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ದೇಶಕ ಚಲ, “ಇಡೀ ಚಿತ್ರದಲ್ಲಿ ಪ್ರಕೃತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆ ಹೇಳಲಾಗಿದೆ. ಚಿತ್ರದ ಶೇಕಡಾ 90ರಷ್ಟು ಭಾಗ ಮಳೆ ಹಾಗೂ ಮಂಜಿನಲ್ಲಿ ಚಿತ್ರೀಕರಣಗೊಂಡಿದೆ. ಅದಕ್ಕಾಗಿಯೇ ಚಿತ್ರೀಕರಣಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿತು. ಈಗಾಗಲೇ ನಮ್ಮ ಚಿತ್ರದ ಹಾಡುಗಳು ಟ್ರೇಲರ್‌ಗಳಿಗೆ ಚಿತ್ರರಂಗ ಮತ್ತು ಆಡಿಯನ್ಸ್ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಾಗಾಗಿ ಚಿತ್ರವನ್ನು ಇದೇ ಅಕ್ಟೋಬರ್ 25ರಂದು ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದ್ದೇವೆ. ಚಿತ್ರದಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಒಪ್ಪುವಂಥ ಕಥೆಯಿದ್ದು, ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
ನವ ನಟ ಜೈ “ಅಂದವಾದ’ ಚಿತ್ರದಲ್ಲಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಜೈ, “ಚಾನಲ್‌ಗಳಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾರವಾದ ನೈಜ ಘಟನೆಯೊಂದನ್ನು ಆಯ್ದುಕೊಂಡು ಅದನ್ನು ಈ ಚಿತ್ರದ ಮೂಲಕ ತೆರೆಮೇಲೆ ತರಲಾಗಿದೆ. ನನಗೆ ಗೊತ್ತಿರುವಂತೆ ಸುಮಾರು ಮೂರು ದಶಕಗಳಿಂದ ಈಚೆಗೆ ಕನ್ನಡದಲ್ಲಿ ಇಂಥ ಸಬೆjಕ್ಟ್ ಚಿತ್ರಗಳು ಬಂದಿಲ್ಲ. ಮಳೆಯ ನಡುವೆ ಒಂದು ಪ್ರೇಮಕಥೆ ನಡೆಯುತ್ತದೆ. ಅದರ ಜೊತೆಗೊಂದು ಸಂದೇಶವಿದೆ’ ಎಂದು ವಿವರಣೆ ಕೊಡುತ್ತಾರೆ.
ಅನುಷಾ ರಂಗನಾಥ್ “ಅಂದವಾದ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅನುಷಾ, “ಸುಳ್ಳು ಹೇಳುತ್ತಾ ನಾಯಕನನ್ನು ಸತಾಯಿಸಿಕೊಂಡಿರುವ ಪಾತ್ರ ನನ್ನದು. ನಾನೇಕೆ ಹಾಗೆ ಮಾಡುತ್ತೇನೆ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು. ಇಡೀ ಚಿತ್ರದಲ್ಲಿ ಅಭಿನಯಿಸಿದ್ದು ಒಂದೊಳ್ಳೆ ಅನುಭವ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ’ ಎನ್ನುತ್ತಾರೆ. “ಒಂದೊಳ್ಳೆ ಚಿತ್ರವನ್ನು ನಿರ್ಮಿಸಬೇಕು ಎನ್ನುವ ಕನಸು ಈ ಚಿತ್ರದ ಮೂಲಕ ನನಸಾಗಿದೆ. ಚಿತ್ರ ಚೆನ್ನಾಗಿ ಬಂದಿದ್ದು, ನೋಡುಗರಿಗೂ ಇಷ್ಟವಾಗುತ್ತದೆ’ ಎನ್ನುವ ಭರವಸೆ ನಿರ್ಮಾಪಕಿ ಮಧು ಜಿ. ರಾಜ್ ಅವರದ್ದು. ಚಿತ್ರದ ಹಾಡುಗಳಿಗೆ ವಿಕ್ರಂ ಆರ್ಯನ್ ಸಂಗೀತ ಸಂಯೋಜನೆಯಿದ್ದು, ಗುರುಕಿರಣ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಒಟ್ಟಾರೆ ಸದ್ಯ ಹಾಡುಗಳು ಮತ್ತು ಟ್ರೇಲರ್‌ಗಳ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ “ಅಂದವಾದ’ ಚಿತ್ರ, ತೆರೆಮೇಲೆ ಎಷ್ಟು ಅಂದವಾಗಿ ಮೂಡಿಬಂದಿದೆ ಅನ್ನೋದು ಇದೇ ತಿಂಗಳ ಕೊನೆಗೆ ಗೊತ್ತಾಗಲಿದೆ.