ಮೈಸೂರು: ಖಾಸಗಿ ಬಡಾವಣೆಗಳಿಗೆ ಎನ್‌ಒಸಿ ಕೊಡುವ ವಿಚಾರದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವಿಧಾನ ಪರಿಷತ್ ಸದಸ್ಯರುಗಳಾದ ಮರಿತಿಬ್ಬೇಗೌಡ ಮತ್ತು ಸಂದೇಶ್ ನಾಗರಾಜ್ ನಡುವೆ ಜಟಾಪಟಿ ನಡೆದ ಕಾರಣ ಸಭೆ ಮುಂದೂಡಿದ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಮುಡಾ ಸಭೆ ನಡೆದಿರಲಿಲ್ಲ. ಹೀಗಾಗಿ ಚುನಾವಣಾ ಆಯೋಗದ ಅನುಮತಿ ಪಡೆದು ಶುಕ್ರವಾರ ವಿಶೇಷ ಸಭೆ ಕರೆಯಲಾಗಿತ್ತು.
ಸಭೆ ನಡೆಸಲು ಅನುಮತಿ ನೀಡಿದ್ದ ಚುನಾವಣಾ ಆಯೋಗ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ನಂಜನಗೂಡು ಮತ್ತು ಶ್ರೀರಂಗಪಟ್ಟಣ ತಾಲೂಕುಗಳ ಯೋಜನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸದಂತೆ ಷರತ್ತು ವಿಧಿಸಿ ಅನುಮತಿ ನೀಡಿತ್ತು.
ಅಧ್ಯಕ್ಷ ಎಚ್.ಎನ್.ವಿಜಯ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರೆಯಲಾದ ಸಭೆಯಲ್ಲಿ ಮುಡಾ ವ್ಯಾಪ್ತಿಯಲ್ಲಿ 7 ಖಾಸಗಿ ಬಡಾವಣೆ ರಚನೆಗೆ ಸರ್ಕಾರ 140 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದು,
ಈ ಜಾಗದಲ್ಲಿ ಖಾಸಗಿ ಬಡಾವಣೆಗಳ ರಚನೆಗೆ ಎನ್‌ಒಸಿ ಕೊಡುವ ವಿಚಾರ ಪ್ರಸ್ತಾಪವಾದಾಗ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಎನ್‌ಒಸಿ ಕೊಡುವಂತೆ ತಾಕೀತು ಮಾಡಿದರೆ, ಸಂದೇಶ್ ನಾಗರಾಜ್ ವಿರೋಧ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸಭೆ ಗೊಂದಲದ ಗೂಡಾದ ಹಿನ್ನೆಲೆಯಲ್ಲಿ ಅಧ್ಯಕ್ಷ ವಿಜಯ್, ಸಭೆಯನ್ನು ಮೇ 20ಕ್ಕೆ ಮುಂದೂಡಿದರು.
ಮುಡಾ ಸದಸ್ಯರಾದ ಎಸ್.ಎ.ರಾಮದಾಸ್, ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನ, ಎಲ್.ನಾಗೇಂದ್ರ, ತನ್ವೀರ್‌ಸೇಠ್, ಬಿ.ಹರ್ಷವರ್ಧನ್, ನಗರಪಾಲಿಕೆ ಪ್ರತಿನಿಧಿ ಎಸ್‌ಬಿಎಂ ಮಂಜು, ಮುಡಾ ಆಯುಕ್ತ ಕಾಂತರಾಜ್, ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.