Advertisement

ಮೌನ ಮಾತಿಗಿಂತ ಉತ್ತಮ

01:09 AM Oct 14, 2019 | Sriram |

ಎಷ್ಟೋ ಬಾರಿ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಮಾತನಾಡಿ ಪ್ರಯೋಜನವಿರುವುದಿಲ್ಲ. ಅದು ಗೊತ್ತಿದ್ದರೂ ನಾವು ಸೋಲ ಬಾರದು ಎಂಬ ಕಾರಣಕ್ಕೆ ಮಾತನ್ನು ಮುಂದುವರಿಸುತ್ತಾ ಹೋಗು ತ್ತೇವೆ. ಅದು ಘಟನೆಗಳಿಗೆ ಅಂತ್ಯ ಹಾಡುವುದರ ಬದಲು ಸಂಬಂಧಕ್ಕೆ ಪೂರ್ಣವಿರಾಮವನ್ನಿಟ್ಟು ಬಿಡುತ್ತದೆ.

Advertisement

ಎಲ್ಲ ಘಟನೆಗಳು ಹಾಗೆ ನಾವು ಅಂದುಕೊಳ್ಳುತ್ತೇವೆ: ಮಾತನಾಡಿ ಜಯಿಸಬಹುದು ಎಂದು. ಆದರೆ ಆ ಒಂದು ಘಟನೆಯಲ್ಲಿ ನಾವು ಜಯಿಸಬಹುದು. ಆದರೆ ಆ ವ್ಯಕ್ತಿಯ ಜತೆಗಿನ ಸಂಬಂಧ ಉಳಿಸಿಕೊಳ್ಳುವುದರಲ್ಲಿ ನಾವು ಎಡವಿರುತ್ತೇವೆ. ಆಗ ಅದು ನಮ್ಮ ಅರಿವಿಗೆ ಬಾರದಿದ್ದರೂ ಕೂಡ ಮುಂದೆ ಒಮ್ಮೆಯಾದರೂ ಅನಿಸುತ್ತದೆ-ಅಂದು ನಾನು ಗೆದ್ದು ಬೀಗುವುದಕ್ಕಿಂತ ಸೋತು ಸಂಬಂಧ ಉಳಿಸಿಕೊಳ್ಳಬಹುದಿತ್ತು ಎಂದು. ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ. ಅದೇ ಎಲ್ಲರೂ ಹೇಳುವಂತೆ ಮಾತನಾಡಿದ ಮೇಲೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಮಾತನಾಡುವಾಗ ಯಾವತ್ತೂ ಯೋಚಿಸಿ ಮಾತನಾಡಬೇಕು. ಯಾಕೆಂದರೆ ನಾಲಿಗೆ ನೀವು ಹೇಳಿದಂತೆ ಹೊರಳುತ್ತದೆ. ಅದಕ್ಕೆ ಸರಿ-ತಪ್ಪು ಎಂಬ ಅರಿವಿರುವುದಿಲ್ಲ. ಅದರ ತಿಳಿವಳಿಕೆ ಇರಬೇಕಾದದ್ದು ನಿಮಗೆ. ಹಾಗಾಗಿ ಮಾತಿಗಿಂತ ಕಷ್ಟವಾದರೂ ಸರಿ ಮೌನವಾಗಿರುವುದು ಲೇಸು.
ಕೆಲವು ಬಾರಿ ಜಗಳಗಳು ಬಂದಾಗ ಸಿಟ್ಟಿನಲ್ಲಿ ನಾವು ಮುಂದೆ ಇರುವವರ ಮೇಲೆ ರೇಗಾಡಿ ಬಿಡುತ್ತೇವೆ.

ಆದರೆ ಮನಸ್ಸು ಶಾಂತವಾದ ಮೇಲೆ ಮನಸ್ಸಿಗೆ ಅರಿವಾಗುತ್ತದೆ-ನಾವು ಹಾಗೆ ಮಾಡಬಾರದಾಗಿತ್ತು ಎಂದು ಆದರೆ ಕಾಲ ಮಿಂಚಿ ಹೋಗಿರುತ್ತದೆ. ಹಾಗಾಗಿ ಮಾತನಾಡುವುದಕ್ಕಿಂತ ಮೊದಲು ಮೌನವಾಗಿದ್ದು ಬಿಟ್ಟರೆ ಕೆಲವು ಸಂದರ್ಭಗಳನ್ನು ಇನ್ನು ಕೆಲವು ಬಾರಿ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲಿ ನಾವು ಯಶಸ್ವಿಯಾಗುತ್ತೇವೆ. ಮಾತನಾಡುವಾಗ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು. ಇಲ್ಲವಾದಲ್ಲಿ ಮೌನವಾಗಿದ್ದು ಬಿಡಬೇಕು. ಇನ್ನೊಬ್ಬರನ್ನು ನೋಯಿಸುವುದಕ್ಕಿಂತ ಸುಮ್ಮನಿರುವುದು ತುಂಬಾ ಉತ್ತಮ. ಮೌನವಾಗಿರುವುದು ಎಲ್ಲರಿಗೂ ಆಗಲಿಕ್ಕಿಲ್ಲ . ಸ್ವಲ್ಪ ಕಷ್ಟವಾಗಬಹುದು ಆದರೆ ಅದನ್ನು ಕಷ್ಟವಾದರೂ ಸರಿಯೇ ಅಳವಡಿಸಿಕೊಂಡಲ್ಲಿ ಮುಂದೆ ಎದುರಾಗುವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ನಿಲ್ಲಬಹುದು. ಮೌನ ಬಂಗಾರದಷ್ಟು ಬೆಲೆ ಬಾಳುವಂತದು, ಯಾವಾಗಲೂ ಅದಕ್ಕಿರುವ ಬೆಲೆ ಕಡಿಮೆಯಾಗುವುದಿಲ್ಲ. ಹಾಗಾಗಿ ಮಾತನಾಡಿ ಹಾಳು ಮಾಡಿಕೊಳ್ಳುವ ಸಂದರ್ಭಗಳನ್ನು ಮೌನವಾಗಿ ಗೆದ್ದು ಬಿಡಿ. ಆ ಸಮಯದಲ್ಲಿ ನೀವು ಸೋತಿರಿ ಎಂದು ಅನಿಸಿದರೂ ತಲೆ ಕೆಡಿಸಿಕೊಳ್ಳಬೇಡಿ ಯಾಕೆಂದರೆ ಯಾರಿಗೂ ಅರಿವಾಗದ ರೀತಿಯಲ್ಲಿ ನೀವು ಗೆದ್ದು ಬೀಗಿರುತ್ತೀರಿ.

- ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next