ವೇದಿಕೆ ಮೇಲಿದ್ದ ಜನರನ್ನು ನೋಡಿಯೇ ಎಲ್ಲರಿಗೂ ಗಾಬರಿಯಾಗಿತ್ತು. 20ಕ್ಕೂ ಹೆಚ್ಚು ಜನರು ಆ ವೇದಿಕೆಯ ಮೇಲಿದ್ದರು. ಅವರೆಲ್ಲಾ ಮಾತಾಡುವುದು ಯಾವಾಗ, ಹಾಡು ಮತ್ತು ಟೀಸರ್ ನೋಡುವುದು ಯಾವಾಗ ಎಂದು ಸಭಾಂಗಣದಲ್ಲಿದ್ದ ಪ್ರೇಕ್ಷಕರು ತಲೆಯಲ್ಲೇ ಗುಣಾಕಾರ, ಬಾಗಾಕಾರ ಮಾಡುತ್ತಿದ್ದರು. ಇತ್ತ ಕಡೆ ವೇದಿಕೆ ಮೇಲಿದ್ದವರನ್ನೆಲ್ಲಾ ಕೆಳಗೆ ಕಳಿಸಿ ಹಾಡು ಕೇಳಿಸುವುದು ಅಥವಾ ಅವರ ಮಾತೆಲ್ಲಾ ಆದ ನಂತರವೇ ಹಾಡುಗಳನ್ನು ತೋರಿಸುವುದೋ ಎಂಬ ಗೊಂದಲದಲ್ಲಿ ನಿರ್ಮಾಪಕರು ಓಡಾಡುತ್ತಿದ್ದರು.
ಕೊನೆಗೊಮ್ಮೆ ಹಾಡು ಮತ್ತು ಟೀಸರ್ ತೋರಿಸಿಯೇ ಮಾತು ಎಂದು ತೀರ್ಮಾನವಾಗಿ ಅವೆರಡನ್ನೂ ತೋರಿಸಲಾಯಿತು. ಅಂದ ಹಾಗೆ, ಇದು “ಸರೋಜ’ ಚಿತ್ರದ ಹಾಡುಗಳ ಮತ್ತು ಟೀಸರ್ ಬಿಡುಗಡೆ ಸಮಾರಂಭ. ಈ ಚಿತ್ರವನ್ನು ಶಿವಕುಮಾರ್ ದಾಸರಿ ನಿರ್ಮಿಸಿದರೆ, ವಿಜಯಲಕ್ಷ್ಮೀ ಶ್ರೀಧರ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈಶ್ವರ್ ಬಾಬು, ಸಹನ, ರಾಧಾ ದೇವದಾಸ್ ಮುಂತಾದವರು ಚಿತ್ರದಲ್ಲಿ ನಟಿಸಿದರೆ, ಪ್ರಜ್ವಲ್ ಕ್ರಿಶ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಮೊದಲು ಮಾತನಾಡಿದ್ದು ಶ್ರೀಧರ್. “ನಮಗೆ ಚಿತ್ರ ನಿರ್ದೇಶನದ ಯಾವುದೇ ಅನುಭವವಿಲ್ಲ. ನನ್ನ ಹೆಂಡತಿ ವಿಜಯಲಕ್ಷ್ಮೀ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಒಂದು ನೈಜ ಘಟನೆಯನ್ನಾಧರಿಸಿ ಈ ಕಥೆ ಮಾಡಿದ್ದಾರೆ. ಇದು ಆಕೆಯ ಅಣ್ಣನ ಸ್ವಂತ ಕಥೆ. ಈ ಕಥೆಯನ್ನ ಸಿನಿಮಾ ಮಾಡಬೇಕು ಎಂಬ ಆಸೆ ಆಕೆಗಿತ್ತು. ಈಗ ಸಿನಿಮಾ ಆಗಿದೆ’ ಎಂದರು. ಅಂದು ಚಿತ್ರರಂಗದ ಸಾಕಷ್ಟು ಗಣ್ಯರು ಬಂದಿದ್ದರು.
ಚಾಮುಂಡೇಶ್ವರಿ ಸ್ಟುಡಿಯೋದ ರಾಜಲಕ್ಷ್ಮೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್, ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ್, ಶಿವಕುಮಾರ್ ಆರಾಧ್ಯ, ಆಡುಗೋಡಿ ಶ್ರೀನಿವಾಸ್ ಮುಂತಾದವರು ಬಂದಿದ್ದರು. ಈ ಪೈಕಿ ಹಿರಿಯರಾದ ಭಗವಾನ್ ಅವರು ಹಾಡುಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ಒಂದಿಷ್ಟು ಹಿತವಚನಗಳನ್ನು ಆಡಿದರು.
ಅವರು ಈ ಸಮಾರಂಭಕ್ಕೆ ಬರಲು ಕಾರಣ ಅವರ ಪತ್ನಿ. ಏಕೆಂದರೆ, ಭಗವಾನ್ ಅವರ ಮಡದಿಯ ಹೆಸರು ಸಹ ಸರೋಜ ಅಂತ. ಹಾಗಾಗಿ ಅವರ ಹೆಸರಿರುವ ಸಿನಿಮಾಗೆ ಹೋಗದಿದ್ದರೆ, ನಾಳೆ ಏನು ಉತ್ತರ ಕೊಡಬೇಕು ಹೇಳಿ ಎಂದು ನಗುತ್ತಲೇ ಮಾತು ಪ್ರಾರಂಭಿಸಿದರು ಅವರು. “ಈ ಚಿತ್ರದಲ್ಲಿ ಎಲ್ಲಾ ಹೊಸಬರೇ. ನಾವು ಯಾವತ್ತೂ ಹೊಸಬರನ್ನು ಉತ್ತೇಜಿಸಿದ್ದೀನಿ.
ಆದಾರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್ ಮತ್ತು ಇತರೆ ಕಡೆ ಇದ್ದಾಗ ಹಲವರು ಹೊಸಬರನ್ನು ತಯಾರು ಮಾಡಿದ ತೃಪ್ತಿ ಇದೆ. ಇದುವರೆಗೂ 250 ಯುವಕರು ಹಿರಿತೆರೆ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. 65 ವರ್ಷಗಳಿಂದ ಕನ್ನಡ ಚಿತ್ರರತಂಗದಲ್ಲಿ ಹಲವು ಹೊಸಬರ ಜತೊಎಗೆ ಕೆಲಸ ಮಾಡಿದ ಸಂತೋಷವಿದೆ. ಈ ಚಿತ್ರ 100 ದಿನ ಓಡಲಿ’ ಎಂದು ಹಾರೈಸಿ ಅವರು ಮಾತು ಮುಗಿಸಿದರು.