Advertisement

ಬೆಟ್ಟಹಳ್ಳಿ ಸರ್ಕಾರಿ ಶಾಲೆಯೇ ಉದ್ಯಾನ

11:37 AM Jan 27, 2019 | Team Udayavani |

ಕುದೂರು: ಸರ್ಕಾರಿ ಶಾಲೆಯಲ್ಲಿ ಪರಿಸರ ಸೌಂದರ್ಯಕ್ಕೆ ಕೊರತೆ ಇಲ್ಲ. ಶಾಲೆ ಆವರಣದಲ್ಲಿ ಗಿಡ- ಮರ ಒಣಗಿಲ್ಲ. ಈ ಪರಿಸರ ಯಾವ ಉದ್ಯಾನವನಗಳಿಗೂ ಕಮ್ಮಿಯಿಲ್ಲ. ಓರ್ವ ಶಿಕ್ಷಕ ಹಾಗೂ 10 ಜನ ಮಕ್ಕಳ ಪರಿಶ್ರಮದಿಂದ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ಈ ಉದ್ಯಾನವನವನ್ನು ಕಾಣಬಹುದು.

Advertisement

ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ: ಬೇಸಿಗೆ ಬಿರುಬಿಸಿಲಿನಲ್ಲಿಯೂ ಇಲ್ಲಿನ ಶಿಕ್ಷಕ ರಘುಪತಿ, ಮಕ್ಕಳು ಹಾಗೂ ಪೋಷಕರ ಶ್ರಮದಿಂದ ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಶಾಲೆ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಗ್ರಾಮೀಣ ಸೊಗಡಿನ ಕಲಾಕೃತಿಗಳು ಹಾಗೂ ಕಾರಂಜಿಗಳ ನರ್ತನ ನಡುವೆ ಕಣ್ಮನ ಸೆಳೆಯುತಿದೆ. ಇದರಿಂದ ಶಾಲೆಯನ್ನು ನೋಡುವ ಪ್ರವಾಸಿಗರ ಸಂಖ್ಯೆಯೂ ಕೂಡ ದಿನೇ ದಿನೆ ಹೆಚ್ಚಾಗುತ್ತಿದೆ. ಶಾಲಾ ಅವಧಿ ಹಾಗೂ ರಜೆ ದಿನ ಎನ್ನದೆ ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳು ಶಾಲಾ ಪರಿಸರವನ್ನು ಕಾಪಾಡುತ್ತಿರುವುದು ವಿಶೇಷವಾಗಿದೆ.

ರಜೆಯಲ್ಲೂ ಕಾರ್ಯ ನಿರ್ವಹಣೆ: ಬೆಟ್ಟಹಳ್ಳಿ ಕಾಲೋನಿ ಶಾಲೆಯ ಆವರಣದಲ್ಲಿ ಸುಂದರ ಪರಿಸರ ನಿರ್ಮಾಣ ಮಾಡಿರುವುದು ಒಂದೆರಡು ತಿಂಗಳುಗಳ ಪರಿಶ್ರಮವಲ್ಲ. ಶಿಕ್ಷಕ ರಘುಪತಿ ಅವರ 10 ವರ್ಷಗಳ ತಪಸ್ಸು. ಶಾಲಾ ಅವಧಿ ಮತ್ತು ರಜೆ ದಿನಗಳನ್ನು ತೋರೆದು ಬಿಡುವು ಸಿಕ್ಕ ವೇಳೆಯಲ್ಲಿ ಶಾಲೆಯತ್ತ ಕಡೆ ಧಾವಿಸಿ ಪರಿಸರವನ್ನು ಅಭಿವೃದ್ಧಿಪಡಿಸಿದ್ದಾರೆ. ಶೇ.75ಕ್ಕೂ ಹೆಚ್ಚು ಭಾಗ ಸ್ವಂತ ಹಣವನ್ನು ವ್ಯಯಿಸಿ, ಪರಿಸರ ಕಾಳಜಿಯನ್ನು ಪ್ರದರ್ಶಿಸುತ್ತಿದ್ದಾರೆ. ಶಿಕ್ಷಕರಷ್ಟೇ ಬದ್ಧತೆಯನ್ನು ಮಕ್ಕಳು ತೋರಿಸುತ್ತಾ ರಜೆ ದಿನಗಳಲ್ಲಿಯೂ ಶಿಕ್ಷಕರ ಜೊತೆಯಲ್ಲಿ ಪರಿಸರ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿದ್ದಾರೆ. ಮಕ್ಕಳ ಶ್ರಮಕ್ಕೆ ಪೋಷಕರು ಕೂಡಾ ಬೆಂಬಲಕ್ಕೆ ನಿಂತಿದ್ದಾರೆ.

ಪರಿಸರ ರಕ್ಷಣೆ ಕಾರ್ಯಕ್ರಮಕ್ಕೆ ಆದ್ಯತೆ: ಬೆಟ್ಟಹಳ್ಳಿ ಕಾಲೋನಿ ಸರ್ಕಾರಿ ಶಾಲೆಯಾದರೂ ಇಲ್ಲಿ ಪರಿಸರ ಸಂರಕ್ಷಣೆ ವಿಚಾರದಲ್ಲಿ ಸದಾ ಮುಂದೆ ಇದ್ದಾರೆ. ನೀರಿನ ಮಿತ ಬಳಕೆ ಹಾಗೂ ಕಾರಂಜಿಗಳಲ್ಲಿ ಹೆಚ್ಚಾದ ನೀರನ್ನು ಗಿಡಗಳಿಗೆ ಹಾಕುತ್ತಿದ್ದಾರೆ. ಇಂಗುಗುಂಡಿಗಳ ಮೂಲಕ ಮಳೆ ನೀರನ್ನು ಇಂಗಿಸುವುದು, ಕಸ ನಿರ್ವಹಣೆ, ಪ್ಲಾಸ್ಟಿಕ್‌ ನಿಯಂತ್ರಣಕ್ಕಾಗಿ ಗ್ರಾಮದ ಅಂಗಡಿಗಳಿಗೆ ಕಾಗದದ ಚೀಲಗಳನ್ನು ತಯಾರಿಸಿ ನೀಡುವುದು, ಗ್ರಾಮ ನೈರ್ಮಲ್ಯಕ್ಕಾಗಿ ಜಾಗೃತಿ ಜಾಥಾ, ಕಿರು ನಾಟಕಗಳ ಪ್ರದರ್ಶನ, ಶ್ರಮದಾನದ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸುವುದು. – ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಮೂಲಕ ಪರಿಸರ ಕಾಳಜಿಯನ್ನು ಇಲ್ಲಿನ ಶಿಕ್ಷಕರು ಮತ್ತು ಮಕ್ಕಳು ವಹಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಪರಿಸರ ಕಾಳಜಿಯನ್ನು ತೋರುತ್ತಿದ್ದಾರೆ.

ಕೆ.ಎಸ್‌.ಮಂಜುನಾಥ್‌ ಕುದೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next