ಹೊಸಕೋಟೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮತದಾರರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಶಾಸಕ ಬೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸ ಮಂದಿರದಲ್ಲಿ ನಡೆದ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶೀಘ್ರದಲ್ಲಿಯೇ ವಿಧಾನಸಭಾ ಉಪ ಚುನಾವಣೆ ನಡೆಯಲಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸಲು ಸಮಾವೇಶ ನಡೆಸಲು ಪಕ್ಷದ ಮುಖಂಡರು ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಉಪ ಚುನಾವಣೆಯಲ್ಲಿ ನನ್ನ ಪತ್ನಿ ಪದ್ಮಾವತಿ ಸ್ಪರ್ಧಿಸುತ್ತಾರೆ ಎಂದು ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವನ್ನು ವರಿಷ್ಠರು ಕೈಗೊಂಡಿಲ್ಲ. ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ರಂತೆ ತಾವು ಯಾವುದೇ ಅಧಿಕಾರದ ಬಗ್ಗೆ ವ್ಯಾಮೋಹ ಹೊಂದಿಲ್ಲ.
ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯ ಗೆಲುವಿಗಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುವುದು.ಅನರ್ಹ ಶಾಸಕರ ಬಗ್ಗೆ ಕ್ಷೇತ್ರದ ಮತದಾರರು ಬೇಸರಗೊಂಡಿದ್ದು, ವಿರೊಧಿ ಅಲೆ ನಿರ್ಮಾಣವಾಗಿದೆ. ಈ ಸನ್ನಿವೇಶವನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಲು ಶ್ರಮಿಸಬೇಕು ಎಂದು ಹೇಳಿದರು.
ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿ ಶಾಮಣ್ಣ ಮಾತನಾಡಿ, ಸೆ.21ರಂದು ನಡೆಯಲಿರುವ ಸಮಾವೇಶದಲ್ಲಿ ರಾಜ್ಯ ಮಟ್ಟದ ಮುಖಂಡರುಗಳ ಭಾಗವಹಿಸುತ್ತಿದ್ದು, ಎಂಟಿಬಿ ವಿರುದ್ಧ ರಣ ಕಹಳೆ ಮೊಳಗಿಸಲು ತೀರ್ಮಾನಿಸಲಾಗಿದೆ. ತಾಲೂಕಿನ 10 ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲಾ ಗ್ರಾಮಗಳಲ್ಲೂ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ ಪಕ್ಷ ಸಂಘಟಿಸಲು ಕಾರ್ಯಕರ್ತರು ಗಮನಹರಿಸಬೇಕು ಎಂದರು.
ಸಭೆಯಲ್ಲಿ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಎಐಸಿಸಿ ಸದಸ್ಯೆ ಕಮಲಾಕ್ಷಿ ರಾಜಣ್ಣ, ಜಿಪಂ ಸದಸ್ಯ ವಿ.ಪ್ರಸಾದ್, ಮಾಜಿ ಅಧ್ಯಕ್ಷ ವಿ. ನಾರಾಯಣಸ್ವಾಮಿ, ಮುಖಂಡರಾದ ಚಿಕ್ಕಹುಲ್ಲೂರು ಬಚ್ಚೇಗೌಡ, ಸಗೀರ್ ಅಹಮದ್, ಕಾಂತರಾಜ್ ಮುಂತಾದವರು ಭಾಗವಹಿಸಿದ್ದರು.
ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿದ್ದರೂ, ರಾಜ್ಯ ಬಿಜೆಪಿ ಸರಕಾರದ ಬೆಂಬಲದಿಂದ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ಒಡ್ಡುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಹೆದರದೆ ಕಾರ್ಯಕರ್ತರು ಧೈರ್ಯವಾಗಿ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
-ಕೃಷ್ಣಬೈರೇಗೌಡ, ಮಾಜಿ ಸಚಿವ