ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್ ಸಾಲ ಸೇರಿದಂತೆ ರಾಜ್ಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹಿಂದೆ ಸರಿದಿರುವುದು ಖಂಡನೀಯ. ಆ ಮೂಲಕ ರೈತರಿಗೆ ದ್ರೋಹ ಬಗೆದಿರುವುದು ಅಕ್ಷಮ್ಯ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ಹಿಂದಿನ ಸರ್ಕಾರವು ಸಹಕಾರಿ ಬ್ಯಾಂಕ್‌ಗಳಲ್ಲಿ ಅತಿ ಸಣ್ಣ, ಸಣ್ಣ ರೈತರ 50,000 ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಿತ್ತು. ಇದೀಗ ಮತ್ತೆ ಅತಿ ಸಣ್ಣ, ಸಣ್ಣ ರೈತರ ಸಹಕಾರಿ ಬ್ಯಾಂಕ್‌ಗಳ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂಬುದು ಮಾತ್ರ ಸ್ಪಷ್ಟವಾಗಿದೆ. ಉಳಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಹಾಗೂ ನಗರ ಪ್ರದೇಶ ರೈತರನ್ನು ಹೊರಗಿಡಲಾಗಿದೆ. ಇದು ರೈತರಿಗೆ ಬಗೆದ ದ್ರೋಹ ಎಂದು ದೂರಿದರು.
ಬುಧವಾರದ ಸಭೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲ ಮನ್ನಾ ಬಗ್ಗೆ ಚರ್ಚಿಸಲು ತಜ್ಞರ ಸಮಿತಿ ರಚನೆ, ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿ ನೇಮಕ ಎಂಬ ಕಾರಣ ನೀಡಿ ರಾಜ್ಯದ ರೈತರ ದಾರಿ ತಪ್ಪಿಸಲಾಗಿದೆ. 15 ದಿನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳುವ ಮೂಲಕ ಕುಮಾರಸ್ವಾಮಿಯವರು ರಾಜ್ಯದ ರೈತ ಸಮುದಾಯಕ್ಕೆ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ 53,000 ಕೋಟಿ ರೂ. ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ಧರ್ಮಸ್ಥಳದಲ್ಲಿ ರೈತರ ಖಾಸಗಿ ಸಾಲ ಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದರು. ನಂತರ ಕ್ರಮ ಕೈಗೊಳ್ಳಲಿಲ್ಲ. ಇದನ್ನು ಖಂಡಿಸಿ ಕರ್ನಾಟಕ ಬಂದ್ ನಡೆಸಿದ ಬಳಿಕ ರೈತರ ಸಭೆ ಕರೆದು ಸುಳ್ಳು ಭರವಸೆ ನೀಡಿದ್ದಾರೆ ಎಂದು ಕಿಡಿ ಕಾರಿದರು.
ರೈತರ ಸಭೆಯಲ್ಲಿ ಪಾಲ್ಗೊಳ್ಳದೆ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳು ಕರೆದ ಎಷ್ಟು ಪ್ರಮುಖ ಸಭೆಗಳಲ್ಲಿ ಅವರು ಪಾಲ್ಗೊಂಡಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕರಾದ ಗೋವಿಂದ ಕಾರಜೋಳ ಅವರ ಮೂಲಕ ಪಕ್ಷದ ನಿಲುವು ತಿಳಿಸಲಾಗಿದೆ. ಯಾವ ಸಭೆಗೆ ಹೋಗಬೇಕು ಎಂಬ ತೀರ್ಮಾನ ನಾನು ಕೈಗೊಳ್ಳುತ್ತೇನೆಯೇ ಹೊರತು ಕುಮಾರಸ್ವಾಮಿಯವರಲ್ಲ. ಇದನ್ನು ಪ್ರಶ್ನಿಸುವ, ಈ ಬಗ್ಗೆ ಟೀಕಿಸುವ ನೈತಿಕತೆ ಕುಮಾರಸ್ವಾಮಿಯವರಿಗಿಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
2009ರ ಏ.1ರಿಂದ 2017ರ ಡಿ.31ರವರೆಗೆ ಸಣ್ಣ, ಅತಿ ಸಣ್ಣ ರೈತರ ಸಹಕಾರಿ ಸಂಘ ಬೆಳೆ ಸಾಲ ಮನ್ನಾ ಮಾಡಲಾಗಿದೆ ಎಂದರೆ ಆ ಮೊತ್ತ ಎಷ್ಟು? ಸಾಲ ಮಾಡಿರುವ ಮಧ್ಯಮ ವರ್ಗದ ರೈತರ ಗತಿ ಏನು? ಸ್ಕೀಂ 2ರಲ್ಲಿ ತೋಟಗಾರಿಕೆ, ರೈತರ ಯಂತ್ರೋಪಕರಣ, ಇತರೆ ಸಾಲದ ಬಗ್ಗೆ ಗಮನ ನೀಡಲಾಗುವುದು ಎಂಬುದು ಎಷ್ಟು ಸರಿ? ಮುಖ್ಯಮಂತ್ರಿಗಳು ಹಿಂದೆ ನೀಡಿದ ಭರವಸೆಯಂತೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಶೀಘ್ರದಲ್ಲೇ ಶಾಸಕಾಂಗ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಯಡಿಯೂರಪ್ಪ ಅವರು ನಗರದಲ್ಲೇ ಇದ್ದರೂ ಮಂಗಳೂರಿಗೆ ಭೇಟಿ ನೀಡುವ ನೆಪ ಹೇಳಿ ರೈತರ ಸಭೆಗೆ ಬಾರದೆ ಗೋವಿಂದ ಕಾರಜೋಳ ಅವರನ್ನು ಕಳುಹಿಸಿದ್ದಾರೆ.ಮನೆಯಲ್ಲೇ ಕುಳಿತು ರೈತ ಪ್ರತಿನಿಧಿಗಳ ಜತೆ ನಡೆದ ಸಭೆಯ ನಿರ್ಧಾರ ಟೀಕಿಸಿದ್ದಾರೆ. ಇದು ಸರಿಯಲ್ಲ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ