Advertisement

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಹೆಸರಿನಲ್ಲಿ ಹಣ ಲೂಟಿ?

01:13 AM Jul 20, 2019 | Team Udayavani |

ಕೊಲ್ಲೂರು: ಕೇಂದ್ರ ಸರಕಾರದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಬಡ ಹೆಣ್ಣು ಮಕ್ಕಳಿಗೆ 2 ಲಕ್ಷ ರೂ. ನಗದು ನೀಡಲಾಗುತ್ತದೆ ಎಂದು ಆಮಿಷ ಒಡ್ಡಿ ಕುಂದಾಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಅರ್ಜಿ ವಿತರಿಸಿ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಖಾಸಗಿ ವ್ಯಕ್ತಿಗಳು ಬಡವರ ಅಜ್ಞಾನದ ದುರ್ಲಾಭ ಪಡೆದು ಯೋಜನೆಯ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವ ಶಂಕೆ ಮೂಡಿಸಿದೆ.

Advertisement

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ನೇರ ಹಣ ಪಾವತಿ ಯಾಗುವುದಿಲ್ಲ. ಆದರೆ ಕುಂದಾಪುರ ಭಾಗದ ಅನೇಕ ಕಡೆಗಳಲ್ಲಿ ಅರ್ಜಿ ಜತೆಗೆ ಮಗುವಿನ ಆಧಾರ್‌ ಕಾರ್ಡ್‌, ಪಾಲಕರ ಬ್ಯಾಂಕ್‌ ದಾಖಲೆ, ಪಡಿತರ ಕಾರ್ಡ್‌ಗಳ ಜೆರಾಕ್ಸ್‌ ಪ್ರತಿಯೊಂದಿಗೆ ಅಂಚೆ ಶುಲ್ಕ ಎಂದು ರೂ.50ರಿಂದ 100ರ ವರೆಗೆ ಪಡೆಯಲಾಗುತ್ತಿದೆ. ಏಜೆಂಟರ ಹೆಸರಿನಲ್ಲಿ ಅನೇಕ ಕಡೆ ಕೆಲವರು ಈ ಕೆಲಸ ಮಾಡುತ್ತಿದ್ದು, ಅರ್ಜಿ ಗಳಲ್ಲಿ ಗ್ರಾ.ಪಂ. ಅಧ್ಯಕ್ಷರ ಸಹಿ ಪಡೆದು “ಭಾರತ ಸರಕಾರ, ನವದೆಹಲಿ’ ಹೆಸರಿಗೆ ಅಂಚೆ ಮೂಲಕ ಕಳಿಸುತ್ತಿದ್ದಾರೆ.

ಯೋಜನೆಯಡಿ ನೇರ ಹಣ ಪಾವತಿ ಇಲ್ಲ
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ನೇರ ಹಣ ಪಾವತಿ ಇಲ್ಲ. ಅರ್ಹ ಹೆಣ್ಣುಮಕ್ಕಳಿಗೆ ಪ್ರವೇಶ ಶುಲ್ಕ ಸೇರಿದಂತೆ ಇತರ ಸೌಲಭ್ಯಗಳಿಗೆ ಆಯಾ ಶಿಕ್ಷಣ ಸಂಸ್ಥೆಗಳಿಂದಲೇ ನೇರಪಾವತಿಯಾಗುತ್ತವೆ. ಅದಕ್ಕೆ ಪೋಷಕರು ಅರ್ಜಿ ಸಲ್ಲಿಸಬೇಕಾಗಿಲ್ಲ. ಆದರೆ ಈಗ ದಿಢೀರ್‌ ಆಗಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭ ವಾಗಿರುವುದು ನಾನಾ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.ಗ್ರಾ.ಪಂ.ಗಳಲ್ಲಿ ಗ್ರಾಮಸ್ಥರ ದಂಡು ವಂಡ್ಸೆ, ಚಿತ್ತೂರು, ಹಕ್ಲಾಡಿ ಸಹಿತ ಅನೇಕ ಗ್ರಾ.ಪಂ.ಗಳಲ್ಲಿ ಅರ್ಜಿ ಜತೆಗ್ರಾಮಸ್ಥರು ಗ್ರಾ.ಪಂ. ಅಧ್ಯಕ್ಷರ ಸಹಿ ಗಾಗಿ ದುಂಬಾಲು ಬೀಳುತ್ತಿರುವುದು ಆಯಾ ಗ್ರಾ.ಪಂ.ಗಳ ಅಧ್ಯಕ್ಷರು ಮತ್ತುಪಿಡಿಒಗಳಿಗೆ ನುಂಗಲಾರದ ತುತ್ತಾಗಿದೆ.

ಅಧ್ಯಕ್ಷರ ಸಹಿ ಕಡ್ಡಾಯ ಎಂದು ನಮೂನೆಯಲ್ಲಿ ಸೇರಿಸಲಾಗಿರುವುದು ಇದಕ್ಕೆ ಕಾರಣ. ಇದರಿಂದಾಗಿ ಗ್ರಾಮಸ್ಥರು ಪಂ.ಗೆ ಧಾವಿಸುತ್ತಿದ್ದಾರೆ. ಈ ಅರ್ಜಿ ನಕಲಿ ಎಂದು ಗ್ರಾಮಸ್ಥರಿಗೆ ಮನದಟ್ಟು ಮಾಡಿಕೊಟ್ಟರೂ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ.

ಕೇಂದ್ರ ಸರಕಾರದ ಯೋಜನೆ
ಬೇಟಿ ಬಚಾವೋ ಬೇಟಿ ಪಡಾವೋ ಕೇಂದ್ರ ಸರಕಾರದ್ದು, ಬಡ ಕುಟುಂಬಗಳ ಹೆಣ್ಣುಮಕ್ಕಳ ಶಿಕ್ಷಣ ಇತ್ಯಾದಿಗೆ ನೆರವಾಗುವಂಥದ್ದು. ಹೆಣ್ಣು ಭ್ರೂಣ ಹತ್ಯೆ ತಡೆಯುವುದು, ಹೆಣ್ಣು ಮಗುವಿಗೆ ಕಡ್ಡಾಯ ಶಿಕ್ಷಣ ಯೋಜನೆಯ ಮೂಲ ಉದ್ದೇಶ. ಇದರಲ್ಲಿ ಹೆಣ್ಣುಮಕ್ಕಳಿಗೆ ಅಥವಾ ಅವರ ಹೆತ್ತವರಿಗೆ ನೇರ ಹಣ ವರ್ಗಾಯಿಸುವ ಪದ್ಧತಿ ಇಲ್ಲ.

Advertisement

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಯಾವುದೇ ಅರ್ಜಿ ಸ್ವೀಕಾರ ಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರಂಭಿಸಿಲ್ಲ. ಈ ಬಗ್ಗೆ ಲಿಖೀತ ದೂರು ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಗ್ರೇಸಿ ಗೊನ್ಸಾಲ್ವಿಸ್‌
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಉಡುಪಿ

ವಂಡ್ಸೆ ಗ್ರಾ.ಪಂ.ಗೆ
ನೂರಾರು ಸಂಖ್ಯೆಯಲ್ಲಿ ಸಹಿಗಾಗಿ ಆಗಮಿಸುತ್ತಿರುವ ಗ್ರಾಮಸ್ಥರಿಗೆ ಈ ಬಗ್ಗೆ ತಿಳಿಹೇಳಲಾಗಿದೆ. ಯೋಜನೆಯಡಿ ನೇರ ನಗದು ವರ್ಗಾವಣೆ ಇಲ್ಲ ಎಂಬುದಾಗಿ ತಿಳಿಸಲಾಗಿದೆ.
– ಉದಯ್‌ ಕುಮಾರ್‌ ಶೆಟ್ಟಿ
ವಂಡ್ಸೆ ಗ್ರಾ.ಪಂ. ಅಧ್ಯಕ್ಷರು

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next