Advertisement

ನೇರಳೆ ಹಣ್ಣಿಗೆ ಲಾಭ ಹೇರಳ

01:12 PM Jun 27, 2019 | Naveen |

ಅಡಿವೇಶ ಮುಧೋಳ
ಬೆಟಗೇರಿ:
ಮಾವು, ಸೇಬು, ಹಲಸು ಹೀಗೆ ಘಟಾನುಘಟಿ ಹಣ್ಣುಗಳ ನಡುವೆ ಬೇಸಿಗೆಯ ಕೊನೆಯಲ್ಲಿ ಮಾರುಕಟ್ಟೆಗೆ ಬರುವ ನೇರಳೆ ಹಣ್ಣಿಗೆ ಈ ಬಾರಿ ದಾಖಲೆಯ ಬೆಲೆ ಬಂದಿದ್ದು, ಕಾಡಿನ ಫಲ ಕೂಡ ದುಬಾರಿ ಹಣ್ಣುಗಳ ಸಾಲಿಗೆ ಈ ಹಣ್ಣು ಸೇರಿದ್ದಂತೂ ನಿಜ.

Advertisement

ವಸಂತ ಮಾಸ ಕಳೆದ ಮೇಲೆ ಮಾವಿನ ಹಣ್ಣು ಮಾರುಕಟ್ಟೆಗೆ ಬರುತ್ತವೆ. ಅದರ ಬೆನ್ನಿಗೆ ಬರುವ ನೇರಳೆ ಹಣ್ಣು ಈ ಸಲ ಭರ್ಜರಿ ಬೆಲೆ ಗಿಟ್ಟಿಸಿದೆ. ಮೇ ಕೊನೆಯ ದಿನಗಳಿಂದ ಜೂನ ದಿನಗಳ ಅವಧಿಯಲ್ಲಿ ಹಣ್ಣಾಗುವ ನೇರಳೆ ಹಣ್ಣನ್ನು ಗ್ರಾಮೀಣ ಭಾಗದ ಜನರು ಕಾಡಿನಿಂದ ಕಿತ್ತು ಸ್ಥಳೀಯ ಮಾರುಕಟ್ಟೆಗೆ ತರುತ್ತಿದ್ದರು. ಈಗ ಗೋಕಾಕ ತಾಲೂಕಿನ ಸುತ್ತಲಿನ ಹಳ್ಳಿಗಳ ರೈತರೇ ತಮ್ಮ ಹೊಲ-ಗದ್ದೆಗಳಲ್ಲಿ ನೇರಳೆ ಹಣ್ಣಿನ ಗಿಡಗಳನ್ನು ಬೆಳೆಯುತ್ತಿರುವುದು ವಿಶೇಷ. ಮಾವಿನ ಹಣ್ಣಿನ ಅಬ್ಬರದ ನಡುವೆಯೂ ಈ ವನ್ಯ ಫಲ ತನ್ನ ಔಷಧೀಯ ಗುಣಗಳಿಂದ ಬೇಡಿಕೆ ಹೊಂದಿದ್ದು, ದರದಲ್ಲಿ ಹಣ್ಣುಗಳ ರಾಜನಿಗೆ ಸಮನಾಗಿ ಈಗ ಗಮನ ಸೆಳೆಯುತ್ತಿದೆ.

ನೇರಳೆಯನ್ನು ಸದ್ಯ ರೈತರು ಹೊಲಗಳ ಬದುವಿನಲ್ಲಿ ನೆಡುತ್ತಿದ್ದಾರೆ. ವರ್ಷದ ಬೆಳೆಯಾಗಿದ್ದರೂ, ಗಿಡದ ತುಂಬ ಹಣ್ಣು ಬಿಡುವುದರಿಂದ ಒಂದು ಗಿಡ ಸುಮಾರು 80ಕೆಜಿಗೂ ಹೆಚ್ಚು ಫಲ ಕೊಡುತ್ತ‌್ತದೆ. ಇದು ಋತುಮಾನದ ಬೆಳೆಯಾಗಿದ್ದರಿಂದ ಅದರ ಬೆಲೆ ಸಾಮಾನ್ಯವಾಗಿ 100 ರೂ.ಒಳಗೆ ಇರುತ್ತಿತ್ತು. ಈ ಬಾರಿ ಮಾತ್ರ ಊಹೆಗೂ ನಿಲುಕದಷ್ಟು ಬೆಲೆ ಏರಿಕೆ ಕಂಡಿದ್ದು, ಒಂದು ಕೆಜಿ ನೇರಳೆಗೆ 150 ರಿಂದ 200 ರೂ.ವರೆಗೆ ಮಾರಾಟವಾಗುತ್ತಿದೆ. ಹಣ್ಣಿನ ರಾಜ ಮಾವಿನ ಹಣ್ಣಿನ ದರವೂ ಇಷ್ಟರಿಂದಲೆ ಆರಂಭವಾಗುತ್ತದೆ.

ಪಶ್ಚಿಮ ಘಟ್ಟದ ಸಾಲಿನ ಕಾಡುಗಳಲ್ಲಿ ನೇರಳೆ ಯಥೇಚ್ಚವಾಗಿ ಬೆಳೆಯುತ್ತವೆ. ಜಿಲ್ಲೆಯ ಖಾನಾಪುರ, ಬೆಳಗಾವಿ ಗೋಕಾಕ ತಾಲೂಕುಗಳಲ್ಲಿ ಹೆಚ್ಚಾಗಿ ಸಿಗುತ್ತವೆ. ಅಲ್ಲಿಂದಲೇ ಅವುಗಳು ಸ್ಥಳೀಯ ಮಾರುಕಟ್ಟೆಗೆ ಅಲ್ಲದೇ ಬೆಂಗಳೂರು, ಮುಂಬೈ, ಪುಣೆ, ಗೋವಾ ಸೇರಿ ವಿವಿಧ ರಾಜ್ಯಗಳಿಗೆ ರಫ್ತಾಗುತ್ತಿದೆ. ಕೃಷಿ ಚಟುವಟಿಕೆ ಮುಗಿಸಿರುವ ಬಹುತೇಕ ಗ್ರಾಮಗಳ ಜನರಿಗೆ ಇಂದೊಂದು ವರ್ಷದ ಕಸುಬು ಸಹ ಹೌದು. ನೇರಳೆ ಜತೆ ಕಾಡಿನಲ್ಲಿ ಬೆಳೆಯುವ ಕವಳೆ ಹಣ್ಣಿಗೂ ಸಹ ಮಾರುಕಟ್ಟೆಯಲ್ಲಿ ದರ ಹೆಚ್ಚಿದೆ.

ಮಧುಮೇಹಕ್ಕೆ ದಿವ್ಯ ಔಷಧ: ಒಗರು ಸಿಹಿ ರುಚಿ ಇರುವ ಈ ನೇರಳೆ ಹಣ್ಣನ್ನು ಪ್ರತಿದಿನ ತಿನ್ನುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಿಸಬಹುದು. ಅದರ ಬೀಜದಲ್ಲಿ ಪ್ರೋಟಿನ್‌, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ವೈದ್ಯರ ಸಲಹೆ. ಮಧುಮೇಹ ರೋಗಕ್ಕೆ ದಿವ್ಯ ಔಷಧಯಾಗಿದೆ. ಹೀಗಾಗಿ ಬಗೆ ಬಗೆಯ ಹಣ್ಣುಗಳನ್ನು ಭರಾಟೆಯ ನಡುವೆಯೂ ನೇರಳೆ ಹಣ್ಣಿಗೆ ವ್ಯಾಪಕ ಬೇಡಿಕೆ ಇದೆ. ಮಧುಮೇಹದ ಬಗೆಗಿನ ಜಾಗೃತಿಯೂ ನೇರಳೆ ಹಣ್ಣಿನ ದರ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.

Advertisement

ರೈತರಿಗೆ ನೇರಳೆ ಸಸಿಗಳ ಪೂರೈಕೆ: ಗೋಕಾಕ ತಾಲೂಕಿನ ಎದ್ದಲಗುಡ್ಡ, ಕೈತನಾಳ, ಹೊಸುರ, ಖನಗಾಂವ ಗ್ರಾಮಗಳಲ್ಲಿ ನೇರಳೆ ಹನ¡ನ್ನು ವ್ಯಾಪಕವಾಗಿ ರೈತರು ಬೆಳೆಯುತ್ತಿದ್ದು ತಾಲೂಕಿನ ಧುಪದಾಳ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಯ ಸಸ್ಯ ಪಾಲನಾಲಯ (ನರ್ಸರಿ)ಯಲ್ಲಿ ನೇರಳೆ ಸಸಿಗಳನ್ನು ಬೆಳೆಸಲಾಗುತ್ತಿದೆ. ನೇರಳೆ ಸಸಿಗಳ ಬೇಡಿಕೆ ಹೆಚ್ಚಿದ್ದು ಕಲಬುರ್ಗಿ, ಚಿತ್ರದುರ್ಗ, ಹೊಸದುರ್ಗ, ಕೊಪ್ಪಳ, ಜಮಖಂಡಿ, ಶಿರಸಿ, ಬೀದರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿ ನೇರಳೆ ಸಸಿಗಳನ್ನು ಖರೀದಿಸುತ್ತಿದ್ದಾರೆ.

ಎಕರೆಗೆ 60ಕ್ಕೂ ಹೆಚ್ಚು ಗಿಡಗಳನ್ನು ಬೆಳೆಯಬಹುದಾಗಿದೆ. ಒಂದು ಗಿಡದಿಂದ 5ಸಾವಿರಕ್ಕೂ ಹೆಚ್ಚು ಲಾಭ ಪಡೆಯಬಹುದಾಗಿದೆ. ತೋಟಗಾರಿಕೆ ಇಲಾಖೆಯಿಂದ ಸಸಿಗಳನ್ನು ನಿಗದಿತ ದರದಲ್ಲಿ ನೀಡಲಾಗುತ್ತಿದ್ದು ಇದರ ಲಾಭವನ್ನು ರೈತರು ಪಡೆಯಬೇಕು.
ಪ್ರಶಾಂತ ದೇವರಮನೆ,
ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ, ಧುಪದಾಳ.

Advertisement

Udayavani is now on Telegram. Click here to join our channel and stay updated with the latest news.

Next