Advertisement

ಕಂಬಳದ ವಿರುದ್ಧ ಪೆಟಾ ಮತ್ತೆ ಕಾನೂನು ಸಮರ

10:21 AM Sep 16, 2018 | Harsha Rao |

ಮಂಗಳೂರು: ಕಂಬಳಕ್ಕೆ ಅವಕಾಶ ಕಲ್ಪಿಸಿರುವ ಕರ್ನಾಟಕ ಪ್ರಾಣಿಹಿಂಸೆ ತಡೆ ಕಾಯ್ದೆ-2017 (ಎರಡನೇ ತಿದ್ದುಪಡಿ) ರದ್ದು ಕೋರಿ ಸು.ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಪೆಟಾ  (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌) ಸಂಸ್ಥೆ ತುಳುನಾಡಿನ ಜಾನಪದ ಕ್ರೀಡೆಯ ವಿರುದ್ಧ ಮತ್ತೆ ಕಾನೂನು ಸಮರ ಆರಂಭಿಸಿದೆ.

Advertisement

ಅಧ್ಯಾದೇಶ ವಿರುದ್ಧ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. 2018ರ ಮಾರ್ಚ್‌ನಲ್ಲಿ ಪೆಟಾ ಕರ್ನಾಟಕ ಸರಕಾರ ಕಂಬಳಕ್ಕೆ ಅವಕಾಶ ನೀಡಿದ  ಅಧ್ಯಾದೇಶ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹಿಂದೆ ಗೆದುಕೊಳ್ಳಲು  ಹಾಗೂ ನೂತನ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮತ್ತು ಅದನ್ನು ರದ್ದುಪಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಹೊಸ ಅರ್ಜಿ ಸಲ್ಲಿಸಲು ನ್ಯಾಯಾಲಯದ ಅನುಮತಿ ಕೋರಿತ್ತು. ಇದರಂತೆ ಹಿಂದಿನ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು.

1960ರ ಪ್ರಾಣಿಹಿಂಸೆ ತಡೆ ಕಾಯ್ದೆ ಪ್ರಾಣಿಗಳಿಗೆ ಹಿಂಸೆ, ತೊಂದರೆ ನೀಡುವುದರಿಂದ ರಕ್ಷಣೆ ನೀಡುತ್ತಿದ್ದು ಕರ್ನಾಟಕ ಸರಕಾರದ ಹೊಸ ಕಾಯ್ದೆ ಇದಕ್ಕೆ ವಿರುದ್ಧವಾಗಿದೆ. ಹೊಸ ಕಾಯ್ದೆ ಸಂವಿಧಾನದ ಪರಿಚ್ಛೇದ 51 ಎ (ಜಿ)ಯ ಉಲ್ಲಂಘನೆಯಾಗಿದೆ ಎಂದು ಪೆಟಾ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖೀಸಿದೆ. ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ಕಳೆದ ವರ್ಷ ಫೆ. 10ರಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ್ದು, ಕಾನೂನು ಆಗಿ ಜಾರಿಗೊಂಡಿದೆ. 

ನವೆಂಬರ್‌ನಲ್ಲಿ ಕಂಬಳ ಋತು ಪ್ರಾರಂಭ 
ಅವಿಭಜಿತ ದ.ಕ. ಜಿಲ್ಲೆಯಲ್ಲಿ ನವೆಂಬರ್‌ನಿಂದ ಮಾರ್ಚ್‌ವರೆಗೆ ಕಂಬಳ  ಋತು. ಈ ಬಾರಿ ಕಂಬಳ ನವೆಂಬರ್‌ ಎರಡನೇ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಜಿಲ್ಲಾ ಕಂಬಳ ಸಮಿತಿಯ ಸಭೆ ನವೆಂಬರ್‌ನಲ್ಲಿ ನಡೆಯಲಿದ್ದು, ಕಂಬಳಗಳಿಗೆ ದಿನಾಂಕ ನೀಡಲಾಗುತ್ತದೆ. ಈ ಬಾರಿ ಪಿಲಿಕುಳ ಹಾಗೂ ಮಂಜೇಶ್ವರ – ಬಾಯಾರು ಕಂಬಳ ಸೇರ್ಪಡೆಯಾಗಲಿದೆ. ಒಟ್ಟು 21 ಕಂಬಳಗಳು ಆಯೋಜನೆಗೊಳ್ಳುವ ನಿರೀಕ್ಷೆ ಇದೆ. ಇದಲ್ಲದೆ ಸಾಂಪ್ರದಾಯಿಕ ಹಾಗೂ ದೇವರ ಕಂಬಳಗಳು ಸೇರಿ ಸುಮಾರು 100ಕ್ಕೂ ಅಧಿಕ ಉಭಯ ಜಿಲ್ಲೆಗಳಲ್ಲಿ ಜರಗುತ್ತವೆ.

ಕಂಬಳ ವಿರುದ್ಧ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಕಂಬಳಕ್ಕೆ ಅವಕಾಶ ಕಲ್ಪಿಸಿರುವ ಕರ್ನಾಟಕ ಪ್ರಾಣಿಹಿಂಸೆ ತಡೆ ಕಾಯ್ದೆ -2017 (ಎರಡನೇ ತಿದ್ದುಪಡಿ) ಜಾರಿಯಾಗಿದ್ದು, ಕಂಬಳ ಆಯೋಜನೆಗೆ ಆತಂಕ ಇಲ್ಲ. ನವೆಂಬರ್‌ ತಿಂಗಳಿನಲ್ಲಿ ಜಿಲ್ಲಾ ಕಂಬಳ ಸಮಿತಿ ಸಭೆ ನಡೆದು ದಿನಾಂಕಗಳು ನಿರ್ಧಾರವಾಗುತ್ತವೆ.
– ಪಿ.ಆರ್‌. ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next