ಮುಂಬಯಿ : ಬಾಂಬೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡದ್ದನ್ನು ಅನುಸರಿಸಿ ಮುಂಬಯಿಯ ಬೆಸ್ಟ್ (ಬೃಹನ್ಮುಂಬಯಿ ವಿದ್ಯುತ್ ಪೂರೈಕೆ ಮತ್ತು ಸಾರಿಗೆ) ನೌಕರರು ತಮ್ಮ ಮುಷ್ಕರವನ್ನು ಹಿಂದೆಗೆದುಕೊಳ್ಳಲು ಒಪ್ಪಿದ್ದಾರೆ.
ಬೆಸ್ಟ್ ನೌಕರರ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರನ್ನಾಗಿ ಬಾಂಬೆ ಹೈಕೋರ್ಟ್, ನಿವೃತ್ತ ನ್ಯಾಯಾಧೀಶರೋರ್ವರನ್ನು ನೇಮಿಸಿದ ಹಿನ್ನೆಲೆಯಲ್ಲಿ ಬೆಸ್ಟ್ ನೌಕರರು ತಮ್ಮ ಮುಷ್ಕರವನ್ನು ಹಿಂದೆಗೆದುಕೊಂಡರು.
ಮುಷ್ಕರದ ವಿಷಯದಲ್ಲಿ ಎಲ್ಲ ಕಕ್ಷಿದಾರರ ವಾದ – ಪ್ರತಿವಾದಗಳನ್ನು ಆಲಿಸಿದ ಬಳಿಕ ಬಾಂಬೆ ಹೈಕೋರ್ಟ್, ಬೆಸ್ಟ್ ನೌಕರರ ಸಂಘಕ್ಕೆ ಒಂದು ತಾಸಿನೊಳಗೆ ಮುಷ್ಕರವನ್ನು ಹಿಂಪಡೆಯಲು ಸೂಚಿಸಿತು. ಆ ಪ್ರಕಾರ ನೌಕರರ ಸಂಘ ಮುಷ್ಕರವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿತು.
ಬೆಸ್ಟ್ ನೌಕರರಿಗೆ 10 ಸ್ಟೆಪ್ ಗಳ ಇನ್‌ಕ್ರಿಮೆಂಟ್ ನೀಡಬೇಕೆಂದು ಹೈಕೋರ್ಟ್‌ಆದೇಶಿಸಿತು. ಆದರೆ ಬೆಸ್ಟ್ ನೌಕರರ ಸಂಘದ ವಕೀಲರು 15 ಸ್ಟೆಪ್ ಗಳ ಇನ್‌ಕ್ರಿಮೆಂಟ್‌ಗೆ ಆಗ್ರಹಿಸಿದರು.
ಬಿಎಂಸಿ ಮತ್ತು ಮಹಾರಾಷ್ಟ್ರ ಸರಕಾರ ಸಾಧ್ಯವಿರುವಷ್ಟು ಬೇಗನೆ ಬಜೆಟ್ ವಿಲಯನ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಹೈಕೋರ್ಟ್ ಸೂಚಿಸಿತು.
ಮುಷ್ಕರ ನಿರತರ ವಿಷಯದಲ್ಲಿ ಯಾವುದೇ ಕ್ರಮಕ್ಕೆ ಆದೇಶ ಇಲ್ಲದಿರುವ ಹಿನ್ನೆಲೆಯಲ್ಲಿ, ಬೆಸ್ಟ್ ಅಧಿಕಾರಿಗಳು ನೌಕರರೊಂದಿಗಿನ ಉಳಿದ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಬೇಕೆಂದು ಹೈಕೋರ್ಟ್ ಸೂಚಿಸಿತು.