Advertisement

ಉತ್ತಮ ಕೂಲಿ ಕಾರ್ಮಿಕರಿಗೆ ಸನ್ಮಾನ

01:18 PM Mar 07, 2020 | Suhan S |

ಬಾಗಲಕೋಟೆ: ಮಾ.8ರಂದು ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ತ್ರೀಶಕ್ತಿ ಸಮಾವೇಶ ಹಾಗೂ ಪೋಷನ್‌ ಪಕ್ವಾನ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ದಿನಾಚರಣೆ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದಲ್ಲಿ 100 ಮೀಟರ್‌ ಓಟ, ಮ್ಯೂಜಿಕಲ್‌ ಚೇರ್‌, ಗುಂಡು ಎಸೆತ, ಜನಪದ ಗೀತೆ, ಸ್ಕೂಟಿ ಸ್ಪರ್ಧೆಗಳು ನಡೆಯುತ್ತಲಿವೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸಹ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಮಹಿಳಾ ದಿನಾಚರಣೆಯಂದು ವಿಶೇಷ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ 6 ತಾಲೂಕಿನ ಸ್ತ್ರೀಶಕ್ತಿ ಗುಂಪಿನ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ ಒಟ್ಟು 1 ಸಾವಿರ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಿಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಉತ್ತಮ ಕೂಲಿ ಕಾರ್ಮಿಕ ಮಹಿಳೆಯರಿಗೆ ಸನ್ಮಾನಿಸಲಾಗುತ್ತಿದೆ. ಅಲ್ಲದೇ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಾಧನೆಗೈದ ಮಹಿಳಾ ನೌಕರರನ್ನು ಸಹ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು. ಪೋಷನ್‌ ಅಭಿಯಾನ ಯೋಜನೆಯಡಿ ಮಾ.8ರಿಂದ 15 ದಿನಗಳ ಕಾಲ ಪೋಷನ್‌ ಪಕ್ವಾಡವನ್ನಾಗಿ ಆಚರಿಸಲಾಗುತ್ತಿದ್ದು, ಪೋಷನ್‌ ಪಕ್ವಾಡ್‌ ವಿಶೇಷವೇನೆಂದರೆ ಪುರುಷರ ಭಾಗವಹಿಸುವಿಕೆಯಾಗಿದೆ. ಗರ್ಭಿಣಿ, ಬಾಣಂತಿ, ಅಂಗನವಾಡಿಗೆ ಬರುವ ಮಕ್ಕಳ ಪೋಷಕರು ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಕೇಂದ್ರ ಸರಕಾರದಿಂದ ನೂತನವಾಗಿ ಪೋಷನ್‌ ಅಭಿಯಾನ ಕುರಿತು ರಾಷ್ಟ್ರಗೀತೆಯನ್ನು ಸಿದ್ಧಪಡಿಸಿದ್ದು, ಅಭಿಯಾನದಡಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಮೊದಲು ರಾಷ್ಟ್ರಗೀತೆಯನ್ನು ಪ್ರಾರಂಭಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಪುರುಷರಿಗಾಗಿ ಅಡುಗೆ ಸ್ಪರ್ಧೆ ಇಂದು: ಮಹಿಳಾ ದಿನಾಚರಣೆ ಅಂಗವಾಗಿ ಪೋಷನ್‌ ಪಕ್ವಾಡ್‌ದಡಿ ಮಾ.7ರಂದು ಬೆಳಗ್ಗೆ 11 ಗಂಟೆಗೆ ಪುರುಷರಿಗಾಗಿ ಅಡುಗೆ ಸ್ಪರ್ಧೆ ನವನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ 18 ರಿಂದ 35 ವರ್ಷದೊಳಗಿನ ಹಾಗೂ 36 ವರ್ಷ ಮೇಲ್ಪಟ್ಟ ಪುರುಷರಿಗೆ ಹಮ್ಮಿಕೊಳ್ಳಲಾಗಿದೆ. ವಿಜೇತರಾದವರಿಗೆ ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ 2 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ. ಆಸಕ್ತರು ಅಂದು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಗ್ಯಾಸ್‌ ಒದಗಿಸಲಾಗುತ್ತದೆ ಎಂದು ತಿಳಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌.ದೇಸಾಯಿ, ಆರೋಗ್ಯ ಇಲಾಖೆಯ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ವಿಜಯ ಕಂಠಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಕೊರೊನಾ ವೈರಸ್‌ ಬಗ್ಗೆ ಆತಂಕ ಬೇಡ :  ಜಿಲ್ಲೆಯ ಜನತೆ ಕೊರೊನಾ ವೈರಸ್‌ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮುನ್ನಚ್ಚರಿಕೆಯಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸ್ವತ್ಛತೆ, ದೈಹಿಕ ಬಟ್ಟೆ, ಸ್ವತ್ಛವಾಗಿ ಕೈ ತೊಳೆದುಕೊಳ್ಳಬೇಕು ಎಂದು ಸಿಇಓ ತಿಳಿಸಿದರು. ಸಾರ್ವಜನಿಕ ಸಭೆ ಮತ್ತು ಸಮಾರಂಭ ಹಾಗೂ ಜನಸಂದನಿಗಳಿಂದ ದೂರವಿರಬೇಕು. ಜಿಲ್ಲೆಯಲ್ಲಿ ಬೇರೆ ಬೇರೆ ದೇಶದಿಂದ ಬಂದಿರುವ 5 ಜನರನ್ನು ಪ್ರತಿ ದಿನ ತಪಾಸನೆಗೆ ಒಳಪಡಿಸುವದರ ಜೊತೆಗೆ ತೀವ್ರ ನಿಗಾ ವಹಿಸಲಾಗುತ್ತಿದೆ ಸಿಇಒ ಗಂಗೂಬಾಯಿ ಮಾನಕರ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮುನ್ನಚ್ಚರಿಕೆಯಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 104 ತುರ್ತು ಸೇವೆ, ಆರೋಗ್ಯ ಸೇವೆ ಹಾಗೂ ಹೆಲ್ಪಲೈನ್‌ ಮೂಲಕ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಆದಷ್ಟು ತಂಪು ಪಾನೀಯ, ಐಸ್ಕ್ರಿಮ್‌ಗಳಿಂದ ದೂರವಿರಬೇಕು. ಬೇಯಿಸಿದ ಹಾಗೂ ಬಿಸಿಯಾದ ಒಳ್ಳೆಯ ಆಹಾರ ಸೇವಿಸಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ಉಷ್ಣಾಂಶದ ಪ್ರಮಾಣ ಹೆಚ್ಚಿಗಿರುವುದರಿಂದ ಈ ವಾತಾವರಣದಲ್ಲಿ ಕೊರೊನಾ ವೈರಸ್‌ ಸಾಯುತ್ತದೆ. ಆದ್ದರಿಂದ ಯಾರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಿಇಒ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next