Advertisement

ಎಂದೆಂದಿಗೂ ಮರೆಯಲಾರದ “ಗುರು” ಎಲೆಕ್ಟಿವ್ ಕ್ಲಾಸ್ ನಲ್ಲಿ ಸಿಕ್ಕ ಅಮ್ಮ

06:12 PM Sep 04, 2019 | Mithun PG |

ಕಾಲೇಜಿನಲ್ಲಿ ನಾವು ಆಯ್ಕೆ ಮಾಡಿಕೊಂಡ ಕೋರ್ಸನ್ನೂ ಸೇರಿಸಿ ಇನ್ನೊಂದು ಹೊಸ ಕೋರ್ಸ್ ನ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈ ಕ್ಲಾಸ್ ಗೆ ಎಲೆಕ್ಟಿವ್ ಎಂದು ನಾಮಕರಣ ಮಾಡಲಾಗಿತ್ತು. ಅದರಲ್ಲಿ ನಮಗೆ ಇಷ್ಟವಾದ ಯಾವುದೇ ವಿಭಾಗದ ಸಬ್ಜೆಕ್ಟ್ ಅನ್ನು ತೆಗೆದುಕೊಂಡು ಓದಬಹುದಾಗಿತ್ತು. ನಾನಂತೂ ಈ ವಿಚಾರದಲ್ಲಿ ಶುದ್ಧ ಹುಚ್ಚು ಸಾಹಸಕ್ಕೆ ಕೈಹಾಕಿ ಬಿಟ್ಟಿದ್ದೆ. ಎಲ್ಲರೂ ಅವರವರಿಗೆ ಇಷ್ಟವಾದ, ತಕ್ಕಮಟ್ಟಿಗೆ ಸುಲಭವಾದ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ನಾನು  ವಿಷಯದ ಗಂಧಗಾಳಿಯೂ ಅರಿಯದ ಸಂಖ್ಯಾಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದೆ. ಮೊದಲಿನಿಂದಲೂ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದ ನನಗೆ ಮಗ್ಗಿ ಕಲಿಯುವುದೇ ಬ್ರಹ್ಮವಿದ್ಯೆ. ಇನ್ನು ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯ ಕ್ಲಾಸುಗಳನ್ನು ಕೇಳುವುದೆಂದರೆ ಅರ್ಧ ಕೆಜಿ ಕಬ್ಬಿಣದ ಗುಂಡನ್ನು ಗಂಟಲಿಗೆ ಸಿಕ್ಕಿಸಿಕೊಂಡ ಹಾಗಾಗಿತ್ತು.

Advertisement

ಸಬ್ಜೆಕ್ಟ್ ತೆಗೆದುಕೊಳ್ಳುವಾಗ ಫುಲ್ ಜೋಶ್ ನಲ್ಲಿ ತೆಗೆದುಕೊಂಡ  ನನಗೆ ಮೊದಲ ಕ್ಲಾಸ್ ನಲ್ಲೇ ಅದು ನಾನೊಂದು ತೀರ ನೀನೊಂದು ತೀರ ಹಾಡನ್ನು ನೆನಪಿಸುವಂತೆ ಮಾಡಿಬಿಟ್ಟಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಸಂಖ್ಯಾಶಾಸ್ತ್ರದ ಒಂದಾಣೆ ಸಂಖ್ಯೆಯು ತಲೆಯ ಒಳಗಡೆ ಸುಳಿಯುತ್ತಿರಲಿಲ್ಲ. ಇನ್ನೇನು ಈ ವರ್ಷ ನನ್ನ ಪರಿಸ್ಥಿತಿ ದೇವರೇ ಗತಿ ಎಂದುಕೊಳ್ಳುವಾಗಲೇ ದೇವರಂತೆ ಬಂದವರು ಬಬಿತಾ ಮೇಡಂ. ನೋಡಲು ಸ್ವಲ್ಪ ಕುಳ್ಳಗಿದ್ದರೂ ಮನಸ್ಸು ಮಾತ್ರ ಆಕಾಶದಷ್ಟು ವಿಶಾಲ. ಸದಾ ನಗುಮೊಗದಲ್ಲಿ  ವಿದ್ಯಾರ್ಥಿಗಳಿಗೆ ಪಾಠ ಮಾಡುವ ವ್ಯಕ್ತಿತ್ವದವರು.

ನಮ್ಮ ಕ್ಲಾಸ್ ನಲ್ಲಿ ಈ  ಹಿಂದೆಯೇ ಸಂಖ್ಯಾಶಾಸ್ತ್ರದಲ್ಲಿ ಕೈಯಾಡಿಸಿದ ಮೇಧಾವಿಗಳ ಗುಂಪು ಒಂದು ಕಡೆ ಕುಳಿತುಕೊಂಡಿದ್ದರೆ, ನಾವು ನಾಲ್ಕೈದು ಜನ ಅದರ ಗಂಧ ಗಾಳಿಯೂ ಗೊತ್ತಿಲ್ಲದವರು ಇನ್ನೊಂದು ಕಡೆ ಕೂರುತ್ತಿದ್ದೆವು. ಆಗ ಮೇಡಂ ಬಂದು ಲೆಕ್ಕದ ಪ್ರಾಬ್ಲಮ್ ಬಿಡಿಸುವಾಗ  ನಮ್ಮ ಸಹಪಾಠಿಗಳಾದ ಸಂಖ್ಯಾಶಾಸ್ತ್ರದ ಮೇಧಾವಿಗಳು ಎಲ್ಲರಿಗಿಂತಲೂ ಮೊದಲು ಉತ್ತರ ಕಂಡುಹಿಡಿಯಲು ಕಾತುರರಾಗುತ್ತಿದ್ದರು. ಆದರೆ ಅವರೆಲ್ಲ ಐದೈದು ಲೆಕ್ಕ ಮುಗಿಸುವಾಗ ನಮ್ಮ ಬಡಪಾಯಿ ಗ್ರೂಪ್ ಗೆ ಮೊದಲನೆ ಲೆಕ್ಕದ ಗೆರೆ ಎಳೆದೇ ಆಗುತ್ತಿರಲಿಲ್ಲ. ಹೀಗಿರುವಾಗ ಬಬಿತಾ ಮೇಡಂ ನಮ್ಮ ಪಾಡನ್ನು ಗಮನಿಸಿ, ಇನ್ನುಳಿದವರಿಗೆ ಬೇರೆ ಲೆಕ್ಕ ಕೊಟ್ಟು ನಮ್ಮೆಲ್ಲರ ಬಳಿ ಬಂದು ಪೆನ್ಸಿಲ್ ಹಿಡಿದು ಬುಕ್ ನಲ್ಲಿ  ಪ್ರತಿಲೆಕ್ಕವನ್ನು ಹೇಗೆ ಮಾಡಬೇಕು ಎಂಬುದನ್ನು ಅಂಗನವಾಡಿ ಮಕ್ಕಳಿಗೆ ಹೇಳಿಕೊಡುವಂತೆ ಹೇಳಿಕೊಡುತ್ತಿದ್ದರು.

ಮೇಡಂ ಪ್ರತಿ ಬಾರಿ ಎಷ್ಟು ಹೇಳಿಕೊಟ್ಟರೂ ನಮ್ಮದು ಒಂದೇ ಉತ್ತರ “ಅರ್ಥ ಆಗ್ಲಿಲ್ಲ ಮೇಡಂ”. ಆಗೆಲ್ಲ ಅವರು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಪದೆ ಪದೆ ಅದೇ ಲೆಕ್ಕವನ್ನು ವಿವರಿಸುತ್ತಿದ್ದರು. ಅವರಲ್ಲಿ ನಾವು “ಮೇಡಂ ನಾವು ಮೊದಲಿನಿಂದಲೂ ಸಂಖ್ಯಾಶಾಸ್ತ್ರ ಕಲಿತವರಲ್ಲ. ಇದೇ ಮೊದಲ ಸಲ ಈ ಸಬ್ಜೆಕ್ಟ್ ಓದುತ್ತಿರುವುದು” ಎಂದಾಗ ನಗುತ್ತಲೇ “ನಾನು ಕೂಡ ಬೇಸಿಕಲಿ ಸ್ಟ್ಯಾಟ್ ಬ್ಯಾಕ್ ಗ್ರೌಂಡ್ ನವಳಲ್ಲ”, ಆದರೆ ನಂತರ ಇದನ್ನು ಓದಿ ಅರ್ಥ ಮಾಡಿಕೊಂಡಿದ್ದು.” ಈ ಸಬ್ಜೆಕ್ಟ್ ತುಂಬಾ ಸುಲಭವಾದದ್ದು, ಅರ್ಥ ಮಾಡಿಕೊಂಡರಾಯ್ತು”. ನೀವು ಕಲಿರಿ, ನಾನು ನಿಮಗೆ ನೂರು ಸಲ ಹೇಳಿಕೊಡುತ್ತೇನೆ, ಬೇರೆಯವರಿಗಿಂತ ನಿಮಗೆ ಜಾಸ್ತಿ ಮಾರ್ಕ್ಸ್ ಬರುತ್ತೆ ನೋಡ್ತಿರಿ ಎಂದೆಲ್ಲ ನಮ್ಮನ್ನು ಪ್ರೋತ್ಸಾಹಿಸಿದರು.

ಕ್ಲಾಸ್ ಮುಗಿದ ಮೇಲೆ ಮನೆಯಲ್ಲಿ ಪ್ರಾಕ್ಟೀಸ್ ಮಾಡಿ ಬನ್ನಿ ಎಂದು ಒಂದಿಷ್ಟು ಲೆಕ್ಕ ಕೊಡುತ್ತಿದ್ದರು. ಆದರೆ ಅವರು ಲೆಕ್ಕ ಕೊಡುತ್ತಿದ್ದದ್ದು ಎಷ್ಟು ಸತ್ಯವೋ ನಾವ್ಯಾರು ಒಂದು ದಿನವೂ ಆ ಲೆಕ್ಕವನ್ನೂ ಮಾಡಿರಲಿಲ್ಲ ಅನ್ನೋದು ಅಷ್ಟೇ ಸತ್ಯವಾಗಿತ್ತು. ಅದಕ್ಕೆ ಕಾರಣ ಅವರ ಪಾಠ ಅರ್ಥವಾಗುತ್ತಿರಲಿಲ್ಲ ಎಂದಲ್ಲ. ನಮಗೆ ಲೆಕ್ಕವೇ ಅರ್ಥವಾಗುತ್ತಿರಲಿಲ್ಲ ಇನ್ನೂ ಉತ್ತರ ಎಲ್ಲಿಂದ ತಾನೇ ಬರುತ್ತೆ. ಪ್ರತಿಸಲ ಲೆಕ್ಕ ಮಾಡದೆ ಬಂದಾಗ ಮತ್ತೆ ಅದೇ ಲೆಕ್ಕವನ್ನು ಅವರಾಗಿಯೇ ಬಿಡಿಸಿ ಕಲಿಸಿದರು.

Advertisement

ಕ್ಲಾಸ್ ಮುಗಿದ ಮೇಲೆ ಕಾರಿಡಾರ್ ನಲ್ಲಿ ಸಿಕ್ಕಾಗಲೂ ಕರೆದು ಮಾತನಾಡಿಸಿ ಪಾಠ ಅರ್ಥ ಆಯಿತಾ? ಎಂದು ಕೇಳುವ ಮಾತೃ ಹೃದಯ ಅವರದ್ದು. ಅವರನ್ನು ನೋಡಿದಾಗಲೆಲ್ಲಾ ನನ್ನ ಅಮ್ಮನೇ ನೆನಪಾಗಿ ಬಿಡುತ್ತಿದ್ದಳು. “ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು” ಎಂಬುದೊಂದು ಮಾತಾಗಿದ್ದರೆ ಇಲ್ಲಿ ಗುರುವೇ ತಾಯಾಗಿದ್ದರು.

ಪರೀಕ್ಷೆಯ ದಿನದವರೆಗೂ ಯಾವುದೇ ಗೊಂದಲವಿದ್ದರೂ ಸಣ್ಣ ಮಕ್ಕಳಿಗೆ ವಿವರಿಸುವಂತೆ ವಿವರಿಸಿದರು. ಅಂತೂ ಇಂತೂ ಅವರು ಮಾಡಿದ ಪಾಠದಿಂದ ಹೆಸರೇ ಗೊತ್ತಿರದೆ ಸೇರಿದ ಸಬ್ಜೆಕ್ಟ್ ಬಗ್ಗೆ ಆಸಕ್ತಿ ಮೂಡುವಂತಾಯಿತು. ಒಂದಷ್ಟು ಕಲಿತುಕೊಳ್ಳುವಂತೆ ಆಯಿತು. ಹೆಚ್ಚಲ್ಲದಿದ್ದರೂ ಒಂದು ಹಂತದ ಮಾರ್ಕ್ಸ್ ನೊಂದಿಗೆ ನಾವೆಲ್ಲರೂ ಪಾಸಾದೆವು. ಬೇರೆ ಸಬ್ಜೆಕ್ಟ್ ಗಳನ್ನು ಕಲಿಯಲು ಹೊರಟೆವು. ಆದರೆ ಬಬಿತಾ ಮೇಡಂ ಮಾತ್ರ ನಮ್ಮ ಜೀವನದಲ್ಲಿ ಸಿಕ್ಕ ಪ್ರೀತಿಯ ಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ.

ಆದರ್ಶ ಕೆ.ಜಿ

ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗ

ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next