“ಆರಂಭವೇನೋ ಚೆನ್ನಾಗಿತ್ತು, ಆದರೆ, ಆ ನಂತರ ಎಲ್ಲವೂ ಮಕಾಡೆ ಮಲಗುವಂತಾಯಿತು…’ :
– 2020ರಲ್ಲಿನ ಸಿನಿಮಾ ರಂಗದ ವಿಶ್ಲೇಷಣೆಗೆ ಇಳಿದರೆ ಸಿನಿಮಾ ಮಂದಿಯಿಂದ ಮೊದಲು ಕೇಳಿಬರುವ ಮಾತಿದು. ಅದಕ್ಕೆಕಾರಣ ಆರಂಭದ ಖುಷಿ ಹಾಗೂ ಆ ನಂತರದ ಹತಾಶೆ. ಕೋವಿಡ್ 19 ಎಂಬ ಮಹಾಮಾರಿಯಾವಕ್ಷೇತ್ರವನ್ನು ಬಿಡದೇ ಕಾಡಿದ್ದು, ಕಾಡುತ್ತಿರೋದು ಗೊತ್ತೇ ಇದೆ. ಇದರಿಂದ ಚಿತ್ರರಂಗಕೂಡಾ ಹೊರತಾಗಿಲ್ಲ. ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಿದೆ. ಇತ್ತೀಚಿನ ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ತೆರೆಕಾಣುತ್ತಿದ್ದ ಚಿತ್ರರಂಗದಲ್ಲಿ ಈ ವರ್ಷ ತೆರೆಕಂಡಿದ್ದುಕೇವಲ 80 ಪ್ಲಸ್ ಚಿತ್ರಗಳು. 80ಕ್ಕೂ ಹೆಚ್ಚು ಚಿತ್ರಗಳು ಚಿತ್ರಮಂದಿರಗಳಲ್ಲಿ ತೆರೆಕಂಡರೆ ಉಳಿದಂತೆ ಏಳು ಚಿತ್ರಗಳು ಓಟಿಟಿಯ ಮೊರೆ ಹೋಗಿವೆ. ಆ ಚಿತ್ರಗಳನ್ನು ಸೇರಿಸಿ ಹೇಳುವುದಾದರೆ ಈ ವರ್ಷ ತೆರೆಕಂಡಿದ್ದು 87ಪ್ಲಸ್ ಸಿನಿಮಾಗಳು ಎನ್ನಬಹುದು. ಈ ತರಹದ ಅತಿ ಕಡಿಮೆ ಸಿನಿಮಾ ಬಿಡುಗಡೆಯನ್ನು ಚಿತ್ರರಂಗಕಾಣದೆ ದಶಕಗಳೇಕಳೆದಿವೆ. ಏಕೆಂದರೆ 90ರ ದಶಕದಲ್ಲಿ ವರ್ಷಕ್ಕೆ 80ರಿಂದ 100 ಚಿತ್ರಗಳಷ್ಟೇ ಬಿಡುಗಡೆಯಾಗುತ್ತಿದ್ದವು. ಆ ನಂತರ ವರ್ಷಗಳಲ್ಲಿಕನ್ನಡ ಚಿತ್ರರಂಗ ಬೆಳೆಯುತ್ತಾ ಬರುವ ಜೊತೆಗೆ ಬಿಡುಗಡೆಕೂಡಾ ಹೆಚ್ಚಾಯಿತು. ಆದರೆ 2020 ಚಿತ್ರರಂಗವನ್ನು ಮತ್ತೆ ಹಲವು ವರ್ಷಗಳ ಹಿಂದಕ್ಕೆ ದೂಡಿದು ಸುಳ್ಳಲ್ಲ. ಈ ವರ್ಷ ಚಿತ್ರರಂಗಕ್ಕೆ ಸಿಕ್ಕಿದ್ದುಕೇವಲ ಐದು ತಿಂಗಳಷ್ಟೇ. ಆರಂಭದಲ್ಲಿನ ಎರಡೂವರೆ ತಿಂಗಳು ಹಾಗೂ ಕೊರೊನಾ ಲಾಕ್‌ಡೌನ್ ನಂತರ ಎರಡೂವರೆ ತಿಂಗಳು. ಆದರೆ ವರ್ಷಾರಂಭದಲ್ಲಿದ್ದ ಜೋಶ್ ಚಿತ್ರರಂಗದಲ್ಲಿ ವರ್ಷದಕೊನೆಗೆಕಾಣಿಸಲೇ ಇಲ್ಲ. ಅದಕ್ಕೆಕಾರಣ ಮತ್ತದೇ ಕೋವಿಡ್ ಭಯ.
ಸೋಲು-ಗೆಲುವಿನ ಲೆಕ್ಕಾಚಾರ ಕಷ್ಟ : ಪ್ರತಿ ವರ್ಷ ಸಿನಿಮಾಗಳ ಸೋಲು-ಗೆಲುವಿನ ಲೆಕ್ಕಾಚಾರದೊಂದಿಗೆ ಚಿತ್ರರಂಗ ಹೊಸ ವರ್ಷಕ್ಕೆ ತೆರೆದುಕೊಳ್ಳುತ್ತಿತ್ತು. ಆದರೆ,ಈ ವರ್ಷ ಆ ರೀತಿ ಲೆಕ್ಕಾಚಾರ ಹಾಕೋದು ಕಷ್ಟ. ಏಕೆಂದರೆ ಮೆಚ್ಚುಗೆ ಪಡೆದ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರದಲ್ಲಿ ಹೆಚ್ಚು ದಿನ ನಿಲ್ಲಲಿಲ್ಲ. ಇನ್ನು ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಓಡದಿದ್ದರೂಆ ನಂತರ ಓಟಿಟಿ ಫ್ಲಾಟ್‌ಫಾರಂಗಳಲ್ಲಿ ಸೂಪರ್ ಹಿಟ್‌ಆದವು. ಹಾಗಾಗಿ, ಚಿತ್ರರಂಗದ ಸೋಲು-ಗೆಲುವಿನಲೆಕ್ಕಾಚಾರ ಕಷ್ಟ.ಜೊತೆಗೆ ವರ್ಷದ ನಾಯಕ, ನಾಯಕಿ ಯಾರೂಎನ್ನುವುದನ್ನು ನಿರ್ಧರಿಸುವುದು ಕೂಡಾ ಸುಲಭವಲ್ಲ
2020 ವರ್ಷಾರಂಭ ಸೂಪರ್ :
ಚಿತ್ರರಂಗದ ಪಾಲಿಗೆ2020ರ ವರ್ಷಾರಂಭ ತುಂಬಾ ಚೆನ್ನಾಗಿತ್ತು. ಸಾಕಷ್ಟು ಹೊಸ ಬಗೆಯ ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಮೆಚ್ಚುಗೆ ವ್ಯಕ್ತವಾದುವು. ಇದು ಚಿತ್ರರಂಗದ ಮಂದಿಯಲ್ಲಿನ ವಿಶ್ವಾಸಕೂಡಾ ಹೆಚ್ಚಿಸಿತ್ತು. “ಲವ್ ಮಾಕ್ಟೇಲ್’, “ದಿಯಾ’, “ಮಾಲ್ಗುಡಿ ಡೇಸ್’, “ಜಂಟಲ್‌ಮೆನ್’, “ಪಾಪ್‌ಕಾರ್ನ್ ಮಂಕಿ ಟೈಗರ್’, “ಇಂಡಿಯಾ ವರ್ಸಸ್ ಇಂಗ್ಲೆಂಡ್’, “ನಾನು ಮತ್ತು ಗುಂಡ’, “ದ್ರೋಣ’, “ಶಿವಾಜಿ ಸುರತ್ಕಲ್’, “ಬಿಚ್ಚುಗತ್ತಿ’, “ಒಂದು ಶಿಕಾರಿಯ ಕಥೆ’, “ಮಾಯಾ ಬಜಾರ್’ ಸೇರಿದಂತೆ ಅನೇಕ ಸಿನಿಮಾಗಳು ತಮ್ಮ ಕಥಾವಸ್ತು, ನಿರೂಪಣೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದವು. ಈ ಚಿತ್ರಗಳ ಬಗ್ಗೆ ವಿಮರ್ಶಕರಿಂದಲೂ ಮೆಚ್ಚುಗೆವ್ಯಕ್ತವಾಗಿತ್ತು. ಮುಂದೆ ಇದೇ ರೀತಿ ವಿಭಿನ್ನ ಕಥಾವಸ್ತುವಿನ ಸಿನಿಮಾಗಳ ಮೂಲಕ ಚಿತ್ರರಂಗ ಬೆಳಗುವ ಆಶಾಭಾವಇತ್ತಾದರೂ ಕೊರೊನಾ ಅದನ್ನು ನುಂಗಿ ಹಾಕಿತು.
ಓಟಿಟಿ ವೇದಿಕೆ :
2020ರಲ್ಲಿ ಚಿತ್ರರಂಗದ ಮಂದಿ ಕಂಡುಕೊಂಡು ಮತ್ತು ಮೊರೆಹೋದ ಹೊಸ ವೇದಿಕೆ ಎಂದರೆ ಅದು ಓಟಿಟಿ. ಸಾಮಾನ್ಯ ಸಿನಿಮಾ ಬಿಡುಗಡೆಯಾದ ಬಳಿಕ ಓಟಿಟಿಗೆ ನೀಡುತ್ತಿದ್ದ ಸಿನಿಮಾ ಮಂದಿ ಲಾಕ್‌ಡೌನ್ ಸಮಯದಲ್ಲಿ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಲು ಮನಸ್ಸು ಮಾಡಿದರು. ಪರಿಣಾಮವಾಗಿ ಎಂಟು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ. “ಲಾ’, “ಫ್ರೆಂಚ್ ಬಿರಿಯಾನಿ’, “ಭೀಮಸೇನಾ ನಳಮಹಾರಾಜ’, “ಮನೆ13′, “ಭ್ರಮೆ’, “ಪೆಂಟರ್’, “ತನಿಖೆ’, “ಭೂಮಿಕಾ’ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ.
ಸ್ಟಾರ್ಸ್ ದರ್ಶನಕ್ಕೆ ಅವಕಾಶ ಸಿಗಲೇ ಇಲ್ಲ :
ಚಿತ್ರರಂಗದ ವಾರ್ಷಿಕ ವಹಿವಾಟಿನಲ್ಲಿ ಪ್ರಮುಖಪಾತ್ರ ವಹಿಸುವವರು ಸ್ಟಾರ್‌ಗಳು. ಹೊಸಬರ ಎಷ್ಟೇ ಸಿನಿಮಾ ಬಿಡುಗಡೆಯಾದರೂ, ಸ್ಟಾರ್‌ಗಳ ಸಿನಿಮಾ ಬಿಡುಗಡೆಯಾದಾಗ ಚಿತ್ರರಂಗದ ಕಲರ್ ಬದಲಾಗುತ್ತದೆ. ಆದರೆ, ಈ ವರ್ಷ ಕೋವಿಡ್ 19 ಸ್ಟಾರ್‌ಗಳ ದರ್ಶನಕ್ಕೆ ಅವಕಾಶ ಕೊಡಲೇ ಇಲ್ಲ. ಈ ವರ್ಷ ಅಭಿಮಾನಿಗಳಿಗೆ ತೆರೆಮೇಲೆ ದರ್ಶನ ಕೊಟ್ಟ ಏಕೈಕ ನಟ ಎಂದರೆ ಶಿವರಾಜ್ ಕುಮಾರ್. ಅವರ “ದ್ರೋಣ’ ಚಿತ್ರ ಈ ವರ್ಷವೇ ತೆರೆಕಂಡಿತ್ತು. ಉಳಿದಂತೆಯಾವ ಸ್ಟಾರ್ ನಟರ ಚಿತ್ರಗಳು ಕೂಡಾ 2020ರಲ್ಲಿ ತೆರೆಕಂಡಿಲ್ಲ. ಹಾಗೆ ನೋಡಿದರೆ ಬಹುತೇಕ ಎಲ್ಲಾ ಸ್ಟಾರ್‌ಗಳು ಈ ವರ್ಷ ತೆರೆಮೇಲೆ ಬರಬೇಕಿತ್ತು.
ಹಣಕಾಸಿನ ನಷ್ಟಕ್ಕಿಂತ ತಮ್ಮವರನ್ನುಕಳೆದುಕೊಂಡ ನಷ್ಟ ಹೆಚ್ಚು ;
ಚಿತ್ರರಂಗಕ್ಕೆ ಈ ವರ್ಷ ಹಣಕಾಸಿನ ನಷ್ಟಕ್ಕಿಂತ ತಮ್ಮವರನ್ನುಕಳೆದುಕೊಂಡ ನಷ್ಟವೇ ಹೆಚ್ಚು.2020 ಚಿತ್ರರಂಗದ ಪಾಲಿಗೆ ತುಂಬಾ ನೋವುತಂದ ವರ್ಷ ಎಂದರೆ ತಪ್ಪಲ್ಲ. ಚಿತ್ರರಂಗದ ಸಾಕಷ್ಟು ಮಂದಿ 2020ರಲ್ಲಿ ಇಹಲೋಕ ತ್ಯಜಿಸಿದರು. ನಟರಾದ ಚಿರಂಜೀವಿ ಸರ್ಜಾ, ಬುಲೆಟ್ ಪ್ರಕಾಶ್, ರಾಕ್‌ಲೈನ್ ಸುಧಾಕರ್, ಎಚ್.ಜಿ. ಸೋಮಶೇಖರ್, ಮಿಮಿಕ್ರಿ ರಾಜಗೋಪಾಲ್, ಸುಶೀಲ್ ಗೌಡ, ಸಿದ್ಧರಾಜು ಕಲ್ಯಾಣ್ಕರ್, ಹುಲಿವಾನ್ ಗಂಗಾಧರಯ್ಯ, ಬೂದಾಳ್ ಕೃಷ್ಣಮೂರ್ತಿ, ಮಾಧವ ಆಚಾರ್ಯ, ಖ್ಯಾತ ಗಾಯಕ ಎಸ್ಪಿಬಿ ಬಾಲಸುಬ್ರಮಣ್ಯಂ, ಹಿರಿಯ ಸಂಗೀತ ನಿರ್ದೇಶಕ ರಾಜನ್, ಹಿರಿಯ ನಟಿಯರಾದ ಕಿಶೋರಿ ಬಲ್ಲಾಳ್, ಶಾಂತಮ್ಮ, ಹಿರಿಯ ನಿರ್ದೇಶಕರಾದ ವಿಜಯ ರೆಡ್ಡಿ, ಜಿ.ಮೂರ್ತಿ, ಶಾಹುರಾಜ್ ಶಿಂಧೆ, ಮೇಕಪ್ ಕೃಷ್ಣ, ಸ್ಟೀಲ್ ಸೀನು,ಕಪಾಲಿ ಮೋಹನ್,ಕೊಡಗನೂರು ಜಯಕುಮಾರ್ (ಜೂ.ರಾಜ್ ಕುಮಾರ್),ಕೃಷ್ಣಮೂರ್ತಿ ನಾಡಿಗ್, ಹಿರಿಯ ಛಾಯಾಗ್ರಾಹಕ ಎಸ್ .ವಿ.ಶ್ರೀಕಾಂತ್, ಹಿರಿಯ ನಿರ್ಮಾಪಕ ಡಿ.ಕಮಲಾಕರ್, ಬೇಕರಿ ಶ್ರೀನಿವಾಸ್ ಅವರನ್ನು ಚಿತ್ರರಂಗ 2020ರಲ್ಲಿ ಕಳೆದುಕೊಳ್ಳಬೇಕಾಗಿ ಬಂತು.
ವರ್ಷಾಂತ್ಯಕ್ಕೆ ಭರವಸೆಯ ಬೆಳಕು :
ಚಿತ್ರರಂಗದಲ್ಲಿ ವರ್ಷಾಂತ್ಯಕ್ಕೆ ಭರವಸೆಯ ಬೆಳಕುಕಂಡಿದೆ. ಅಕ್ಟೋಬರ್ 15ರಿಂದ ಸರ್ಕಾರ ಚಿತ್ರಬಿಡುಗಡೆಗೆ ಅವಕಾಶಕೊಟ್ಟರೂ, ಸಿನಿಮಾ ಬಿಡುಗಡೆಯಾಗಿದ್ದು ನವೆಂಬರ್ 20ಕ್ಕೆ. ಈ ಸಿನಿಮಾ ಹೊಸಕಥಾಹಂದರದೊಂದಿಗೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಆ ನಂತರ ತೆರೆಕಂಡ ಒಂದಷ್ಟು ಚಿತ್ರಗಳೂ ಭರವಸೆ ಮೂಡಿಸುವ ಮೂಲಕ ವರ್ಷಾಂತ್ಯದಲ್ಲಿ ಸಣ್ಣ ನಗುವಿಗೆ ಕಾರಣವಾಗಿದೆ.
2021ರ ಮೇಲೆ ನಿರೀಕ್ಷೆ :
ಸದ್ಯಕನ್ನಡ ಚಿತ್ರರಂಗ 2021ರ ಮೇಲೆ ನಿರೀಕ್ಷೆ ಇಟ್ಟಿದೆ. ಅದಕ್ಕೆ ಕಾರಣಬಿಡುಗಡೆಗೆ ಕಾದು ಕುಳಿತಿರುವ ಸ್ಟಾರ್ ಸಿನಿಮಾಗಳು ಹಾಗೂ ಹೊಸಬರ ಹೊಸ ಬಗೆಯ ಸಿನಿಮಾಗಳು. ಈ ಸಿನಿಮಾಗಳ ಮೂಲಕ ಚಿತ್ರರಂಗ ಮತ್ತೆ ಸಮೃದ್ಧಿಯಾಗಲಿದೆ ಎಂಬ ನಂಬಿಕೆ ಸಿನಿಮಾ ಮಂದಿಯದ್ದು. ಶಿವರಾಜ್‌ಕುಮಾರ್, ದರ್ಶನ್, ಸುದೀಪ್, ಪುನೀತ್, ಉಪೇಂದ್ರ, ಧ್ರುವ ಸರ್ಜಾ,ಯಶ್, ಗಣೇಶ್, ಪ್ರೇಮ್, ರಕ್ಷಿತ್, ಶ್ರೀಮುರಳಿ, ವಿಜಯ್, ಧನಂಜಯ್ …ಹೀಗೆ ಅನೇಕ ನಟರ ಚಿತ್ರಗಳು 2021ಕ್ಕೆ ತೆರೆಕಾಣಲಿವೆ. ಇದರ ಜೊತೆಗೆ ಕಂಟೆಂಟ್ ನಂಬಿಕೊಂಡಿರುವ ಹೊಸಬರ ಚಿತ್ರಗಳು ಕಮಾಲ್ ಮಾಡುವ ನಿರೀಕ್ಷೆಯೂ ಇದೆ.