Advertisement

ಭಾರತದಲ್ಲಿ ಉತ್ತಮ ನಾಟಕಗಳು ರಚನೆಯಾಗಿವೆ : ಸಿ.ವಿ. ಪೊದುವಾಳ್‌

08:55 AM Mar 23, 2018 | Team Udayavani |

ಕಾಸರಗೋಡು: ಪಾಶ್ಚಾತ್ಯ ದೇಶಗಳಿಗಿಂತಲೂ ಉತ್ತಮ ನಾಟಕಗಳು ಭಾರತದಲ್ಲಿ ಸೃಷ್ಟಿಯಾಗಿವೆ ಎಂದು ನಟ, ನಾಟಕಕಾರ, ಜೋತಿಷಿ ಸಿ.ವಿ.ಪೊದುವಾಳ್‌ ಹೇಳಿದರು.

Advertisement

ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾಗಿ ರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಶ್ರೀ ಲಕ್ಷ್ಮೀ ವೆಂಕಟೇಶ ಟ್ರಸ್ಟ್‌ ಕಾಸರಗೋಡು ಸಹಕಾರದೊಂದಿಗೆ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕಾಸರಗೋಡಿನ ದ್ವಾರಕಾನಗರದ ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯದಲ್ಲಿ ಆಯೋಜಿಸಿದ ರಂಗ ಸಂಸ್ಕೃತಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಯುವ ಜನಾಂಗ ಅನ್ಯ ಸಂಸ್ಕಾರದತ್ತ ಆಕರ್ಷಿತಗೊಳ್ಳುತ್ತಿದೆ. ಈ ಮೂಲಕ ಭಾರತೀಯ ಕಲೆ, ಸಂಸ್ಕೃತಿ ನಾಶದ ಅಂಚಿಗೆ ಸರಿಯುತ್ತಿದೆ. ಇಂತಹ ಪರಿಸ್ಥಿತಿಯಿಂದ ಪಾರು ಮಾಡಲು ರಂಗ ಶಿಬಿರ, ಸಂಸ್ಕೃತಿಯ ಜಾಗೃತಿ, ತಿಳಿವಳಿಕೆ ಮೂಡಿಸುವ ಕೆಲಸಗಳಾಗಬೇಕು. ಈ ಹಿನ್ನೆಲೆಯಲ್ಲಿ ಈ ವಿದ್ಯಾಲಯದಲ್ಲಿ ರಂಗಚಿನ್ನಾರಿ ಆಯೋಜಿಸಿದ ರಂಗ ಸಂಸ್ಕೃತಿ ಶಿಬಿರ ಶ್ಲಾಘನೀಯ ಎಂದರು. ವೇದಗಳಿಂದ ನಾಟ್ಯ ಉದ್ಭವವಾಗಿದ್ದರೆ, ಕಲೆಯ ಉದ್ಭವವೂ ಭಾರತದಲ್ಲೇ ಆಗಿದೆ ಎಂದು ಅಭಿಪ್ರಾಯಪಟ್ಟ ಅವರು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಯುವ ತಲೆಮಾರಿಗೆ ದಾಟಿಸುವ ಕೆಲಸ ಇಂದು ಅತ್ಯಗತ್ಯವಾಗಿ ನಡೆಯಬೇಕಾಗಿದೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ ಕಾಸರ ಗೋಡು ನಗರಸಭಾ ಸದಸ್ಯ ಕೆ. ರವೀಂದ್ರ, ಖ್ಯಾತ ಪ್ರಸಾಧನ ಕಲಾವಿದೆ ವಿದ್ಯಾ ಕಾಮತ್‌ ಅವರು ಕಲೆ, ಸಂಸ್ಕೃತಿಯ ಬಗ್ಗೆ ಯುವ ತಲೆಮಾರಿಗೆ ತಿಳಿಸಿಕೊಡುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ರಂಗ ಚಿನ್ನಾರಿ ಪ್ರಯತ್ನ ಅಭಿನಂದನಾರ್ಹ ಎಂದರು.

ವಿದ್ಯಾಲಯದ ಕ್ಷೇಮ ಸಮಿತಿ ಅಧ್ಯಕ್ಷ ಕೆ. ಆನಂದ ಅವರು ಅಧ್ಯಕ್ಷತೆ ವಹಿಸಿದರು. ಅಶ್ವತ್ಥ್ ಕಾಮತ್‌, ಮುಖವಾಡ ಖ್ಯಾತಿಯ ಪ್ರಕಾಶ್‌ ನಾಯಕ್‌, ಮಾನಸಾ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ  ಜಲಜಾಕ್ಷಿ ಟೀಚರ್‌ ಸ್ವಾಗತಿಸಿದರು.

Advertisement

ರಂಗ ಸಂಸ್ಕೃತಿ ಅಭಿಯಾನ 
ಪ್ರಾಸ್ತಾವಿಕ ಮಾತುಗಳನ್ನಾಡಿದ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ರಂಗಭೂಮಿಯ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲು ರಂಗಚಿನ್ನಾರಿ ಸಂಸ್ಥೆ ರಂಗ ಸಂಸ್ಕೃತಿ ಅಭಿಯಾನವನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಲ್ಲಿ ರಂಗ ಸಂಸ್ಕೃತಿಯ ಬಗ್ಗೆ ಶಿಬಿರಗಳನ್ನು ಆಯೋಜಿಸಲಾಗುವುದು. ಭಾರತೀಯ ಉದಾತ್ತ ಕಲೆ, ಸಂಸ್ಕೃತಿ ಯನ್ನು ಯುವ ತಲೆಮಾರಿಗೆ ದಾಟಿಸಲು ರಂಗ ಚಿನ್ನಾರಿ ಕೆಲಸ ಮಾಡುತ್ತಿದ್ದು, ಕಳೆದ 11 ವರ್ಷಗಳಿಂದ ಹಲವು  ಕಾರ್ಯ ಕ್ರಮಗಳನ್ನು ಆಯೋಜಿಸಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ವಿದ್ಯಾರ್ಥಿ ಗಳಿಗೆ ಹಸ್ತಾಂತರಿಸಲು ಕೆಲಸ ನಡೆಯ ಬೇಕು. ಈ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿರುವ ರಂಗಚಿನ್ನಾರಿ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದರು.  ಈ ವಿದ್ಯಾಲಯ ಸಂಸ್ಕೃತಿಯನ್ನು ದಾಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಾ. 23ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕಾಸರಗೋಡು ನಗರಸಭಾ ಸದಸ್ಯೆ, ನಿವೃತ್ತ ಮುಖ್ಯೋಪಾಧ್ಯಾಯಿನಿ ಸವಿತಾ ಟೀಚರ್‌ ಪ್ರಮಾಣ ಪತ್ರ ವಿತರಿಸುವರು. ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಸಂತೋಷ್‌ ಶೆಣೈ ಅತಿಥಿಯಾಗಿ ಭಾಗವಹಿಸುವರು. ತರಬೇತುದಾರರಾಗಿ ಜಗನ್‌ ಪವಾರ್‌, ಪ್ರಕಾಶ್‌ ನಾಯಕ್‌ ಭಾಗವಹಿಸಿದರು. ಶಿಬಿರ ನಿರ್ದೇಶಕರಾಗಿ ಕಾಸರಗೋಡು ಚಿನ್ನಾ ಮತ್ತು ರಂಗಸಂಸ್ಕೃತಿ ಸಂಚಾಲಕರಾಗಿ ಸತ್ಯನಾರಾಯಣ ಕೆ. ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next