Advertisement

ಉತ್ತಮ ಪ್ರದರ್ಶನ ಶ್ರೀಕೃಷ್ಣ ಪಾರಿಜಾತ

06:28 PM Apr 25, 2019 | mahesh |

ಭಗವಂತನ ಲೀಲೆ ಏನು ಎಂದು ಅರಿಯುವುದು ಕಷ್ಟ, ಯಾವ ಸಮಯದಲ್ಲಿ ಹೇಗೆ, ಏನು ಮಾಡುವನು ಎಂಬುದೇ ನಿಗೂಢ . ಭೂಭಾರವನ್ನು ಇಳಿಸಲು ಅವತಾರ ತಾಳಿದ ದೇವ ಕೃಷ್ಣ ಸಾಮಾನ್ಯ ಮನುಷ್ಯನಿಗೆ ಬರುವ ಸ್ಥಿತಿಯನ್ನು ತಾನೂ ಪಡುವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಾನೆ. ಜೀವನವನ್ನು ಒಂದು ನಾಟಕ ರಂಗ ಮಾಡಿ, ಅದರಲ್ಲಿ ಬರುವ ಎಲ್ಲರನ್ನೂ ಪಾತ್ರಧಾರಿಗಳಾಗಿ ಕುಣಿಸುವ ಸೂತ್ರಧಾರಿಯಾಗಿ ಏನೂ ಅರಿಯದಂತೆ ಇರುವವನೇ ಈ ಶ್ರೀಕೃಷ್ಣ.

Advertisement

ನಾರದರು ಶ್ರೀಕೃಷ್ಣನಲ್ಲಿಗೆ ಬಂದು ಸುರಲೋಕದ ಪುಷ್ಪ ಪಾರಿಜಾತವನ್ನು ಶ್ರೀಕೃಷ್ಣನಿಗೆ ಕೊಟ್ಟು ನಿನಗೆ ಅತಿ ಪ್ರಿಯರಾದರವರಿಗೆ ನೀಡೆನ್ನಲು, ಕೃಷ್ಣ ರುಕ್ಮಿಣಿಗೆ ನೀಡುತ್ತಾನೆ.ಇದನ್ನು ತಿಳಿದ ಸತ್ಯಭಾಮೆ ಕೋಪಗೊಂಡು ಅನ್ನ ಆಹಾರ ತ್ಯಜಿಸಲು, ಕೃಷ್ಣ ಅವಳನ್ನು ಸಂತೈಸುತ್ತಾನೆ. ಅದಕ್ಕಾಗಿ ಆತ ಪಡುವ ಕಷ್ಟ, ಅನಂತರ ಅವಳಿಗೆ ಸ್ವರ್ಗ ಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ, ಪಾರಿಜಾತದ ವೃಕ್ಷವನ್ನೇ ತೋರಿಸುತ್ತೇನೆ ಎಂದು ಅಭಯವನ್ನು ನೀಡಿ ಅವಳನ್ನು ಸಂತೈಸುವುದು ಇತ್ಯಾದಿ.ಇದು ಕೃಷ್ಣ ಆಡಿದ ನಾಟಕವೇ ಸರಿ. ಏಕೆಂದರೆ ಮುಂದೆ ಇವನ ಮಗನಾದ ನರಕಾಸುರನು ತನ್ನ ತಂದೆ ತಾಯಿಯಿಂದ ಮರಣ ಎಂಬ ವರವನ್ನು ಪೂರೈಸಲು ಸತ್ಯಭಾಮೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಲು ಮಾಡಿದ ನಾಟಕ. ಇದಿಷ್ಟು ಶ್ರೀಕೃಷ್ಣ ಪಾರಿಜಾತ ಪ್ರಸಂಗದ ಆಶಯ.

ಪೇಟೆ ವೆಂಕಟ್ರಮಣ ದೇವಸ್ಥಾನದ ಎದುರಿನ ರಂಗಸ್ಥಳದಲ್ಲಿ ಈ ಯಕ್ಷಗಾನವನ್ನು ಸುಬ್ರಹ್ಮಣ್ಯ ಧಾರೇಶ್ವರ ಅವರ ನಿರ್ದೇಶನದಲ್ಲಿ ಸೊಗಸಾಗಿ ಪ್ರಸ್ತುತ ಪಡಿಸಿದವರು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಮಂಡಳಿಯವರು. ಶ್ರೀಕೃಷ್ಣನ ಪಾತ್ರದಲ್ಲಿ ಸಾಲಿಗ್ರಾಮ ಮೇಳದ ಪ್ರಸನ್ನ ಶೆಟ್ಟಿಗಾರ್‌ ಪ್ರಸಂಗವು ಎಲ್ಲಿಯೂ ಹಿಂದೆ ಬೀಳದಂತೆ ಅಚ್ಚುಕಟ್ಟಾಗಿ ನಿರೂಪಿಸಿದರು. ಸತ್ಯಭಾಮೆಯಾಗಿ ಹವ್ಯಾಸಿ ಕಲಾವಿದ ಶಮಂತ ಕೋಟರವರದ್ದು ಪ್ರಬುದ್ಧ ಅಭಿನಯ. ಮಕರಂದನಾಗಿ ಹಾಸ್ಯಗಾರ ಶ್ರೀಧರ ಭಟ್‌ ಕಾಸರ್‌ಕೋಡ್‌ ಅವರು ಹಾಗೂ ಸಖೀಯಾಗಿ ನಾಗರಾಜ ದೇವಿಮಕ್ಕಿ ಅವರು ಸೂಕ್ತವಾದ ಸಮಯ ಪ್ರಜ್ಞೆಯ ಹಾಸ್ಯದಿಂದ ನಗೆಗಡಲಲ್ಲಿ ತೇಲಿಸಿದರು. ನಾರದರಾಗಿ ಹೆಮ್ಮಾಡಿ ರಾಮಚಂದ್ರ ಭಟ್‌, ದೇವೇಂದ್ರನಾಗಿ ಉದಯ ನಾಯ್ಕ, ದೇವೇಂದ್ರನ ಬಲದವರಾಗಿ ಪ್ರಶಾಂತ ಆಚಾರ್ಯ ಉತ್ತಮ ರೀತಿಯಲ್ಲಿ ನಿರ್ವಹಿಸಿದರು.

ಧಾರೇಶ್ವರರ ಭಾಗವತಿಕೆ ಇಡೀ ಪ್ರದರ್ಶನದ ಹೈಲೈಟ್‌. “ಸಿಟ್ಟುಮಾಡಲು ಬೇಡ ಸುಗುಣ ಸಂಪನೆ’° ಹಾಗೂ “ಮಾನಿನಿಮಣಿಯೆ ಬಾರೆ’ ಪದ್ಯಗಳಂತೂ ಮತ್ತೆ ಮತ್ತೆ ಕೇಳಬೇಕೆಂಬ ಭಾವ ಸ್ಪುರಿಸಿತು. ಮದ್ದಲೆಯಲ್ಲಿ ಗಜಾನನ ಭಂಡಾರಿ ಬೋಳ್ಗೆರೆ ಹಾಗೂ ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಉತ್ತಮ ಸಾಥ್‌ ನೀಡಿದರು. ಪ್ರಸಂಗ ಪ್ರಾರಂಭಕ್ಕೆ ಮೊದಲು ಸಭಾಲಕ್ಷಣಕ್ಕೆ ನಾಲ್ಕು ಜನ ಹೆಣ್ಣುಮಕ್ಕಳ ಬಾಲಗೋಪಾಲರು ಹಾಗೂ ಐದು ಜನ ಹೆಣ್ಣುಮಕ್ಕಳ ಪೀಠಿಕೆ ಸ್ತ್ರೀವೇಷವನ್ನು ಸ್ವತಃ ವಿಠಲ ಕಾಮತರೇ ಮಾರ್ಗದರ್ಶನ ನೀಡಿ, ಭಾಗವತಿಕೆ ಮಾಡಿದರು.

ರಾಘವೇಂದ್ರ ಉಡುಪ ವಿ. ನೇರಳಕಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next