Advertisement
ಗೀತೆಗಳುಸ್ವಚ್ಛತೆ, ಸ್ವಚ್ಛತೆ ಎಲ್ಲಿದೆ ಸ್ವಚ್ಛತೆ, ಅಲ್ಲಿದೆ ಅಲ್ಲಿದೆ ಆರೋಗ್ಯ, ಮನದ ಸ್ವಚ್ಛತೆ, ಮನೆಮನೆ ಸ್ವಚ್ಛತೆ, ಬನ್ನಿ ಸ್ವಚ್ಛತೆ ಮಾಡೋಣ|| ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ನಾಡನು ಸೇರಿ ಕಟ್ಟೋಣ, ಛಲವನು ಹಿಡಿಯುತ, ಚೀಲವ ಹಿಡಿಯುತ ನಾಡಿನ ಕಸವನ್ನು ತೆಗೆಯೋಣ- ಇಂಥ ನೂರಾರು ಸ್ವಚ್ಛತಾ ಗೀತೆಗಳ ಹಾದಿಯನ್ನು ಹಿಡಿದು ವಿದ್ಯಾರ್ಥಿಗಳು ಸಾಗುತ್ತಿದ್ದಾರೆ. ತಾಲೂಕಿನ ಪ್ರಾಥಮಿಕ , ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಪದ್ಯಗಳನ್ನು ರಚಿಸಿದ್ದಾರೆ. ಜತೆಗೆ ಸ್ವರಚಿತ ಕವನ ಗಳನ್ನು ಸ್ವಚ್ಛತಾ ಪ್ರಾರ್ಥನೆಯಾಗಿ ಹಾಡುತ್ತಾರೆ.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿ ಅವರು ಜಿಲ್ಲೆಯಲ್ಲಿ ಸ್ವತ್ಛತೆಯ ಅನುಷ್ಠಾನಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಇದೂ ಒಂದು. ಮಕ್ಕಳಿಂದಲೇ ಸ್ವತ್ಛತಾ ಜಾಗೃತಿಗಾಗಿ ಕವನ ರಚಿಸಿ, ಹಾಡಿಸುವ ಸೃಜನಾತ್ಮಕ ಚಟುವಟಿಕೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದು, ತಾಲೂಕಿನಲ್ಲಿ ಅಕ್ಟೋಬರ್ ನಿಂದಲೇ 403 ಶಾಲೆಗಳಲ್ಲಿ ಸ್ವಚ್ಛತಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದೊಂದಿಗೆ ವೇಳಾಪಟ್ಟಿ ತಯಾರಿಸಿ ಶಾಲೆಗಳಿಗೆ ನೀಡಲಾಗಿದ್ದು, ಅದರಂತೆ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಸ್ವಚ್ಛತಾ ದಿನ
ಪ್ರತೀ ಶನಿವಾರದ ಒಂದು ಅವಧಿಯಲ್ಲಿ ಶಾಲೆಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ವೇಳಾಪಟ್ಟಿಗೆ ಅನುಸಾರವಾಗಿ ಈಗಾಗಲೇ ತರಗತಿವಾರು ಸ್ವಚ್ಛತಾ ಸ್ಪರ್ಧೆ, ಶಾಲಾ ಸ್ವಚ್ಛತಾ ನೀತಿ ರಚನೆ, ಸ್ವತ್ಛತಾ ಚಿತ್ರಕಲಾ ಸ್ಪರ್ಧೆ, ಹೆತ್ತವರಿಗೆ ಕಾರ್ಯಾಗಾರ, ಮನೆಯಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಪಂಚಾಯತ್‌ಗೆ ನೀಡುವ ಕಾರ್ಯಕ್ರಮ, ಸ್ವಚ್ಛತೆಗೆ ಸಂಬಂಧಪಟ್ಟ ನಾಟಕ ಪ್ರದರ್ಶನ, ಕೊಲಾಜ್ ತಯಾರಿಕೆ ಇತ್ಯಾದಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪರಿಸರ ಹಾಡು, ಕಸದಿಂದ ರಸ ಕಾರ್ಯಾಗಾರ, ಸ್ವಚ್ಛತಾ ಜಾಥಾ, ಮಳೆ ನೀರು ಕೊಯ್ಲು, ಸ್ವಚ್ಛತೆಯ ಬಗ್ಗೆ ಕವನ ರಚನೆ, ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮದ ಸ್ವತ್ಛತೆ ಸಮೀಕ್ಷೆ ಹಾಗೂ ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮ, ಸೌಲಭ್ಯಗಳ ಬಗ್ಗೆ ತಿಳಿಯಲು ಪಂಚಾಯತ್‌ಗೆ ಭೇಟಿ ಇತ್ಯಾದಿ ನಡೆಯಲಿದೆ.
Related Articles
ಈ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಿದ ಶಾಲೆಗಳಿಗೆ ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಸ್ವಚ್ಛತಾ ಪ್ರಶಸ್ತಿ, ತಾ| ಮಟ್ಟದ ಸ್ವತ್ಛ ಹಾಗೂ ಹಸಿರು ವಿದ್ಯಾಲಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶಾಲಾ ಹಂತದಲ್ಲೇ ಸ್ವಚ್ಛತೆಯ ಬಗ್ಗೆ ಎಳೆಯರಲ್ಲಿ ಜಾಗೃತಿ ಮೂಡಿಸುವ ಈ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
ಪ್ರೇರಣದಾಯಕಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯ ಕ್ರಮದ ಬಗ್ಗೆ ಶಾಲೆಗಳಿಂದ ಉತ್ತಮ ಸ್ಪಂದನೆ ದೊರಕಿದೆ. ಕೆಲವೆಡೆ ಸ್ವಚ್ಛತಾ ಪ್ರಾರ್ಥನೆಯನ್ನು ನಿತ್ಯ ಹಾಡುವುದಲ್ಲದೆ ರೆಕಾರ್ಡಿಂಗ್ ಕೂಡ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗೆ ಪೋತ್ಸಾಹ ನೀಡುವುದ
ರೊಂದಿಗೆ ಸ್ವತ್ಛತೆಯ ಅರಿವು ಮೂಡಿಸಲು ಇದು ಪ್ರೇರಕ.
– ರಾಜೇಶ್
(ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ) ಬಂಟ್ವಾಳ ತಾಲೂಕಿನ 403 ಶಾಲೆಗಳಲ್ಲಿ ಸ್ವಚ್ಛತೆ ಕುರಿತ ಚಟುವಟಿಕೆಯನ್ನು ಪ್ರತೀ ಶನಿವಾರ ನಡೆಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಎಸೆಂಬ್ಲಿಯಲ್ಲೂ ನಾಲ್ಕೈದು ನಿಮಿಷ ಸ್ವಚ್ಛತಾ ಪ್ರಾರ್ಥನೆ ಹಾಡಲಾಗುತ್ತಿದೆ. ವಿದ್ಯಾರ್ಥಿಗಳು ಸ್ವತ್ಛತೆಯ ಬಗ್ಗೆ ಕವನ ರಚಿಸಿದ್ದು ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಪಡಿಸುವ ಇರಾದೆ ಇದೆ.
– ಶಿವಪ್ರಕಾಶ್ ,
(ಕ್ಷೇತ್ರ ಶಿಕ್ಷಣಾಧಿಕಾರಿ) ರತ್ನದೇವ್ ಪುಂಜಾಲಕಟ್ಟೆ