Advertisement

ರಾಜ್ಯೋತ್ಸವ ವಿಶೇಷ; ಕನ್ನಡದ ಅತ್ಯುತ್ತಮ ಪ್ರಶಸ್ತಿಗಳು

10:12 AM Nov 01, 2019 | Mithun PG |

ಕನ್ನಡ ನಾಡು ವಿವಿಧ ಕಲೆ, ಸಾಹಿತ್ಯ ಪ್ರಕಾರ, ಸಂಸ್ಕೃತಿಗಳ ಬೀಡು. ಅಸಂಖ್ಯಾತ ಕಲಾವಿದರು, ಸಾಹಿತಿಗಳು ಈವರೆಗೂ ಕಪ್ಪು ಮಣ್ಣಿನ ಈ ನಾಡಿನಲ್ಲಿ ಆಗಿಹೋಗಿದ್ದಾರೆ, ಮತ್ತೆ ಮತ್ತೆ ಉದಯಿಸುತ್ತಲೇ ಇದ್ದಾರೆ. ಕರ್ನಾಟಕ ಕಲೆಗೆ, ಕಲಾವಿದರಿಗೆ ಹೆಸರು ಪಡೆದ ಹಾಗೆ, ಕಲಾವಿದರ ಪೋಷಣೆಗೂ ಖ್ಯಾತಿ ಪಡೆದಿದೆ. ಹಲವು ವಿಖ್ಯಾತ ಸಾಧಕರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ವರ್ಷಂಪ್ರತಿ ಹಲವಾರು ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಅದರಲ್ಲಿ ಕೆಲವು ಪ್ರಶಸ್ತಿಗಳ ಸಂಕ್ಷಿಪ್ತ ಪರಿಚಯ ನಿಮಗಾಗಿ:

Advertisement

1) ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
೧೧ನೇ ಶತಮಾನದಲ್ಲಿ ಜೀವಿಸಿದ್ದ ಅತ್ತಿಮಬ್ಬೆ ದಾನಧರ್ಮಗಳಿಗೆ ಹೆಸರಾದವಳು. ಇವಳು ಕನ್ನಡದ ರತ್ನತ್ರಯರಲ್ಲಿ ಒಬ್ಬನಾದ ‘ಪೊನ್ನ’ನ ‘ಶಾಂತಿಪುರಾಣ’ವನ್ನು ಸಾವಿರ ಪ್ರತಿ ಮಾಡಿಸಿ, ಅದರ ಜೊತೆಗೆ ಜಿನದೇವನ ಸುವರ್ಣ ಪ್ರತಿಮೆರಗಳನ್ನು ದಾನ ಮಾಡಿದಳು. ಈ ರೀತಿಯ ದಾನ-ಧರ್ಮದ ಸ್ವಭಾವದಿಂದ ‘ದಾನ ಚಿಂತಾಮಣಿ’ ಎಂದು ಹೆಸರಾದಳು.
ಅತ್ತಿಮಬ್ಬೆಯ ನೆನಪಿಗಾಗಿ ಕನ್ನಡ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮಹಿಳೆಯರಿಗೆ ಕರ್ನಾಟಕ ಸರ್ಕಾರವು, 1995ರಿಂದ ಪ್ರತಿವರ್ಷವೂ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಇದು ಕನ್ನಡ ಲೇಖಕಿಯರಿಗೆ ನೀಡುವ ಅತ್ಯುನ್ನತ ಗೌರವ.

2) ಪಂಪ ಪ್ರಶಸ್ತಿ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪಂಪ ಕವಿಗೆ ಅಗ್ರಸ್ಥಾನ. ಚಾಲುಕ್ಯರ ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿ ಆಶ್ರಯ ಪಡೆದಿದ್ದ ಈತನ ಕಾಲ ಕ್ರಿ.ಶ. 940. ಲೌಕಿಕ ಹಾಗೂ ಧಾರ್ಮಿಕ ಕಾವ್ಯಗಳನ್ನು ರಚಿಸಿ, ಹೊಸ ಪರಂಪರೆಗೆ ನಾಂದಿ ಹಾಡಿದವನು ಈತ.
ಪಂಪನ ನೆನಪಿಗಾಗಿ ಕರ್ನಾಟಕ ಸರ್ಕಾರವು 1988ರಿಂದ ಪ್ರತಿವರ್ಷವೂ ಸಾಹಿತಿಗಳಿಗೆ ಪ್ರತಿವರ್ಷವೂ ‘ಪಂಪ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಒಂದು ವರ್ಷ ಶ್ರೇಷ್ಠ ಸೃಜನಶೀಲ ಕೃತಿಗೂ, ಮತ್ತೊಂದು ವರ್ಷ ಶ್ರೇಷ್ಠ ಸೃಜನೇತರ ಕೃತಿಗೂ ನೀಡಲಾಗುವುದು. ಪ್ರಶಸ್ತಿಯ ಮೊತ್ತ ಮೂರು ಲಕ್ಷ ರೂಪಾಯಿ.

3)  ಜಾನಪದ ಶ್ರೀ ಪ್ರಶಸ್ತಿ
ಜಾನಪದ ಲೋಕವೇ ಒಂದು ವಿಸ್ಮಯ. ನಡೆ-ನುಡಿ, ಆಚಾರ ವಿಚಾರಗಳಲ್ಲಿ ಜಾನಪದ ಭಿನ್ನವಾಗಿ ಎದ್ದುನಿಲ್ಲುತ್ತದೆ. ಕನ್ನಡದ ಈ ಶ್ರೀಮಂತ ಸಂಸ್ಕೃತಿಯ ಕುರಿತಾಗಿ ಅಧ್ಯಯನ ನಡೆಸಿದ ತಜ್ಞರಿಗೆ ಗೌರವಾರ್ಥವಾಗಿ, ಸರ್ಕಾರ ಪ್ರತಿವರ್ಷವೂ ಜಾನಪದ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

4)  ಟಿ. ಎಸ್ಸಾರ್ ಪ್ರಶಸ್ತಿ
ಟಿ. ಎಸ್ಸಾರ್ ಪ್ರಶಸ್ತಿಯು ಕನ್ನಡ ಪತ್ರಿಕೋದ್ಯಮ ಕ್ಷೇತ್ರಕ್ಕೆ 150 ವರ್ಷ ತುಂಬಿದ ನೆನಪಿಗೆ ಕರ್ನಾಟಕ ಸರ್ಕಾರವು ಪತ್ರಿಕಾರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಿಕೋದ್ಯಮಿಗೆ ನೀಡುವ ಪ್ರಶಸ್ತಿ. ಕನ್ನಡದ ಖ್ಯಾತ ಪತ್ರಕರ್ತರಾದ ಟಿ. ಎಸ್. ರಾಮಚಂದ್ರರಾಯರ ಹೆಸರಿನಲ್ಲಿ 1993ರಿಂದ ಪ್ರತಿವರ್ಷವೂ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ.

Advertisement

5)ದಿ. ಟಿ. ಚೌಡಯ್ಯ ಪ್ರಶಸ್ತಿ
ಮೈಸೂರಿನ ಟಿ. ಚೌಡಯ್ಯನವರು ಪಿಟೀಲು ಸಂಗೀತ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ಅಮೋಘ ಪಾಂಡಿತ್ಯ ಸಂಪಾದಿಸಿದವರು. ಇಂತಹ ಮಹಾನ್ ಸಂಗೀತ ವಿದುಷಿಯ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ವರ್ಷಂಪ್ರತಿ ವಾದ್ಯ ಸಂಗೀತ ಕ್ಷೇತ್ರದ ದಿಗ್ಗಜರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

6) ಜಕಣಾಚಾರಿ ಪ್ರಶಸ್ತಿ
ಹೊಯ್ಸಳರ ಶಿಲ್ಪ ಕೌಶಲ್ಯವು ಜಗತ್ತಿಗೇ ಹಬ್ಬಲು ಹಾಗೂ ಇಂದಿಗೂ ಕನ್ನಡಿಗರು ಹೆಮ್ಮೆ ಪಡಲು ಕಾರಣನಾದ ಶಿಲ್ಪಿ ಜಕಣಾಚಾರಿ. ಕ್ರಿ.ಶ. 1260ರ ಹೊತ್ತಿಗೆ ನಿರ್ಮಾಣವಾದ ತುರುವೇಕೆರೆ ದೇವಾಲಯದಲ್ಲಿ ಈ ಶಿಲ್ಪಿಯ ಉಲ್ಲೇಖವಿದೆ. ಆದರೆ ಹೊಯ್ಸಳರಿಂದ ನಿರ್ಮಾಣವಾದ ಹಲವಾರು ದೇವಾಲಯಗಳ ಅದ್ಭುತ ಶಿಲ್ಪಕಲಾ ಸೃಷ್ಟಿಗೆ ಈತನೇ ಕಾರಣ ಎಂಬುದು ಹಲವರ ನಂಬಿಕೆ. ಈ ಅಮರ ಶಿಲ್ಪಿಯ ನೆನಪಿಗಾಗಿ ಶಿಲ್ಪಕಲೆಯಲ್ಲಿ ಸಾಧನೆ ಮಾಡಿದವರಿಗೆ, 1995ರಿಂದ ಪ್ರತಿವರ್ಷವೂ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ.

7) ಶಾಂತಲಾ ನಾಟ್ಯ ಪ್ರಶಸ್ತಿ
ಪ್ರಸಿದ್ಧ ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲಾ ದೇವಿ ಅಪೂರ್ವ ನೃತ್ಯಗಾತಿ. ನಾಟ್ಯರಾಣಿ ಎಂದೇ ಈಕೆ ಪ್ರಸಿದ್ಧಳು. ಈ ಕಲಾ ಸಾಮ್ರಾಜ್ಞಿಯ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ಶಾಂತಲಾ ನಾಟ್ಯ ಪ್ರಶಸ್ತಿಯನ್ನು ಸ್ಥಾಪಿಸಿ, 1995ರಿಂದ ನಾಟ್ಯ ಕಲಾವಿದರಿಗೆ ನೀಡುತ್ತಿದೆ.

8)ಕನಕ – ಪುರಂದರ ಪ್ರಶಸ್ತಿ
ಈ ಇಬ್ಬರು ಕೀರ್ತನಕಾರರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಇವರ ಸಂಗೀತ ಕ್ಷೇತ್ರದ ಸೇವೆ ಹಾಗೂ ಇವರ ನೆನಪಿಗಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಸರ್ಕಾರವು ಇವರ ಹೆಸರಿನಲ್ಲಿ ಪ್ರತಿ ವರ್ಷವು ಶಾಸ್ತ್ರೀಯ ಸಂಗೀತಕ್ಕೆ ಗಮನಾರ್ಹ ಕೊಡುಗೆ ನೀಡಿದ ಸಂಗೀತಗಾರರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಇದು ಸಂಗೀತ ಕ್ಷೇತ್ರದ ಅತಿ ದೊಡ್ಡ ಗೌರವ.

9)ಗುಬ್ಬಿ ವೀರಣ್ಣ ಪ್ರಶಸ್ತಿ
ಖ್ಯಾತ ರಂಗಭೂಮಿ ಕರ್ಮಿ ವೀರಣ್ಣ ತುಮಕೂರು ಜಿಲ್ಲೆಯ ಗುಬ್ಬಿಯವರು. ‘ಗುಬ್ಬಿ ಶ್ರೀ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ’ಯನ್ನು ಮುನ್ನಡೆಸಿ, ಡಾ. ರಾಜ್, ನರಸಿಂಹರಾಜು, ಬಾಲಕೃಷ್ಣ, ಬಿ. ವಿ. ಕಾರಂತ ಮುಂತಾದ ಮೇರು ನಟರನ್ನು ಲೋಕಕ್ಕೆ ಪರಿಚಯಿಸಿದವರು. ಮೈಸೂರು ಅರಸರಿಂದ ‘ನಾಟಕ ರತ್ನ’ ಎಂಬ ಬಿರುದಿಗೆ ಪಾತ್ರರಾದ ಇವರ ಹೆಸರಿನಲ್ಲಿ, ಕನ್ನಡ ರಂಗಭೂಮಿಗೆ ಗಮನಾರ್ಹ ಸೇವೆ ಸಲ್ಲಿಸಿದವರಿಗಾಗಿ ಸರ್ಕಾರವು ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

10) ರಾಜ್ಯೋತ್ಸವ ಪ್ರಶಸ್ತಿ
ಇದು ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿ. 1966ರಲ್ಲಿ ಪ್ರಾರಂಭವಾದ ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವದಂದು ನೀಡಲಾಗುತ್ತದೆ.

ಇದಿಷ್ಟೇ ಅಲ್ಲದೆ, ಸರ್ಕಾರದ ವತಿಯಿಂದ ಹಲವಾರು ಪ್ರಶಸ್ತಿಗಳು ಸಾಧಕರನ್ನು ಅರಸಿ ಬರುತ್ತವೆ. ಸಾಧಕರಿಗೆ ಗೌರವ ನೀಡುವುದರ ಜೊತೆಗೆ, ವಿಖ್ಯಾತರ ಹೆಸರನ್ನು ಅಜರಾಮರವಾಗಿಸುವ ಕೆಲಸವೂ ಜಂಟಿಯಾಗಿ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಕೊಡಮಾಡುವ ಪ್ರಶಸ್ತಿಯ ಆಶಯವೂ ಇದೇ ಆಗಿದೆ. ಕನ್ನಡ ಎಲ್ಲೆಡೆ ಮೊಳಗಲಿ!

– ಟಿ. ವರ್ಷಾ ಪ್ರಭು
– ಪ್ರಥಮ ಎಂಸಿಜೆ
– ಎಸ್.ಡಿ.ಎಂ ಕಾಲೇಜು, ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next