Advertisement

ಶ್ರೇಷ್ಠ ಕಲಾವಿದರು ಜನಿಸಿದ ನಾಡು ಕಲಬುರಗಿ: ಮಹೇಶ್ವರಯ್ಯ

09:49 AM Jul 16, 2018 | Team Udayavani |

ಕಲಬುರಗಿ: ಕಲಬುರಗಿಯು ಸಾಧು, ಸಂತರು, ಶರಣರು ಜನಿಸಿದ ನಾಡಷ್ಟೇ ಅಲ್ಲ, ಶ್ರೇಷ್ಠ ಕಲಾವಿದರು ಜನಿಸಿದ ನಾಡು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಹೇಳಿದರು.

Advertisement

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಚಿತ್ರಕಲಾವಿದ ಬಸವರಾಜ ಎಸ್‌. ಜಾನೆ ಅವರ ಅಭಿನಂದನಾ ಸಮಾರಂಭ ಹಾಗೂ ಕೃತ್ತಿಕ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಡಾಕ್ಟರೆಟ್‌ ಪದವಿಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಕೇಂದ್ರಿಯ ವಿವಿಯು ಈ ಭಾಗದ ಶ್ರೇಷ್ಠ ಕಲಾವಿದ ನಾಡೋಜ ಡಾ| ಜೆ.ಎಸ್‌. ಖಂಡೇರಾವ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿದ ಐವರಿಗೆ ಗೌರವ ಡಾಕ್ಟರೆಟ್‌ ಪದವಿ ನೀಡಿ ಗೌರವಿಸಿದೆ ಎಂದರು.

ದ್ರಾವಿಡ ಶೈಲಿಯ ಕೃತಿಗಳನ್ನು ಬಸವರಾಜ ಎಲ್‌. ಜಾನೆ ಅವರು ಸಂವೇದನಾಶೀಲತೆಯಿಂದ ರಚಿಸಿದ್ದಾರೆ. ಸಂಯೋಜನೆ, ರೇಖಾಚಿತ್ರ ಮತ್ತು ವರ್ಣತಂತ್ರಗಳನ್ನು ರಚಿಸುವ ಜಾನೆ ಅವರು ಈ ಭಾಗದ ಅತ್ಯಂತ ಶ್ರೇಷ್ಠ ಕಲಾವಿದರು ಎಂದರು. 

ಪ್ರಪಂಚದಲ್ಲಿ ಸಾಕಷ್ಟು ಜನ ರಾಜಕಾರಣಿಗಳು ಜನಿಸಿರಬಹುದು. ಆದರೆ ಶ್ರೇಷ್ಠ ಕಲಾವಿದರು, ಸಂಗೀತಗಾರರು ಜನಿಸುವುದು ಬಹಳ ಅಪರೂಪ. ಕೋಟಿಗೊಬ್ಬರು ಅಂತಹವರು ಜನಿಸುತ್ತಾರೆ. ಅದರಲ್ಲಿ ಜಾನೆಯವರು ಒಬ್ಬರು ಎಂದು ಹೇಳಿದರು.

Advertisement

ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಚಿತ್ರಕಲಾವಿದ ಡಾ| ಜೆ.ಎಸ್‌. ಖಂಡೇರಾವ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಸಿ. ಚಂದ್ರಶೇಖರ ಕೃತ್ತಿಕಾ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಖ್ಯಾತ ಸಾಹಿತಿ ಪ್ರೊ| ಸ್ವಾಮಿರಾವ್‌ ಕುಲಕರ್ಣಿ, ಚಿತ್ರಕಲಾವಿದ ಬಸವರಾಜ ರೆ. ಉಪ್ಪಿನ್‌, ಅಭಿನಂದನಾ ಸಮಿತಿ ಅಧ್ಯಕ್ಷ ಡಾ| ಎ.ಎಸ್‌. ಪಾಟೀಲ, ಕಾರ್ಯಾಧ್ಯಕ್ಷ ಆರ್‌.ಡಿ. ಚಂದ್ರಶೇಖರ, ಹಿರಿಯ ಚಿತ್ರಕಲಾವಿದ ಬಸವರಾಜ ಎಲ್‌. ಜಾನೆ ಹಾಗೂ ಅವರ ಪತ್ನಿ ಮಂಜುಳಾ ಜಾನೆ ಹಾಜರಿದ್ದರು.

ಸಿದ್ದಾರ್ಥ ಚಿಮ್ಮಾಇದ್ಲಾಯಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ, ಕುಮಾರಿ ಗಾರ್ಗಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಡಾ| ಪಿ. ಪರಶುರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಅಶೋಕ ಶೆಟಕಾರ, ಮೇಘಾ ಪಾಟೀಲ ನಿರೂಪಿಸಿದರು. ಜಾನೆ ದಂಪತಿಗಳನ್ನು ಅವರ ಅಭಿಮಾನಿಗಳು ಹಾಗೂ ಶಿಷ್ಯರು ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next