ಬೆಳಗಾವಿ: ತನ್ನ ಹಾಗೂ ಪತ್ನಿಯೊಂದಿಗಿನ ಮನಸ್ತಾಪ ತಣ್ಣಗಾಗಿಸಲು ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸಲು ಬಂದ ಮಹಿಳೆಯನ್ನೇ ಮದುವೆ ಮಾಡಿಕೊಂಡು ಈಗ ಇಬ್ಬರು ಮಡದಿ ಹಾಗೂ ಓರ್ವ ಪ್ರೇಯಸಿಯನ್ನು ಹೊಂದಿದ ಯೋಧನ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಸದ್ಯ ಗೋಕಾಕ ನಿವಾಸಿ ಆಗಿರುವ ಅಜೀತ್ ಮಾದರ ಈ ಕಥೆಯ ನಾಯಕ. ಈತ ಬಿಹಾರದ ಪಾಟ್ನಾದಲ್ಲಿ ಸಿಆರ್‌ಪಿಎಫ್ ಯೋಧನಾಗಿ ಕರ್ತವ್ಯದಲ್ಲಿದ್ದಾನೆ. 2011ರಲ್ಲಿ ದಾಕ್ಷಾಯಿಣಿ ಎಂಬುವರ ಜೊತೆಗೆ ಈತನ ವಿವಾಹ ವಾಗಿತ್ತು. ನಂತರ ಎರಡು ವರ್ಷಗಳ ಹಿಂದೆ ಬೆಳಗಾವಿ ಯವಳಾದ ಸೀಮಾ ಚವ್ಹಾಣ ಎಂಬಾಕೆಯನ್ನು ಪ್ರೇಮಿಸಿ ಪಾಟ್ನಾಕ್ಕೆ ಕರೆದೊಯ್ದು ಸಂಸಾರ ಪ್ರಾರಂಭಿಸಿ ದ್ದನು. ಇದರಿಂದ ಬೇಸತ್ತ ಮೊದಲ ಪತ್ನಿ ಪತಿಯ ಮೇಲಧಿಕಾರಿಗೆ ದೂರು ನೀಡುತ್ತಿದ್ದಂತೆ ಗಂಡ-ಹೆಂಡಿರ ಜಗಳ ಬಿಡಿಸಲು ಬಂದ ಮಹಿಳೆಯನ್ನೇ ಮದುವೆ ಆಗಿ ಕಥಾನಾಯಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ.
ಸಂತೋಷ ಚವ್ಹಾಣ ಎಂಬವರೊಂದಿಗೆ ಸೀಮಾ ಮದುವೆಯಾಗಿದ್ದರೂ ಅಜಿತನ ಮೇಲೆ ಪ್ರೇಮಾಂಕುರವಾಗಿ ಆತನೊಂದಿಗೇ ಪಾಟ್ನಾಕ್ಕೆ ತೆರಳಿದ ಆಕೆ ಅಲ್ಲಿಯೇ ವಾಸಿಸುತ್ತಿದ್ದಳು. ಹೀಗಾಗಿ ಸೀಮಾಳ ಪತಿ ಸಂತೋಷ ಪತ್ನಿ ಕಾಣೆಯಾಗಿದ್ದಾಳೆಂದು ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ವಿಷಯ ಅಜಿತ್ ಮೊದಲ ಪತ್ನಿ ದಾಕ್ಷಾಯಿಣಿಗೆ ಗೊತ್ತಾದಾಗ ಗಂಡನ ವಿರುದ್ಧ ಸಿಆರ್‌ಪಿಎಫ್ ಕಮಾಂಡರ್‌ಗೆ ದೂರು ನೀಡಿದ್ದಳು. ಸಾಂಸಾರಿಕ ಸಮಸ್ಯೆ ಬಗೆಹರಿಸಿಕೊಂಡು ಬರುವಂತೆ ಕಮಾಂಡರ್ ಅಜಿತ್‌ಗೆ 15 ದಿನಗಳ ರಜೆ ನೀಡಿ ಬೆಳಗಾವಿಗೆ ಕಳಿಸಿದ್ದರು. ಬೆಳಗಾವಿಗೆ ಮರಳಿದ ಯೋಧ ತಮ್ಮ ಸಾಂಸಾರಿಕ ಸಮಸ್ಯೆ ಬಗೆಹರಿಸಲು ಪತ್ನಿಯೊಂದಿಗೆ ಸಮಾಜ ಸೇವಕಿ ಜಯಶ್ರೀ ಸೂರ್ಯವಂಶಿ ಬಳಿ ಹೋಗಿದ್ದರು. ಆದರೆ ನ್ಯಾಯ ಕೊಡಿಸಲು ಬಂದಿದ್ದ ಜಯಶ್ರೀಯನ್ನೇ ಯೋಧ ಪ್ರೀತಿಸಿ ಕಳೆದ ಡಿ.31ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾನೆ. ಈ ಕುರಿತು ಮೊದಲ ಪತ್ನಿ ದಾಕ್ಷಾಯಿಣಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಅಜಿತ್ ವಿರುದ್ಧ ಪತ್ನಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ. ಮೊದಲ ಪತ್ನಿಗೆ ವಿಚ್ಛೇದನ ಕೊಡದೇ ಹಾಗೂ ಈತನನ್ನು ನಂಬಿ ಬಂದಿದ್ದ ಸೀಮಾಗೆ ದಾರಿ ತೋರಿಸದೇ ಅಜಿತ್ ಈಗ ಸಮಾಜ ಸೇವಕಿ ಜಯಶ್ರೀ ಜತೆ ಸಂಸಾರ ನಡೆಸುತ್ತಿದ್ದಾನೆಂದು ಪತ್ನಿ ದೂರಿದ್ದಾಳೆ. ದಾಕ್ಷಾಯಿಣಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಸೀಮಾಗೆ ಒಂದು ಹೆಣ್ಣು ಮಗು ಇದೆ. ಯೋಧನ ವಿರುದ್ಧ ದೂರು ದಾಖಲಾಗಿದೆ.