ಮಧ್ಯ ಪ್ರದೇಶ: ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಸಿನಿಮಾ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಸಿನಿಮಾದ ಹಾಡೊಂದು ಹಿಂದೂ ಧರ್ಮಕ್ಕೆ ನಿಂದಿಸುವ ಹಾಗೆ ಚಿತ್ರಿತವಾಗಿದೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಬಾಯ್ಕಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ʼಪಠಾಣ್ʼ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿಕೊಂಡು ಕುಣಿದಿದ್ದಾರೆ ಹಾಗೂ ಹಾಡಿನ ಸಾಹಿತ್ಯ ಹಿಂದೂ ಧರ್ಮವನ್ನು ಕೀಳಾಗಿ ತೋರಿಸುತ್ತದೆ ಎಂದು ʼಬೇಷರಂ ರಂಗ್ʼ ಹಾಡಿನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಶಾರುಖ್ ಖಾನ್ ಅಭಿನಯದ ಸಿನಿಮಾದ ಶೂಟಿಂಗ್ ಸೆಟ್ ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ, ಪ್ರತಿಭಟನೆ ನಡೆಸಿದ ಘಟನೆ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ರಾಜ್ ಕುಮಾರ್ ಹಿರಾನಿ ʼ ಡಂಕಿʼ ಸಿನಿಮಾದ ಚಿತ್ರೀಕರಣದ ಮಧ್ಯ ಪ್ರದೇಶದದಲ್ಲಿ ಕಳೆದ ಮೂರು ದಿನಗಳಿಂದ ಭೇದಘಾಟ್ ಮತ್ತು ಧುಂಧರ್ ಪ್ರದೇಶದಲ್ಲಿ ನಡೆಯುತ್ತಿದೆ. ಶುಕ್ರವಾರ ಶೂಟಿಂಗ್ ಸ್ಪಾಟ್ ಗೆ ಭಜರಂಗ ದಳ , ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಬಂದು ಶಾರುಖ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿ, ಚಿತ್ರೀಕರಣದ ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಬಳಿಕ ಪೊಲೀಸರು ಪ್ರತಿಭಟನಾನಿರತರನ್ನು ಸ್ಥಳದಿಂದ ಕಳುಹಿಸಿದ್ದಾರೆ.
ಶಾರುಖ್ ಖಾನ್ ಸೇರಿದಂತೆ ಚಿತ್ರ ತಂಡದ ಪ್ರಮುಖ ಕಲಾವಿದರು ಶೂಟಿಂಗ್ ನಲ್ಲಿ ಭಾಗಿಯಾಗಿಲ್ಲ. ಸಿನಿಮಾದ ಇತರ ದೃಶ್ಯಗಳು ಅಲ್ಲಿ ಚಿತ್ರೀಕರಣವಾಗುತ್ತಿತ್ತು ಎಂದು ವರದಿ ತಿಳಿಸಿದೆ.
2023 ರ ಜನವರಿ 25 ಕ್ಕೆ ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾ ತೆರೆಗೆ ಬರಲಿದೆ.