Advertisement

ಟಿಸಿ ಅಳವಡಿಕೆಯಷ್ಟೆ ಬೆಸ್ಕಾಂ ಕೆಲಸ ಅಲ್ಲ : ಎಇಇ ಕಿರಣ್‌ ರೆಡ್ಡಿ

03:45 PM Mar 21, 2022 | Team Udayavani |

ಚಿತ್ರದುರ್ಗ: ರೈತರ ಪಂಪ್‌ಸೆಟ್‌ಗಳಿಗೆ ಏಳು ಗಂಟೆಗಳ ತ್ರೀಫೇಸ್‌ ವಿದ್ಯುತ್‌ ಪೂರೈಸುವ ಎರಡು ಅವಧಿಯಲ್ಲಿ ಕೆಲ ವೇಳೆ ತಾಂತ್ರಿಕ ಕಾರಣಗಳಿಂದ ವಿದ್ಯುತ್‌ ಪೂರೈಸಲು ಸಮಸ್ಯೆ ಎದುರಾಗಬಹುದು. ಆಗ ಉಳಿದ ವಿದ್ಯುತ್‌ನ್ನು ಬೇರೊಂದು ಸಮಯಕ್ಕೆ ಹೊಂದಿಸಿ ಪೂರೈಸಬೇಕು ಎಂದು ಬೆಸ್ಕಾಂ ಎಇಇ ಕಿರಣ್‌ ರೆಡ್ಡಿ ಸೂಚಿಸಿದರು.

Advertisement

ನಗರದ ಬೆಸ್ಕಾಂ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ವಿದ್ಯುತ್‌ ಸರಬರಾಜು ಸೇರಿದಂತೆ ಕಾಮಗಾರಿಗಳ ಮೇಲ್ವಿಚಾರಣೆಯನ್ನು ನಡೆಸುತ್ತದೆ. ವಿದ್ಯುತ್‌ ಸೌಕರ್ಯಗಳ ಕುರಿತು ಯೋಜನೆ ತಯಾರಿಸಿ ಕೊಡುತ್ತದೆ. ಕೆಲಸಗಳನ್ನು ಕ್ಲಾಸ್‌ ಒನ್‌ ಗುತ್ತಿಗೆದಾರರ ಕಡೆಯಿಂದ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ರೈತರಿಗೆ ಟಿಸಿ ಅಳವಡಿಕೆ ಸೇರಿದಂತೆ ಎಲ್ಲಾ ವಿದ್ಯುತ್‌ ಕಾಮಗಾರಿಗಳನ್ನು ಮಾಡುವುದಿಲ್ಲ ಎಂದರು.

ಜಾನುಕೊಂಡ ಗ್ರಾಮದ ಬಸವರಾಜ್‌ ಎಂಬುವವರು 2012ರಲ್ಲಿ ಅಕ್ರಮ ಸಕ್ರಮದಲ್ಲಿ ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕಕ್ಕಾಗಿ ಹಣ ಕಟ್ಟಲಾಗಿದೆ. ಬಜೆಟ್‌ ಇಲ್ಲ ಎನ್ನುತ್ತಿದ್ದಾರೆ ಎಂದು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಎಇಇ ಕಿರಣ್‌ ರೆಡ್ಡಿ ಮಾತನಾಡಿ, ಈ ಬಗ್ಗೆ 2020-21 ರಲ್ಲಿ ಎರಡು ವರ್ಷಗಳಲ್ಲಿ ಅರ್ಹ ಫಲಾನುಭವಿಗಳು ಖುದ್ದು ಕಚೇರಿಯನ್ನು ಸಂಪರ್ಕಿಸಿ ವಿದ್ಯುತ್‌ ಸಂಪರ್ಕವನ್ನು ಕೊಳವೆಬಾವಿಗೆ ಪಡೆಯುವಂತೆ ಪತ್ರಿಕಾ ಪ್ರಕಟಣೆ ನೀಡಿದ್ದೇವೆ. ಮಾರ್ಚ್‌ ಅಂತ್ಯದ ಅವಧಿ ಇದಾಗಿದೆ. ಈ ಕೆಲಸವನ್ನು ಹೊಸದಾಗಿ ಟೆಂಡರ್‌ ಆದ ಬಳಿಕ ವಿದ್ಯುತ್‌ ಲೈನ್‌ ನೀಡುವ ಕೆಲಸ ಮಾಡಲಾಗುತ್ತದೆ. 2012ರಲ್ಲಿ ಬಾಕಿ ಉಳಿದಿರುವ 795 ಅಕ್ರಮ-ಸಕ್ರಮ ಫಲಾನುಭವಿಗಳಿಗೆ ಮೇ ತಿಂಗಳ ಬಜೆಟ್‌ ಅನುದಾನದಲ್ಲಿ ಮೊದಲ ಆದ್ಯತೆಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಹಂಪನೂರು ಗ್ರಾಮದ ಮಂಜುನಾಥ್‌ರವರು ಕೊಳವೆಬಾವಿಗೆ ಟಿಸಿ ಒದಗಿಸುಂತೆ 2014 ರಲ್ಲಿ ಹಣ ಕಟ್ಟಲಾಗಿದ್ದರ ಬಗ್ಗೆ ಗಮನ ಸೆಳೆದರು. ಎರಡು ತಿಂಗಳ ಅವಧಿಯಲ್ಲಿ ವಿದ್ಯುತ್‌ ಪರಿವರ್ತಕ ಒದಗಿಸುವುದಾಗಿ ಎಇಇ ಆಶ್ವಾಸನೆ ನೀಡಿದರು.ಬಹದ್ದೂರ್‌ಘಟ್ಟ ಗ್ರಾಮದ ಬ್ಯಾರಲ್‌ ಬಳಿಯ 100 ಕೆವಿ ವಿದ್ಯುತ್‌ ಪರಿವರ್ತಕದಲ್ಲಿ ಓವರ್‌ಲೋಡ್‌ ಆಗಿರುವುದು ಗಮನಕ್ಕೆ ಬಂದಿದೆ. ಏಪ್ರಿಲ್‌ ಅಥವಾ ಮೇ ತಿಂಗಳ ಆರಂಭದಲ್ಲಿ ಟೆಂಡರ್‌ ಪ್ರಕ್ರಿಯೆಗಳು ನಡೆಯುತ್ತವೆ. ಆ ಬಳಿಕ ಹೆಚ್ಚುವರಿ ವಿದ್ಯುತ್‌ ಪರಿವರ್ತಕ ಅಳವಡಿಸಲಾಗುತ್ತದೆ ಈ ಕುರಿತು ಎಸ್ಟಿಮೇಟ್‌ ನೀಡುವಂತೆ ಭರಮಸಾಗರ ಎಸ್‌ಒ ತಿಪ್ಪೇಸ್ವಾಮಿಯವರಿಗೆ ತಿಳಿಸಿದರು.

Advertisement

ಹಿರೇಗುಂಟನೂರು ವ್ಯಾಪ್ತಿಯ ಟಗರನಹಟ್ಟಿ ಬಳಿ ರೈತರೊಬ್ಬರ ಜಮೀನಿನ ಟಿಸಿ ಪದೇ ಪದೇ ಸಮಸ್ಯೆ ಎದುರಿಸುತ್ತಿದೆ. ಕುರಿತು ಗುಂಟನೂರು ಮತ್ತು ಜಾನುಕೊಂಡ ಶಾಖಾ ಕಚೇರಿಗಳನ್ನು ಸಂಪರ್ಕಿಸಿದರೆ ಒಬ್ಬರು ಮತ್ತೂಬ್ಬರ ಮೇಲೆ ಸಬೂಬು ಹೇಳುತ್ತಿದ್ದಾರೆ. ಕಳೆದ 15 ದಿನಗಳಿಂದ ತೋಟಕ್ಕೆ ನೀರು ಹಾಯಿಸಲು ಆಗದಿರುವ ಕುರಿತು ಎಇಇ ಗಮನ ಸೆಳೆಯಲಾಯಿತು. ಟಗರನಹಟ್ಟಿ ಬಳಿಯ ರೈತರ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಶಾಖಾಧಿಕಾರಿ ಶಿವಯೋಗಿ ಅವರಿಗೆ ಸೂಚಿಸಿದರು.

ಗ್ರಾಹಕರ ಹಲವು ಸಮಸ್ಯೆಗಳನ್ನು ಅಧಿ ಕಾರಿಗಳೇ ಪರಿಹರಿಸಿದರು. ಪ್ರತಿ ತಿಂಗಳು ಮೂರನೇ ಶನಿವಾರ ಗ್ರಾಹಕರ ಸಂವಾದ ಸಭೆ ನಡೆಯುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಬೆಸ್ಕಾಂನ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗದ ಇಇ ಜಯಣ್ಣ, ಎಸ್‌ಇ ಜಗದೀಶ್‌, ಪಂಡರಹಳ್ಳಿ ಬೆಸ್ಕಾಂ ಶಾಖಾ ಕಚೇರಿ ಎಸ್‌ಒ ರವಿಕುಮಾರ್‌, ಭರಮಸಾಗರ ಶಾಖೆಯ ತಿಪ್ಪೇಸ್ವಾಮಿ, ತುರುವನೂರು ಶಾಖೆಯ ಗಿರೀಶ ರೆಡ್ಡಿ, ಹಿರೇಗುಂಟನೂರು ಎಸ್‌ಒ ಶಿವಯೋಗಿ, ಭೀಮಸಮುದ್ರ ಎಸ್‌ಒ ದಕ್ಷಿಣಮೂರ್ತಿ, ಸಿರಿಗೆರೆ ಎಸ್‌ಒ ಪಾಲಾಕ್ಷ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next