ಯಾದಗಿರಿ: ವಿದ್ಯುತ್ ಸರಿಯಾದ ರೀತಿಯಲ್ಲಿ ಪೂರೈಸುತ್ತಿದ್ದೇವೆ ಎಂದು ನಿಮ್ಮ ಹೆಂಡತಿ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳಿ, ಸುಳ್ಳು ಮಾಹಿತಿ ಸಂಗ್ರಹಿಸಿ ಸಭೆಯಲ್ಲಿ ಬಂದು ಮಾತಾಡುವುದು ಸರಿಯಲ್ಲ, ಮಾನವೀಯತೆ ದೃಷ್ಠಿಯಿಂದ ಕೆಲಸ ಮಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ7 ಗಂಟೆ ವಿದ್ಯುತ್ ನೀಡುವ ರೀತಿ ಕಾರ್ಯನಿರ್ವಹಿಸಿ ಎಂದು ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೆ.ಪಿ.ಟಿ.ಸಿ.ಎಲ್ ಮತ್ತು ಬೆಸ್ಕಾಂ ಅಧಿಕಾರಿಗಳೊಡನೆ ನಡೆದ ಸಭೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯ ವಿಷಯದಲ್ಲಿ ಅಧಿಕಾರಿಗಳಿಗೆ ಸಚಿವರು ತರಾಟೆಗೆ ತೆಗೆದುಕೊಂಡರು.
ರೈತರು ಅನ್ನ ಬೆಳೆಯುತ್ತಾರೆ, ನಮ್ಮ ಹೊಟ್ಟೆಗೆ ಅನ್ನ ಹಾಕುವ ಕೈಗಳಿಗೆ ನಾವೆಂದು ದ್ರೋಹ ಬಗೆಯಬಾರದು. ೭ ಗಂಟೆ ವಿದ್ಯುತ್ ಪೂರೈಕೆ ಮಾಡುವಲ್ಲಿ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಸೂಕ್ತ ಕ್ರಮ ತೆಗೆದುಕೊಂಡು ಆರ್ಥಿಕ ನೆರವು ನೀಡಲು ಸಿದ್ಧವಾಗಿದೆ, ಆದರೆ ಅಧಿಕಾರಿಗಳು ಮತ್ತು ಲೈನ್‌ಮೆನ್‌ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಹೀಗೆ ಮುಂದುವರೆದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಾನವೀಯ ದೃಷ್ಠಿಯಿಂದ ಕೆಲಸ ಮಾಡಿ, ಅಧಿಕಾರಿಗಳು ರೈತರ ಹಿತ ಕಾಪಾಡುವತ್ತ ಶ್ರಮಿಸಬೇಕು. ಸಬ್ ದಿವಿಜನ್‌ಗಳಲ್ಲಿ ಇರುವ ಸಮಸ್ಯೆಗಳನ್ನು ಪಟ್ಟಿ ಸಿದ್ಧಪಡಿಸಿ ನೀಡಿ ಎಂದು ಸೂಚಿಸಿದರು.
ಲೈನ್‌ಮೆನ್‌ಗಳು ರೈತರೊಡನೆ ಫೊನ್‌ನಲ್ಲಿ ಸರಿಯಾದ ರೀತಿ ಮಾತನಾಡುವುದಿಲ್ಲ, ಮನ ಬಂದಂತೆ ವರ್ತಿಸುವುದು ಸರಿಯಲ್ಲ. ರೈತರ ಹಿತಾಸಕ್ತಿ ಕಾಪಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. 7 ಗಂಟೆ ವಿದ್ಯುತ್ ಪೂರೈಸುವಲ್ಲಿ ಅಧಿಕಾರಿಗಳ ಇಚ್ಛಾಶಕ್ತಿ ಪ್ರಮುಖವಾದದ್ದು ಎಂದು ಹೇಳಿದರು.
ಸಭೆಯಲ್ಲಿ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಹಾಗೂ ಯಾದಗಿರಿ, ಶಹಾಪುರ, ಸುರಪುರ ಮತ್ತು ಗುರುಮಿಠಕಲ್ ಬೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.