ಬೀರೂರು: ದೆಹಲಿಯಲ್ಲಿ ಏಳು ವರ್ಷಗಳ ಹಿಂದೆ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆಗೆ ಸಂಬಂ ಧಿಸಿದಂತೆ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ, ನಿರ್ಭಯಾ ಆತ್ಮಕ್ಕೆ ಶಾಂತಿ ದೊರಕಿಸಿದೆ ಎಂದು ಬೀರೂರು ಮಾದಿಗ ಸಮಾಜ ಅಧ್ಯಕ್ಷ ಆನಂದ್ ಹೇಳಿದರು.
ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಸರಸ್ವತಿಪುರಂ ಬಡಾವಣೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿ ಮಾತನಾಡಿದರು.
ಹೆಣ್ಣು ಮಗಳೊಬ್ಬಳು ಒಬ್ಬಂಟಿಯಾಗಿ ರಾತ್ರಿ ಸಮಯದಲ್ಲಿ ಸಂಚರಿಸಿದಾಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಅರ್ಥಪೂರ್ಣವಾಗುತ್ತದೆ ಎಂಬ ಮಹಾತ್ಮ ಗಾಂಧೀಜಿಯವರ ಕನಸು ಕನಸಾಗಿಯೇ ಉಳಿದಿದೆ. ನ್ಯಾಯಾಲಯ ಹೆಣ್ಣಿಗೆ ಆಗಿದ್ದ ಅನ್ಯಾಯಕ್ಕೆ ಮತ್ತು ಅನ್ಯಾಯ ಮಾಡಿದವರಿಗೆ ತಕ್ಕ ಪಾಠ ಕಲಿಸಿ, ಮುಂದೆ ಇಂತಹ ಅಚಾತುರ್ಯಗಳಿಗೆ ಕಡಿವಾಣ ಹಾಕಿದೆ. ಅಲ್ಲದೇ, ಮುಂದೆ ನಡೆಯದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಹೆಣ್ಣು ಅಬಲೆಯಲ್ಲ. ಅವಳು ಒಲಿದರೆ ನಾರಿ-ಮುನಿದರೆ ಮಾರಿ ಎಂಬ ನಾಣ್ಣುಡಿಯನ್ನು ನೆನೆದು, ಒಬ್ಬ ಗಂಡಿಗೆ ತಾಯಿ, ಹೆಂಡತಿ, ತಂಗಿ, ಅಕ್ಕ ಹೀಗೆ ನಾನಾ ರೀತಿಯ ರೂಪ ತಾಳುವ ಆಕೆಯನ್ನು ಪೂಜಿಸಬೇಕೆ ಹೊರತು, ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ನ್ಯಾಯಾಲಯ ಹೆಣ್ಣಿನ ಶೋಷಣೆಯ ವಿರುದ್ಧ ತೆಗೆದುಕೊಂಡಿರುವ ತೀರ್ಪು ಶ್ಲಾಘನೀಯ ಎಂದರು.
ಪುರಸಭೆ ನೂತನ ಸದಸ್ಯೆ ಶಾರದಾ ರುದ್ರಪ್ಪ ಮಾತನಾಡಿ, 13 ದಿನಗಳ ಕಾಲ ಆ ಹೆಣ್ಣು ಮಗಳು ಅನುಭವಿಸಿದ ಕಷ್ಟವನ್ನು ಆ ಕಾಮುಕರು ಅನುಭವಿಸಬೇಕಿತ್ತು. ಅಂದೇ ಅವರಿಗೆ ಗುಂಡು ಹಾರಿಸಿ ನಿರ್ಭಯಾಳಿಗೆ ನ್ಯಾಯ ಒದಗಿಸಬಹುದಿತ್ತು. ಆದರೆ 7 ವರ್ಷಗಳ ಬಳಿಕ ಗಲ್ಲು ಶಿಕ್ಷೆ ವಿಧಿಸಿರುವುದು ದೇಶದ ಮಹಿಳೆಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಿದೆ. ನಮ್ಮ ಕಾವಲಿಗೆ ದೇಶದ ಕಾನೂನು ಬದ್ಧವಾಗಿದೆ. ನ್ಯಾಯಾಲಯದ ತೀರ್ಪು ಮುಂದೆ ಯಾರೊಬ್ಬರೂ ಹೆಣ್ಣಿನ ಮೇಲೆ ಅತ್ಯಾಚಾರಕ್ಕೆ ಮುಂದಾಗುವಾಗ ಯೋಚಿಸಬೇಕು ಎಂದು ನಿಟ್ಟುಸಿರು ಬಿಟ್ಟರು.
ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದ ಅಭಿಲಾಷ, ಆಶಾ, ಸರೋಜಾ, ಶೈಲಜಾ, ಶಿವಮ್ಮ, ಶ್ರೀಗಂಧ, ಜಯಮ್ಮ, ದೀಪಾ ಮತ್ತು ಪ್ರತಾಪ, ನವೀನ್, ಸುರೇಶ್, ಮದನ್, ಕಿರಣ್, ಶಿವು ಹಾಗೂ ಮೈಲಾರಲಿಂಗ ಸ್ವಾಮಿ ಯುವಕ ಸಂಘದ ಸದಸ್ಯರು, ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.